Kolar | ಪತ್ನಿ-ಮಕ್ಕಳ ಸಾವು : ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಪತಿ ಮೃತ್ಯು
ಸಾಂದರ್ಭಿಕ ಚಿತ್ರ
ಕೋಲಾರ : ಇತ್ತೀಚಿಗೆ ಕೃಷಿ ಹೊಂಡದಲ್ಲಿ ಬಿದ್ದು ತಾಯಿ ತನ್ನ ಇಬ್ಬರು ಮಕ್ಕಳೊಂದಿಗೆ ಆತ್ಮಹತ್ಯೆಗೆ ಶರಣಾಗಿದ್ದ ಘಟನೆ ಕೋಲಾರ ತಾಲ್ಲೂಕು ಬೆಗ್ಲಿಬೆಣಜೇನಹಳ್ಳಿ ಗ್ರಾಮದಲ್ಲಿ ನಡೆದಿತ್ತು. ತಾಯಿ ಪ್ರಮೀಳ (40) ಮಗಳು ಸ್ವಪ್ನ (22) ಹಾಗೂ ಮಗ ಚರಣ್ (18) ಸಾವಿಗೀಡಾಗಿದ್ದರು. ತನ್ನ ಹೆಂಡತಿ-ಮಕ್ಕಳ ಸಾವಿನ ನೋವು ತಾಳಲಾರದೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದ ಮನೆಯ ಯಜಮಾನ ಸುರೇಶ್ ಚಿಕಿತ್ಸೆ ಫಲಕಾರಿಯಾಗದೆ ಇಂದು (ಮಂಗಳವಾರ) ಮೃತಪಟ್ಟಿದ್ದಾರೆ.
ಶನಿವಾರ ಕಳೆ ಔಷಧ ಕುಡಿದು ಆತ್ಮಹತ್ಯೆಗೆ ಯತ್ನಿಸಿ ಕೋಲಾರ ಜಿಲ್ಲಾಸ್ಪತ್ರೆಯಲ್ಲಿ ಸುರೇಶ್ ಚಿಕಿತ್ಸೆ ಪಡೆಯುತ್ತಿದ್ದರು. ಐಸಿಯುವಿನಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಸುರೇಶ್ ಎರಡು ದಿನಗಳ ನಂತರ ಇಂದು ಬೆಳಿಗ್ಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ.
ಬೆಗ್ಲಿಬೆಣಜೇನಹಳ್ಳಿ ಗ್ರಾಮದ ಸುರೇಶ್ ಮತ್ತು ಪ್ರಮೀಳ ದಂಪತಿಗಳು ಹಾಗೂ ಅವರ ಇಬ್ಬರು ಮಕ್ಕಳಾದ ಸ್ವಪ್ನ ಹಾಗೂ ಚರಣ್ ಸುಂದರ ಸಂಸಾರ. ಆಟೋ ಓಡಿಸಿ ಜೀವನ ನಡೆಸುತ್ತಿದ್ದ ಸುರೇಶ್‌ಗೆ ಮನೆ ಕೆಲಸ ಮಾಡಿಕೊಂಡು ತನ್ನ ಗಂಡನಿಗೆ ಹೆಗಲು ಕೊಟ್ಟಿದ್ದವಳು ಪತ್ನಿ ಪ್ರಮೀಳ. ಪುಟ್ಟ ಸಂಸಾರ ಚೆನ್ನಾಗಿಯೇ ನಡೆಯುತ್ತಿತ್ತು, ಆದರೆ ಕಳೆದ ಕೆಲವು ತಿಂಗಳುಗಳ ಹಿಂದೆ ಮನೆ ಕಟ್ಟಿಲು ಸ್ವಲ್ಪ ಸಾಲ ಮಾಡಿದ್ದರು. ಮಕ್ಕಳ ವಿದ್ಯಾಬ್ಯಾಸ ಸೇರಿದಂತೆ ಹಲವು ಕಾರಣಗಳಿಗೆ ಖಾಸಗಿ ಪೈನಾನ್ಸ್, ಕೈ ಸಾಲ ಸೇರಿ ಹಲವೆಡೆ ಸುಮಾರು 15 ಲಕ್ಷ ರೂಪಾಯಿವರೆಗೆ ಸಾಲ ಮಾಡಿದ್ದರು. ಸಾಲದ ಹೊರೆ ಹೆಚ್ಚಾಗಿದ್ದರ ಪರಿಣಾಮ ಹಾಗೂ ಸಾಲಗಾರರ ಕಿರುಕುಳದಿಂದ ಪ್ರಮೀಳ ಬೇಸತ್ತಿದ್ದರು ಎನ್ನಲಾಗಿದೆ.
ಸಾಲ ತೀರಿಸಲು ಬೇರೆ ದಾರಿ ಕಾಣದೇ ಹೋದಾಗ ಗಂಡ 24 ಜುಲೈ ಶನಿವಾರ ರಾತ್ರಿ ಮನೆಗೆ ಬಂದಿರಲಿಲ್ಲ. ಈ ವೇಳೆ ತನ್ನ ಮಕ್ಕಳನ್ನು ಕರೆದುಕೊಂಡು ಹೋಗಿ ಬೆಗ್ಲಿಬೆಣಜೇನಹಳ್ಳಿಯ ಪಾಪಣ್ಣ ಎಂಬುವರ ಕೃಷಿ ಹೊಂಡದಲ್ಲಿ ಬಿದ್ದು ಆತ್ಮಹತ್ಯೆ ಮಾಡಿಕೊಂಡಿದ್ದರು.
ಮೃತ ಕುಟುಂಬ ಯಾವುದೇ ಮೈಕ್ರೋ ಫೈನಾನ್ಸ್ ನಿಂದ ಸಾಲ ಪಡೆದಿರುವ ಬಗ್ಗೆ ಮಾಹಿತಿ ಸಿಕ್ಕಿಲ್ಲ, ಆದರೆ, ಕೈ ಸಾಲ ಮಾಡಿಕೊಂಡಿರುವ ಬಗ್ಗೆ ತಿಳಿದು ಬಂದಿದೆ. ಹೆಚ್ಚಿನ ಮಾಹಿತಿಗಾಗಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ತನಿಖೆಯಿಂದ ಸತ್ಯಾಂಶ ಹೊರಬೀಳಲಿದೆ.
ಡಾ.ಎಂ.ಆರ್.ರವಿ, ಜಿಲ್ಲಾಧಿಕಾರಿ.ಕೋಲಾರ.