×
Ad

ʼಭೀಮ ಕೋರೆಗಾಂವ್ʼ ಚಿತ್ರ ಬಿಡುಗಡೆ ಮಾಡಿದ ಎಂಎಲ್‌ಸಿ ಅನಿಲ್‌ ಕುಮಾರ್‌

Update: 2026-05-13 23:40 IST

ಕೋಲಾರ: ಮಹಾರ್‌ ಸೈನಿಕರ ಶೌರ್ಯ ಪ್ರಸ್ತುತಪಡಿಸುವ ‘ಭೀಮ ಕೋರೆಗಾಂವ್’ ಎಐ ಚಿತ್ರವನ್ನು ಬುಧವಾರ ನಗರದ ಟಿ.ಚನ್ನಯ್ಯ ರಂಗಮಂದಿರದಲ್ಲಿ ನಡೆದ ಕಾರ್ಯಕ್ರಮದಲ್ಲಿ ವಿಧಾನ ಪರಿಷತ್‌ ಸದಸ್ಯ ಎಂ.ಎಲ್‌.ಅನಿಲ್‌ ಕುಮಾರ್‌ ಬಿಡುಗಡೆ ಮಾಡಿದರು.

ಭೀಮಾ ನದಿ ತೀರದಲ್ಲಿ ನಡೆದಂಥ ಯುದ್ಧದ ಹಿನ್ನೆಲೆಯ ಮೇಲೆ ನಿರ್ಮಿತವಾದ ಎಐ ಆಧಾರಿತ ಚಿತ್ರ ಇದಾಗಿದೆ. ರುಜಾಕಿ ಸ್ಟುಡಿಯೋಸ್ ಆಶ್ರಯದಲ್ಲಿ ಶೋಭನ್ ಬಾಬು ನಿರ್ದೇಶನ, ಚಿತ್ರಕತೆ,‌ ಸಂಕಲನ ಮಾಡಿದ್ದಾರೆ. ದಲಿತ ಮಹಾ ಸೇನೆಯ ರಾಜ್ಯಾಧ್ಯಕ್ಷ ಖಾದ್ರಿಪುರ ಬಾಬು ನಿರ್ಮಿಸಿದ್ದಾರೆ. ‌ಸುಮಾರು 37 ನಿಮಿಷಗಳ ಈ ಸಿನಿಮಾವನ್ನು ಜನಪ್ರತಿನಿಧಿಗಳು ಹಾಗೂ ದಲಿತ ಮುಖಂಡರು ವೀಕ್ಷಿಸಿದರು.

ಸಂವಿಧಾನ ಶಿಲ್ಪಿ ಡಾ.ಬಿ.ಆರ್‌.ಅಂಬೇಡ್ಕರ್ ಅವರು ಹಳೆಯ ದಾಖಲೆ‌ ಪತ್ರವೊಂದನ್ನು ವೀಕ್ಷಣೆ ಮಾಡುವುದರೊಂದಿಗೆ ಸಿನಿಮಾ ಆರಂಭವಾಗುತ್ತದೆ. ಮಹಾರ್‌ ಸೈನಿಕರ ಸಾಹಸ ಮೆಚ್ಚಿ ಬ್ರಿಟನ್‌ನ ಫ್ರಾನ್ಸಿಸ್ ಸ್ಟಂಟೌನ್ ಬರೆದಿದ್ದ ಪತ್ರವೊಂದನ್ನು ಅವರು ನೋಡುತ್ತಾರೆ. ಕೊನೆಯಲ್ಲಿ ಅಂಬೇಡ್ಕರ್‌ ಅವರ ಪ್ರೇರಣಾದಾಯಕ ಮಾತಿನೊಂದಿಗೆ ಸಿನಿಮಾ ಮುಗಿಯುತ್ತದೆ. 

ಸಿನಿಮಾ ವೀಕ್ಷಣೆ ಬಳಿಕ ಮಾತನಾಡಿದ ಎಂಎಲ್‌ಸಿ ಎಂ.ಎಲ್‌.ಅನಿಲ್ ‌ಕುಮಾರ್, ಮೈನವಿರೇಳಿಸುವ ಸಿನಿಮಾ‌ವಿದು. 37 ನಿಮಿಷಗಳಲ್ಲಿ ‌ಇಡೀ ಭೀಮ ಕೋರೆಗಾಂವ್‌ ಇತಿಹಾಸ ತೋರಿಸಿದ್ದಾರೆ. ಅಂಬೇಡ್ಕರ್ ಅವರನ್ನು‌ ಅದ್ಭುತವಾಗಿ‌ ಚಿತ್ರಿಕರಿಸಿದ್ದಾರೆ. ಸಿದ್ಧನಾಯಕ ಪಾತ್ರವೂ ಚೆನ್ನಾಗಿ ‌ಮೂಡಿಬಂದಿದೆ. ಅದ್ಭುತವಾಗಿ ಕಲ್ಪನೆಯಿಂದ ಕೂಡಿದೆ ಎಂದು ಮೆಚ್ಚುಗೆ ವ್ಯಕ್ತಪಡಿಸಿದರು.

ದೊಡ್ಡ ದೊಡ್ಡ ನಿರ್ದೇಶಕರು ಮಾಡದ ಕೆಲಸವನ್ನು ಶೋಭನ್ ಬಾಬು ಮಾಡಿದ್ದಾರೆ.‌ ಯಾವುದೇ ‌ದೊಡ್ಡ ನಿರ್ದೇಶಕರು, ನಿರ್ಮಾಪಕರಿಗೆ ‌ಕಡಿಮೆ ಇಲ್ಲ. ಮುಂದೆ ಒಳ್ಳೆಯ ಅವಕಾಶಗಳು ಸಿಗಲಿವೆ. ಇದು ಪ್ರೀ ರಿಲೀಸ್ ಇವೆಂಟ್. ಈ ಚಿತ್ರವನ್ನು ಎಲ್ಲರಿಗೂ ತೋರಿಸಬೇಕು ಎಂದರು.

ಪರ್ತಕರ್ತ ಕೆ.ಎಸ್.ಗಣೇಶ್ ಮಾತನಾಡಿ, ಅಂಬೇಡ್ಕರ್ ಅವರ ಆತ್ಮ‌ ಖಂಡಿತ ಸಂತೃಪ್ತಿಗೊಂಡಿರುತ್ತದೆ. ಅದಕ್ಕೆ ಕಾರಣ ನಿರ್ದೇಶಕ ಶೋಭನ್‌ ಬಾಬು ಕಥೆ ಕಟ್ಟಿಕೊಟ್ಟಿರುವ ರೀತಿ. ಇತಿಹಾಸದಲ್ಲಿ ಹೇಳಲಾಗದ ಹಲವಾರು ಕಥೆಗಳಿವೆ. ಅಂಬೇಡ್ಕರ್ ದಾಖಲೆ ಪರಿಶೀಲಿಸುವಾಗ ಅದರಲ್ಲಿ ‌ಈ ಭೀಮ ‌ಕೋರೆಗಾಂವ್‌ ವಿಚಾರ ಗೊತ್ತಾಗುತ್ತದೆ. ಇಂಥ ಸಿನಿಮಾ ‌ಮಾಡಲು ಬಂದವರು ಕಡಿಮೆ. ಈಗ ಅದ್ಭುತವಾಗಿ ಎಐ ಸಿನಿಮಾ ಕಟ್ಟಿ ಕೊಟ್ಟಿದ್ದಾರೆ. ರೋಮಾಂಚನ ಉಂಟು ಮಾಡುತ್ತದೆ. ಎಲ್ಲಾ ವಿದ್ಯಾರ್ಥಿಗಳಿಗೆ ಈ ಸಿನಿಮಾ ತೋರಿಸಬೇಕು ಎಂದು ಹೇಳಿದರು.

ನಿರ್ಮಾಪಕ ಖಾದ್ರಿಪುರ ಬಾಬು ಮಾತನಾಡಿ, ಈಗ ಗಣ್ಯರಿಗೆ ಮಾತ್ರ ಈ ಚಿತ್ರ ತೋರಿಸಲಾಗಿದೆ. ಮುಂದೆ ಎಲ್ಲರಿಗೂ ತೋರಿಸುತ್ತೇವೆ, ಪ್ರಚಾರ ಕೂಡ ಮಾಡುತ್ತೇವೆ. ನಿಜವಾಗಿಯೂ ಇಂಥ ಸಿನಿಮಾ ಮಾಡಲು 300 ಕೋಟಿ‌ ರೂ. ಬೇಕಾಗುತ್ತದೆ. ಆದರೆ, ಎಐ ಮೂಲಕ ಕೇವಲ 37 ನಿಮಿಷಗಳಲ್ಲಿ ಕಥೆ ಕಟ್ಟಿಕೊಡಲಾಗಿದೆ ಎಂದರು.

ನಿರ್ದೇಶಕ ಶೋಭನ್ ಬಾಬು ಮಾತನಾಡಿ, ಅಂಬೇಡ್ಕರ್ ಕುರಿತು ಸಿನಿಮಾ ಮಾಡಬೇಕೆಂದು ತಂದೆ ಹೇಳಿದ್ದರು. ಈ ಸಂಬಂಧ ನಾನು ಆಲೋಚನೆಯಲ್ಲಿ ತೊಡಗಿದ್ದೆ. ಅಂಬೇಡ್ಕರ್‌ ಅವರನ್ನು ಒಳಗೊಂಡ ಭೀಮ ಕೋರೆಗಾಂವ್ ಸಿನಿಮಾ ಮಾಡಿದೆ ಎಂದು ತಿಳಿಸಿದರು.

ಕಾಂಗ್ರೆಸ್‌ ಗ್ರಾಮಾಂತರ ಬ್ಲಾಕ್‌ ಅಧ್ಯಕ್ಷ ಮೈಲಾಂಡಹಳ್ಳಿ‌ ಮುರಳಿ, ನಗರ ಬ್ಲಾಕ್‌ ಅಧ್ಯಕ್ಷ ಸೈಯದ್‌ ಅಫ್ಸರ್, ಕೋಮುಲ್‌ ನಿರ್ದೇಶಕ ರಮೇಶ್‌ ಚಂಜಿಮಲೆ, ಸಿಂಡಿಕೇಟ್‌ ಸದಸ್ಯ ಸೀಸಂದ್ರ ಗೋಪಾಲಗೌಡ,‌ ಸಮಾಜ ಕಲ್ಯಾಣ ಇಲಾಖೆ ಜಂಟಿ ನಿರ್ದೇಶನ ಎಂ.ಶ್ರೀನಿವಾಸನ್‌, ಮುಖಂಡರಾದ ಸಂಪಂಗೆರೆ ಮುನಿರಾಜು, ರಾಜಕುಮಾರ್, ಮಾರ್ಜೇನಹಳ್ಳಿ ಬಾಬು, ಬೆಳಗಾನಹಳ್ಳಿ ಮುನಿವೆಂಕಟಪ್ಪ, ಡಿಪಿಎಸ್ ಮುನಿರಾಜು ಪಾಲ್ಗೊಂಡಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News