ಗಂಗಾವತಿ | ಸಂವಿಧಾನ ಪೀಠಿಕೆ ಓದಿ ಮಗುವಿಗೆ ನಾಮಕರಣ
ಗಂಗಾವತಿ : ಸಾಮಾನ್ಯವಾಗಿ ಮಗುವಿನ ನಾಮಕರಣ ಸಂದರ್ಭದಲ್ಲಿ ಶುಭ ಘಳಿಗೆ, ಮಹೂರ್ತ, ದಿನಾಂಕ ಹಾಗೂ ರಾಶಿ–ನಕ್ಷತ್ರ ನಿಗದಿಪಡಿಸಿ ಪುರೋಹಿತರ ಸಮ್ಮುಖದಲ್ಲಿ ಕಾರ್ಯಕ್ರಮ ನಡೆಸುವುದು ವಾಡಿಕೆ. ಆದರೆ ಗಂಗಾವತಿ ತಾಲ್ಲೂಕಿನ ಒಂದು ಕುಟುಂಬ ಸಂವಿಧಾನದ ಪೀಠಿಕೆ ಓದಿ ಹಾಗೂ ಸಂವಿಧಾನ ಪಾಲಿಸುವ ಪ್ರತಿಜ್ಞೆ ಕೈಗೊಳ್ಳುವ ಮೂಲಕ ಮಗುವಿನ ನಾಮಕರಣ ಮಾಡಿ ಗಮನ ಸೆಳೆದಿದೆ.
ಗಂಗಾವತಿ ವಿಧಾನಸಭಾ ಕ್ಷೇತ್ರದ ಯಲಮಗೇರಿ ಗ್ರಾಮದ ದಲಿತ ಸಮುದಾಯದ ಮುಖಂಡ ಹಾಗೂ ಗುತ್ತಿಗೆದಾರ ರಾಮಣ್ಣ ಚೌಡಿ–ಹನುಮಂತಮ್ಮ ದಂಪತಿ ತಮ್ಮ ಮೊಮ್ಮಗಳ ನಾಮಕರಣವನ್ನು ವಿಭಿನ್ನ ರೀತಿಯಲ್ಲಿ ನೆರವೇರಿಸಿದರು. ತಮ್ಮ ಪುತ್ರ ಮಂಜುನಾಥ ಹಾಗೂ ಸೊಸೆ ಯಲ್ಲಮ್ಮ ದಂಪತಿಗೆ ಜನಿಸಿದ ಮಗುವಿನ ನಾಮಕರಣ ಕಾರ್ಯಕ್ರಮದಲ್ಲಿ ಸಂವಿಧಾನ ಪೀಠಿಕೆ ಓದುವ ಮೂಲಕ ಆಚರಣೆ ನಡೆಸಿದರು.
ಕೊಪ್ಪಳ ತಾಲ್ಲೂಕಿನ ಹಟ್ಟಿ ಗ್ರಾಮದಲ್ಲಿ ನಡೆದ ಕಾರ್ಯಕ್ರಮದಲ್ಲಿ ಮೊದಲು ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಲಾಯಿತು. ಬಳಿಕ ಮಗುವನ್ನು ತೊಟ್ಟಿಲಿಗೆ ಹಾಕಿ ಸಂವಿಧಾನದ ಪೀಠಿಕೆ ಓದಿ, ಸಂವಿಧಾನವನ್ನು ಪಾಲಿಸುವ ಪ್ರತಿಜ್ಞೆ ಕೈಗೊಳ್ಳಲಾಯಿತು. ನಂತರ ಮಗುವಿಗೆ ‘ಹಂಸ’ ಎಂದು ನಾಮಕರಣ ಮಾಡಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ರಾಮಣ್ಣ ಚೌಡಿ, “ನಾನು ಮತ್ತು ನನ್ನ ಕುಟುಂಬ ಭಗವಂತನಿಗಿಂತಲೂ ಹೆಚ್ಚು ಸಂವಿಧಾನದ ಮೇಲೆ ನಂಬಿಕೆ ಇಟ್ಟಿದ್ದೇವೆ. ನಮಗೆ ಸಂವಿಧಾನವೇ ಭಗವಂತನಂತಿದ್ದು, ಅದರ ಸಮ್ಮುಖದಲ್ಲಿ ಮೊಮ್ಮಗಳ ನಾಮಕರಣ ಮಾಡಿದ್ದೇವೆ” ಎಂದು ಹೇಳಿದರು.