Kanakagiri | ಲೇಔಟ್ ಅನುಮೋದನೆಗೆ 3 ಲಕ್ಷ ರೂ.ಗಳ ಬೇಡಿಕೆ ಆರೋಪ
ಕನಕಗಿರಿ ಪಪಂ ಮುಖ್ಯಾಧಿಕಾರಿಯ ಆಡಿಯೊ ವೈರಲ್
ಕನಕಗಿರಿ : ಲೇಔಟ್ ಅನುಮೋದನೆಗೆ 3 ಲಕ್ಷ ರೂ. ಲಂಚಕ್ಕೆ ಬೇಡಿಕೆ ಇಟ್ಟಿರುವ ಪಟ್ಟಣ ಪಂಚಾಯತ್ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರದ್ದು ಎನ್ನಲಾದ 44.09 ಸೆಕೆಂಡ್ ಆಡಿಯೋ ವೈರಲ್ ಆಗಿ ತಾಲೂಕಿನ್ಯಾದಂತ ಭಾರೀ ಚರ್ಚೆಗೆ ಕಾರಣವಾಗಿದೆ.
‘ನನ್ನ-ನಿನ್ನ ಅಂಡರ್ ಸ್ಟಾಂಡಿಂಗ್’ ಎಂದು ನೇರವಾಗಿ ಹಣ ಕೇಳಿರುವ ಅಧಿಕಾರಿಯ ಧ್ವನಿ ಕೇಳಿ ಸಾರ್ವಜನಿಕ ವಲಯದಲ್ಲಿ ಆಕ್ರೋಶ ವ್ಯಕ್ತವಾಗಿದೆ.
ಆಡಿಯೋ ಹೇಗೆ ಲೀಕ್ ಆಯ್ತು :
ಮುಖ್ಯಾಧಿಕಾರಿ ಲೇಔಟ್ ಮಾಲಕರೊಬ್ಬರ ಜೊತೆ ಫೋನ್ ನಲ್ಲಿ ಮಾತನಾಡಿರುವ ಆಡಿಯೋವನ್ನು ಆ ವ್ಯಕ್ತಿ ಆಕಸ್ಮಿಕವಾಗಿ ವಾಟ್ಸಾಪ್ ಗ್ರೂಪ್‌ಗೆ ಕಳುಹಿಸಿದ್ದಾರೆ. ಗ್ರೂಪ್‌ನಲ್ಲಿದ್ದ ಹಲವರು ಆಡಿಯೋ ಕೇಳಿದ ತಕ್ಷಣವೇ ಅದನ್ನು ಡಿಲೀಟ್ ಮಾಡಲಾಗಿದೆ. ಆದರೆ ಅಷ್ಟರಲ್ಲೇ ಒಬ್ಬಿಬ್ಬರು ಆಡಿಯೋ ಸೇವ್ ಮಾಡಿಕೊಂಡಿದ್ದು, ಇದೀಗ ಸಾಮಾಜಿಕ ಜಾಲತಾಣದಲ್ಲಿ ವೇಗವಾಗಿ ಹರಿದಾಡುತ್ತಿದೆ. ಇದು ಮುಖ್ಯಾಧಿಕಾರಿಗೆ ಮುಳುವಾಗಿದೆ.
ಆಡಿಯೋದಲ್ಲಿ ಏನಿದೆ : 44 ಸೆಕೆಂಡ್ ಇರುವ ಆಡಿಯೋದಲ್ಲಿ ಮುಖ್ಯಾಧಿಕಾರಿ ನೇರವಾಗಿ ಹಣದ ವಿಚಾರ ಪ್ರಸ್ತಾಪಿಸುತ್ತಾರೆ. ‘ಲೇಔಟ್‌ನಲ್ಲಿ ಅಡ್ಜಸ್ಟ್‌ಮೆಂಟ್ ಮಾಡಿಕೊಳ್ಳೋಣ. ಅದು ನನ್ನ-ನಿನ್ನ ಅಂಡರ್ ಸ್ಟಾಂಡಿಂಗ್ ಅಷ್ಟೇ. ಮೂರು ಬೇಕು. ಅದನ್ನು ನೀನು ಸಾಲ ಅಂತನೇ ತಿಳ್ಕೋ’ ಎಂದು ಮೊದಲು ಹೇಳಿದ್ದಾರೆ.
‘ಮುಂದೆ ನಾನು-ನೀನು ಲೇಔಟ್‌ನಲ್ಲಿ ಅಡ್ಜಸ್ಟ್ ಮಾಡಿಕೊಳ್ಳೋಣ. ಇದೆಲ್ಲ ನನಗೆ-ನಿನಗೆ ಬಿಟ್ಟು ಯಾರಿಗೂ ಗೊತ್ತಾಗಬಾರದು ನೋಡು. ಮೂರನೇ ವ್ಯಕ್ತಿಗೆ ಯಾರಿಗೂ ಗೊತ್ತಾಗಬಾರದು. ಇದು ನನಗೆ ತುಂಬಾ ಅರ್ಜೆಂಟ್ ಇದೆ. ಕೂಡಲೇ ರೆಡಿ ಮಾಡು. ಪ್ಲೀಸ್’ ಎಂದು ಮನವಿ ಮಾಡಿದ್ದಾರೆ.
ಈ ವಿಷಯ ಯಾರಿಗೂ ಗೊತ್ತಾಗಬಾರದು ಎಂದು 2 ಬಾರಿ ಒತ್ತಿ ಹೇಳಿರುವುದು ಮತ್ತು ಹಣದ ಅರ್ಜೆಂಟ್ ಎಂದು ಒತ್ತಾಯಿಸಿರುವುದು ಆಡಿಯೋದಲ್ಲಿದೆ.
ಸಾರ್ವಜನಿಕರ ಆಕ್ರೋಶ : ಆಡಿಯೋ ವೈರಲ್ ಆಗುತ್ತಿದ್ದಂತೆ ‘ಭ್ರಷ್ಟಾಚಾರ ನಿಲ್ಲಿಸಿ ಮುಖ್ಯಾಧಿಕಾರಿ ಅಮಾನತುಗೊಳಿಸಿ’ ಎಂದು ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಶುರುವಾಗಿದೆ. ನಗರಾಡಳಿತದಲ್ಲಿನ ಭ್ರಷ್ಟಾಚಾರ ಮತ್ತೆ ಬಯಲಿಗೆ ಬಂದಿದ್ದು, ಸಾಮಾನ್ಯ ಜನರಿಗೆ ಅನ್ಯಾಯವಾಗುತ್ತಿದೆ ಎಂಬ ಮಾತುಗಳು ಕೇಳಿ ಬರುತ್ತಿವೆ.
ಲೋಕಾಯುಕ್ತ ಪೊಲೀಸರು ಸ್ವಯಂಪ್ರೇರಿತ ದೂರು ದಾಖಲಿಸಿಕೊಳ್ಳುವ ಸಾಧ್ಯತೆಯಿದೆ ಎಂದು ಮೂಲಗಳು ತಿಳಿಸಿವೆ.‘3 ಲಕ್ಷಕ್ಕೆ ನೇರ ಬೇಡಿಕೆ, ಗುಪ್ತವಾಗಿ ಇರಲಿ’ ಎಂಬ ಮಾತುಗಳಿರುವ ಈ ಆಡಿಯೋ ಪಟ್ಟಣ ಪಂಚಾಯತ್ ಆಡಳಿತದ ಮೇಲೆ ಗಂಭೀರ ಪ್ರಶ್ನೆ ಹುಟ್ಟುಹಾಕಿದೆ. ತಪ್ಪಿತಸ್ಥ ಅಧಿಕಾರಿ ವಿರುದ್ಧ ಸರಕಾರ ಏನು ಕ್ರಮ ಕೈಗೊಳ್ಳುತ್ತದೆ ಎಂಬುದನ್ನು ಕಾದು ನೋಡಬೇಕಿದೆ.
ಪಪಂ ಮುಖ್ಯಾಧಿಕಾರಿ ಲಕ್ಷ್ಮಣ್ ಕಟ್ಟಿಮನಿ ಅವರಿಗೆ ಶೋಕಾಸ್ ನೋಟಿಸ್ ಜಾರಿ ಮಾಡಿದ್ದೇವೆ. 24 ಗಂಟೆಯೊಳಗೆ ಉತ್ತರ ನೀಡುವಂತೆ ಸೂಚಿಸಲಾಗಿದೆ. ಉತ್ತರ ಬಂದ ನಂತರ ಕೆಎಸ್‌ಆರ್ ನಿಯಮದ ಪ್ರಕಾರ ಮುಂದಿನ ಕ್ರಮ ಜರುಗಿಸಲಾಗುವುದು.
ಮಂಜುನಾಥ ಗುಂಡೂರು ಜಿಲ್ಲಾ ಯೋಜನ ನಿರ್ದೇಶಕರು ನಗರ ಅಭಿವೃದ್ಧಿಕೋಶ ಕೊಪ್ಪಳ