Kolar | ವ್ಯಸನಮುಕ್ತ ಸಮಾಜ ನಿರ್ಮಾಣಕ್ಕೆ ಯುವಜನತೆ ಮುಂದಾಗಲಿ: ಪ್ರೊ.ಬಿ.ಕೆ.ರವಿ

ವ್ಯಸನಮುಕ್ತ ದಿನಾಚರಣೆ

Update: 2026-08-01 11:24 IST

ಕೋಲಾರ: ಯುವಶಕ್ತಿಯೇ ದೇಶದ ನಿಜವಾದ ಆಸ್ತಿ. ವ್ಯಸನಮುಕ್ತ ಸಮಾಜ ನಿರ್ಮಾಣದಲ್ಲಿ ಯುವಜನತೆ ಮುಂಚೂಣಿಯಲ್ಲಿ ನಿಲ್ಲಬೇಕು ಎಂದು ಬೆಂಗಳೂರು ಉತ್ತರ ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ರವಿ ಕರೆ ನೀಡಿದರು.

ಕೋಲಾರದ ಮಂಗಸಂದ್ರದ ಸುವರ್ಣಗಂಗೆ ಆವರಣದಲ್ಲಿ ಶುಕ್ರವಾರ ಬೆಂಗಳೂರು ಉತ್ತರ ವಿಶ್ವವಿದ್ಯಾಲಯ, ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ, ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಕರ್ನಾಟಕ ರಾಜ್ಯ ಮದ್ಯಪಾನ ಸಂಯಮ ಮಂಡಳಿ ಹಾಗೂ ವಿವಿಧ ಇಲಾಖೆಗಳ ಸಂಯುಕ್ತ ಆಶ್ರಯದಲ್ಲಿ ಡಾ. ಮಹಾಂತ ಶಿವಯೋಗಿಗಳ ಜನ್ಮದಿನದ ಅಂಗವಾಗಿ ಆಯೋಜಿಸಿದ್ದ ವ್ಯಸನಮುಕ್ತ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಭಾರತದಲ್ಲಿ ಶೇ.65ರಷ್ಟು ಯುವಜನಸಂಖ್ಯೆ ಇದ್ದು, ಈ ಯುವಶಕ್ತಿಯೇ ದೇಶದ ಅಭಿವೃದ್ಧಿಯ ಶಕ್ತಿಯಾಗಿದೆ. ಯಾವುದೇ ವ್ಯಸನ ವ್ಯಕ್ತಿಯಷ್ಟೇ ಅಲ್ಲ, ಕುಟುಂಬ ಮತ್ತು ಸಮಾಜವನ್ನೂ ಹಾಳು ಮಾಡುತ್ತದೆ. ಆದ್ದರಿಂದ ಯುವಕರು ಮಾದಕ ವ್ಯಸನಗಳಿಂದ ದೂರವಿದ್ದು ಆರೋಗ್ಯಕರ ಸಮಾಜ ನಿರ್ಮಾಣಕ್ಕೆ ಕೈಜೋಡಿಸಬೇಕು ಎಂದು ಕರೆ ನೀಡಿದರು.

ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ನ್ಯಾ. ಪ್ರಭು ಎನ್. ಬಡಿಗೇರ್ ಮಾತನಾಡಿ, ಕಾನೂನು ಅರಿವು ಪ್ರತಿಯೊಬ್ಬರಿಗೂ ಅಗತ್ಯವಾಗಿದೆ. ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ತಡೆಗೆ ಜಾರಿಯಲ್ಲಿರುವ ಪೊಕ್ಸೊ (POCSO) ಕಾಯ್ದೆ ಅತ್ಯಂತ ಕಠಿಣವಾಗಿದ್ದು, ಅಪರಾಧ ಸಾಬೀತಾದರೆ 20 ವರ್ಷಗಳವರೆಗೆ ಶಿಕ್ಷೆ ವಿಧಿಸುವ ಅವಕಾಶವಿದೆ ಎಂದು ತಿಳಿಸಿದರು.

ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ಶ್ರೀನಿವಾಸ್ ಮಾತನಾಡಿ, ಧೂಮಪಾನ, ಮದ್ಯಪಾನ ಹಾಗೂ ಮಾದಕ ವಸ್ತುಗಳ ವ್ಯಸನವು ಮೆದುಳಿನ ಮೇಲೆ ದುಷ್ಪರಿಣಾಮ ಬೀರುತ್ತದೆ. ಸ್ನೇಹಿತರ ಒತ್ತಡ ಅಥವಾ ಕುತೂಹಲಕ್ಕಾಗಿ ಯಾವುದೇ ದುಶ್ಚಟಗಳನ್ನು ಆರಂಭಿಸಬಾರದು. ಈಗಾಗಲೇ ವ್ಯಸನಕ್ಕೆ ಒಳಗಾಗಿದ್ದರೆ ವೈದ್ಯಕೀಯ ಚಿಕಿತ್ಸೆ ಮತ್ತು ಕೌನ್ಸಿಲಿಂಗ್ ಮೂಲಕ ಅದರಿಂದ ಹೊರಬರಬಹುದು ಎಂದು ಸಲಹೆ ನೀಡಿದರು.

ಜಿಲ್ಲಾ ಆರ್‌ಸಿಎಚ್ ಅಧಿಕಾರಿ ಡಾ. ಚಾರಿಣಿ ಮಾತನಾಡಿ, ಮಾದಕ ವಸ್ತುಗಳ ಸೇವನೆಯಿಂದ ಯಕೃತ್ತು, ಮೂತ್ರಪಿಂಡಗಳ ವೈಫಲ್ಯ, ಬಂಜೆತನ ಹಾಗೂ ರೋಗನಿರೋಧಕ ಶಕ್ತಿ ಕುಂದುವಂತಹ ಗಂಭೀರ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಒಂದೇ ಇಂಜೆಕ್ಷನ್ ಹಂಚಿಕೊಳ್ಳುವುದರಿಂದ ಎಚ್‌ಐವಿ ಸೇರಿದಂತೆ ಮಾರಕ ಸೋಂಕುಗಳು ಹರಡುವ ಅಪಾಯವೂ ಹೆಚ್ಚಿದೆ ಎಂದು ಎಚ್ಚರಿಸಿದರು.

ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಎಲ್. ಶ್ರೀನಿವಾಸ್ ಮಾತನಾಡಿ, ವಿದ್ಯಾವಂತ ಯುವಕರಲ್ಲಿಯೂ ದುಶ್ಚಟಗಳ ಪ್ರಮಾಣ ಹೆಚ್ಚುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದೆ. ಯುವಕರು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಂಡು ಸಮಾಜಕ್ಕೆ ಮಾದರಿಯಾಗಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಹಿರಿಯ ಸಹಾಯಕ ನಿರ್ದೇಶಕಿ ಡಾ. ಕೆ.ಎನ್. ಕವನ ಅವರು ಪ್ರಾಸ್ತಾವಿಕ ನುಡಿಗಳನ್ನಾಡಿದರು. ಬೆಂಗಳೂರು ಉತ್ತರ ವಿಶ್ವವಿದ್ಯಾನಿಲಯದ ಕುಲಸಚಿವರು ಮೌಲ್ಯಮಾಪನ ಹಾಗೂ ನಿರ್ದೇಶಕಿ ಸುವರ್ಣಗಂಗೆ ಕ್ಯಾಂಪಸ್ ಹಾಗೂ ಪ್ರೊ ಕುಮುದ, ವಿತ್ತಾಧಿಕಾರಿ ಬಾಹುಬಲಿ, ಸಿಬ್ಬಂದಿಗಳು, ಎಲ್ಲಾ ಪ್ರಾಧ್ಯಪಕರು ಸೇರಿದಂತೆ ವಿವಿಧ ಇಲಾಖೆಗಳ ಗಣ್ಯರು ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News