ಮುಲ್ಲಾ ಅಂದರೆ ಮುಸ್ಲಿಂ ಅಲ್ಲ ಎಂದು ಗೂಗಲ್‌ನಲ್ಲಿ ನೋಡಿದ್ದೇನೆ : ಸಿ.ಟಿ.ರವಿ
ಸಿ.ಟಿ.ರವಿ
ಕೊಪ್ಪಳ: ನೀಟ್ ಪರೀಕ್ಷೆ ಅಕ್ರಮ ವಿರೋಧಿಸಿ ದಿಲ್ಲಿಯಲ್ಲಿ ನಡೆದ ಪ್ರತಿಭಟನೆ ಕುರಿತು ನೀಡಿದ್ದ ತಮ್ಮ ಹೇಳಿಕೆಯನ್ನು ಬಿಜೆಪಿ ವಿಧಾನಪರಿಷತ್ ಸದಸ್ಯ ಸಿ.ಟಿ. ರವಿ ಮತ್ತೊಮ್ಮೆ ಸಮರ್ಥಿಸಿಕೊಂಡಿದ್ದಾರೆ.
ಸೋಮವಾರ ಪಟ್ಟಣದ ಪರಿವೀಕ್ಷಣಾ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ʼಮುಲ್ಲಾ ಅಂದರೆ ಮುಸ್ಲಿಂ ಅಲ್ಲ ಅಂತಾ ಗೂಗಲ್‌ನಲ್ಲಿ ನೋಡಿದ್ದೇನೆ. ನಾನು ಯಾವುದೇ ಸಮುದಾಯವನ್ನು ಅವಹೇಳನ ಮಾಡುವ ಉದ್ದೇಶದಿಂದ ಮಾತನಾಡಿಲ್ಲʼ ಎಂದು ತಿಳಿಸಿದರು.
“ಶಾಲೆಯಲ್ಲಿ ಶಿಕ್ಷಕರು ಕೂಡ ‘ಎದೆ ಸೀಳಿದರೆ ಅಕ್ಷರ ಇಲ್ಲ’ ಎಂದು ಹೇಳುತ್ತಾರೆ. ಹಾಗಾದರೆ ಶಿಕ್ಷಕರನ್ನೂ ಕಾಂಗ್ರೆಸ್‌ನವರು ಜೈಲಿಗೆ ಹಾಕ್ತಾರಾ?” ಎಂದು ಪ್ರಶ್ನಿಸಿದ ಅವರು, ತಮ್ಮ ಹೇಳಿಕೆಯಲ್ಲಿ ಯಾವುದೇ ತಪ್ಪಿಲ್ಲ ಎಂದು ಸಮರ್ಥಿಸಿಕೊಂಡರು.
ಹಿಂದುತ್ವದ ಪರ ಹಾಗೂ ಅನ್ಯಾಯದ ವಿರುದ್ಧ ಹೋರಾಡಲು ತಾವು ಸದಾ ಸಿದ್ಧವಾಗಿದ್ದು, “ಅದಕ್ಕಾಗಿ ಜೈಲಿಗೆ ಹೋಗಬೇಕಾದರೂ ಹೆದರುವುದಿಲ್ಲ. ನಮಗೆ ಜನತಾ ನ್ಯಾಯಾಲಯ ಮತ್ತು ಪ್ರಜಾಪ್ರಭುತ್ವದ ನ್ಯಾಯಾಲಯವೇ ಅಂತಿಮ” ಎಂದು ಸಿ.ಟಿ. ರವಿ ಹೇಳಿದರು.