Koppal | ವಚನಗಳ ಪಾಲನೆಯಿಂದ ಮಾತ್ರ ಸಾರ್ಥಕ ಬದುಕು ಸಾಧ್ಯ: ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ
ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಆಚರಣೆ
ಕೊಪ್ಪಳ: 12ನೇ ಶತಮಾನದ ಪ್ರಮುಖ ಶಿವಶರಣರಾದ ಹಡಪದ ಅಪ್ಪಣ್ಣನವರು ರಚಿಸಿದ ವಚನಗಳನ್ನು ಕೇವಲ ಜಯಂತಿಯ ದಿನಗಳಲ್ಲಿ ಸ್ಮರಿಸುವುದಷ್ಟೇ ಸಾಲದು. ಅವುಗಳನ್ನು ಜೀವನದಲ್ಲಿ ಅಳವಡಿಸಿಕೊಂಡಾಗ ಮಾತ್ರ ಬದುಕು ಸಾರ್ಥಕವಾಗುತ್ತದೆ ಎಂದು ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ ಹೇಳಿದರು.
ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಹಾಗೂ ಕೊಪ್ಪಳ ನಗರಸಭೆ ಇವರ ಸಂಯುಕ್ತಾಶ್ರಯದಲ್ಲಿ ಬುಧವಾರ ನಗರದ ಸಾಹಿತ್ಯ ಭವನದಲ್ಲಿ ಆಯೋಜಿಸಿದ್ದ ಶಿವಶರಣ ಹಡಪದ ಅಪ್ಪಣ್ಣ ಜಯಂತಿ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಹಡಪದ ಅಪ್ಪಣ್ಣನವರು ಜಗಜ್ಯೋತಿ ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಕರ್ತವ್ಯನಿಷ್ಠೆಯಿಂದ ಸೇವೆ ಸಲ್ಲಿಸಿದ್ದು, ಜಾತಿ-ಲಿಂಗ ಭೇದವಿಲ್ಲದೆ ಮಾನವೀಯ ಮೌಲ್ಯಗಳನ್ನು ಪ್ರತಿಪಾದಿಸಿದ ಮಹಾನ್ ಶರಣರಾಗಿದ್ದರು. ಸುಮಾರು 242ಕ್ಕೂ ಅಧಿಕ ವಚನಗಳನ್ನು ರಚಿಸುವ ಮೂಲಕ ಸಮಾಜಕ್ಕೆ ಆದರ್ಶ ಸಂದೇಶ ನೀಡಿದ್ದಾರೆ. ಅನುಭವ ಮಂಟಪದಲ್ಲಿ ಅವರ ಕೊಡುಗೆ ಅಪಾರವಾಗಿದೆ ಎಂದು ಹೇಳಿದರು.
ಸಮಾಜದ ಅಭಿವೃದ್ಧಿಗೆ ಶಿಕ್ಷಣ ಅತ್ಯಗತ್ಯವಾಗಿದ್ದು, ಹೆಣ್ಣುಮಕ್ಕಳು ಹಾಗೂ ಯುವಕರು ಉನ್ನತ ಶಿಕ್ಷಣದತ್ತ ಹೆಚ್ಚು ಗಮನ ಹರಿಸಬೇಕು. ಸರ್ಕಾರದ ಸೌಲಭ್ಯಗಳನ್ನು ಸಮರ್ಪಕವಾಗಿ ಬಳಸಿಕೊಂಡು ಸಮಾಜದ ಮುಖ್ಯವಾಹಿನಿಯಲ್ಲಿ ಮುನ್ನಡೆಯಬೇಕು ಎಂದು ಕರೆ ನೀಡಿದರು.
ಕೊಪ್ಪಳ ಗವಿಶ್ರೀ ಸಂಸ್ಥಾನದ ಬಿಸರಳ್ಳಿ ಶಾಖಾ ಮಠದ ಶ್ರೀ ಶಿವಶಾಂತವೀರ ಸ್ವಾಮೀಜಿ ಮಾತನಾಡಿ, ಹಡಪದ ಅಪ್ಪಣ್ಣನವರ ವಚನಗಳು ಎಂದಿಗೂ ಆರದ ಜ್ಞಾನದ ದೀಪವಾಗಿವೆ. ಅವರು ಕೇವಲ ಕ್ಷೌರಿಕ ವೃತ್ತಿ ಮಾಡಲಿಲ್ಲ; ಮನುಷ್ಯನ ಅಹಂಕಾರ, ವಿಕಾರ ಮತ್ತು ಅಜ್ಞಾನವನ್ನು ನಿವಾರಿಸುವ ಮಹತ್ತರ ಕಾರ್ಯವನ್ನು ತಮ್ಮ ತತ್ವಗಳ ಮೂಲಕ ಮಾಡಿದರು. ಅವರ ಭೌತಿಕ ಜೀವನ ಅಂತ್ಯಗೊಂಡಿದ್ದರೂ, ಅವರ ಆದರ್ಶಗಳು ಇಂದಿಗೂ ಜೀವಂತವಾಗಿವೆ ಎಂದರು.
ಬಸವಣ್ಣನವರ ಆಪ್ತ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸಿದ ಹಡಪದ ಅಪ್ಪಣ್ಣನವರು ‘ಬಸವಪ್ರಿಯ ಚೆನ್ನಬಸವಣ್ಣ’ ಅಂಕಿತನಾಮದಲ್ಲಿ ವಚನಗಳನ್ನು ರಚಿಸಿದ್ದು, ಸರಳ, ಸಾತ್ವಿಕ ಹಾಗೂ ಮೌಲ್ಯಾಧಾರಿತ ಬದುಕಿನ ಸಂದೇಶವನ್ನು ಸಮಾಜಕ್ಕೆ ನೀಡಿದ್ದಾರೆ ಎಂದು ಹೇಳಿದರು.
ಕರ್ನಾಟಕ ಚಲನಚಿತ್ರ ಅಕಾಡೆಮಿಯ ಸದಸ್ಯೆ ಸಾವಿತ್ರಿ ಮಂಜುಮದಾರ ವಿಶೇಷ ಉಪನ್ಯಾಸ ನೀಡಿ, ಹಡಪದ ಅಪ್ಪಣ್ಣನವರು 12ನೇ ಶತಮಾನದ ವಚನ ಚಳುವಳಿಯ ಪ್ರಮುಖ ಹರಿಕಾರರಾಗಿದ್ದು, ಬಸವಣ್ಣನವರ ಆಪ್ತ ಸಹಚರರಾಗಿದ್ದರು. ಅವರ ವಚನಗಳಲ್ಲಿ ಸರಳತೆ, ಸಹಜತೆ ಮತ್ತು ಮಾನವೀಯ ಮೌಲ್ಯಗಳು ಸ್ಪಷ್ಟವಾಗಿ ಮೂಡಿಬಂದಿವೆ ಎಂದು ತಿಳಿಸಿದರು.
ಅಪ್ಪಣ್ಣನವರು ವಿಜಯಪುರ ಜಿಲ್ಲೆಯ ಬಸವನ ಬಾಗೇವಾಡಿ ತಾಲೂಕಿನ ಮಸಬಿನಾಳ ಗ್ರಾಮದವರಾಗಿದ್ದು, ಸುಮಾರು 250 ವಚನಗಳನ್ನು ರಚಿಸಿದ್ದಾರೆ. ಅವರ ಪತ್ನಿ ಲಿಂಗಮ್ಮನವರೂ ‘ಅಪ್ಪಣ್ಣಪ್ರಿಯ ಚೆನ್ನಬಸವಣ್ಣ’ ಅಂಕಿತನಾಮದಲ್ಲಿ 114 ವಚನಗಳನ್ನು ರಚಿಸಿರುವುದು ವಚನ ಸಾಹಿತ್ಯದ ಶ್ರೀಮಂತ ಪರಂಪರೆಗೆ ಸಾಕ್ಷಿಯಾಗಿದೆ. ಇಂತಹ ಮಹನೀಯರ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸುವ ಉದ್ದೇಶದಿಂದ ಸರ್ಕಾರ ಮತ್ತು ಜಿಲ್ಲಾಡಳಿತ ಪ್ರತಿವರ್ಷ ಜಯಂತಿ ಆಚರಿಸುತ್ತಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ಹಿರಿಯ ಸಾಹಿತಿಗಳಾದ ಡಾ. ಮಹಾಂತೇಶ ಮಲ್ಲನಗೌಡ್ರ, ಜಿಲ್ಲಾ ಬಸವ ಸಮಿತಿ ಅಧ್ಯಕ್ಷರಾದ ಬಸವರಾಜ ಬಳೊಳ್ಳಿ, ಜಿಲ್ಲಾ ವಕೀಲರ ಸಂಘದ ಮಾಜಿ ಅಧ್ಯಕ್ಷರಾದ ಎ.ವಿ ಕಣವಿ, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕರಾದ ಕರ್ಣಕುಮಾರ, ಜಿಲ್ಲಾ ಹಡಪದ ಸಮಾಜದ ಗೌರವ ಅಧ್ಯಕ್ಷರಾದ ಮಂಜುನಾಥ ಅಂದ್ರಾಳ, ತಾಲ್ಲೂಕಾಧ್ಯಕ್ಷರಾದ ಮೌನೇಶ ಹಡಪದ, ಸಮಾಜದ ಮುಖಂಡರಾದ ಮಲ್ಲಿಕಾರ್ಜುನ್ ಮಿಟಿಕೆರಿ, ವಿ.ಬಿ.ಎಸ್ ವೀರಾಪುರ್, ಮುತ್ತು ಹುಬ್ಬಳ್ಳಿ, ಹನುಮಂತಪ್ಪ ಮುಂದೆ ಮುನಿರಾಬಾದ್, ನಿಂಗಪ್ಪ ಅಂದ್ರಾಳ, ಬಸಪ್ಪ ಹಲಗೇರಿ, ದ್ಯಾಮಣ್ಣ ಮಾದನೂರ್, ಈಶಪ್ಪ ಮುದ್ದಾಬಳ್ಳಿ, ಶರಣಪ್ಪ ಇಟಗಿ, ಸುರೇಖಾ ಅಂದಪ್ಪ ಬೆಟಿಗೇರಿ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.
ಬಿ.ಎನ್ ಹೊರಪೇಟಿ ಅವರು ಕಾರ್ಯಕ್ರಮ ನಿರೂಪಿಸಿದರು. ಅನ್ನಪೂರ್ಣಮ್ಮ ಮನ್ನಾಪುರ ಹಾಗೂ ತಂಡದವರು ಕಾರ್ಯಕ್ರಮದಲ್ಲಿ ನಾಡಗೀತೆ, ವಚನ ಮತ್ತು ಸಂಗೀತ ಗಾಯನ ಮಾಡಿದರು.