ಕನಕಗಿರಿ | ಪತ್ರಕರ್ತರ ಮೇಲೆ ಹಲ್ಲೆ ಆರೋಪ : ತಪ್ಪಿತಸ್ಥರ ವಿರುದ್ದ ಕ್ರಮಕ್ಕೆ ಆಗ್ರಹ
ಕನಕಗಿರಿ: ಪಟ್ಟಣ ಪಂಚಾಯಿತಿ ಸದಸ್ಯ ಅನಿಲಕುಮಾರ ಬಿಜ್ಜಳ ಹಾಗೂ ಪಟ್ಟಣ ಪಂಚಾಯಿತಿ ಅಧ್ಯಕ್ಷೆಯ ಪತಿ ಟಿ.ಜೆ. ರಾಮಚಂದ್ರ ಮತ್ತು ಅವರ ಬೆಂಬಲಿಗರ ಮಧ್ಯೆ ನಡೆದ ಗಲಾಟೆಯನ್ನು ವರದಿ ಮಾಡಲು ತೆರಳಿದ್ದ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ಖಂಡನೀಯ. ತಮ್ಮ ಮೊಬೈಲ್ ನಲ್ಲಿ ವಿಡಿಯೋ, ಪೋಟೋ ತೆಗೆಯುವ ಸಮಯದಲ್ಲಿ ಗಲಾಟೆಯ ನಿರತ ಗುಂಪಿನವರು ಪತ್ರಕರ್ತರ ಮೇಲೆ ಹಲ್ಲೆ ಮಾಡಿದ್ದಾರೆ ಎಂದು ಸಂಘದ ಅಧ್ಯಕ್ಷ ಸೋಮಶೇಖರಯ್ಯ ಎಂ.ಹಿರೇಮಠ ಅವರು ತಿಳಿಸಿದರು.
ಹಲ್ಲೆ ಘಟನೆಯನ್ನು ಖಂಡಿಸಿ ಇಲ್ಲಿನ ಕಾರ್ಯನಿರತ ಪತ್ರಕರ್ತರ ಸಂಘದ ಸದಸ್ಯರು ತಹಶೀಲ್ದಾರ್ ಕಚೇರಿಯ ಶಿರಸ್ತೇದಾರ ಅನಿತಾ ಇಂಡಿ ಅವರಿಗೆ ಮನವಿ ಸಲ್ಲಿಸಿದ ನಂತರ ಅವರು ಮಾತನಾಡಿದರು.
ಗಲಾಟೆ ನಡೆಯುತ್ತಿದ್ದ ಘಟನೆಯನ್ನು ಮೊಬೈಲ್‌ನಲ್ಲಿ ವಿಡಿಯೋ ಹಾಗೂ ಪೋಟೋ ತೆಗೆಯುವಾಗ ಗಲಾಟೆ ನಿರತರು ಪತ್ರಕರ್ತರಾದ ಮಧುಸೂದನರೆಡ್ಡಿ, ಪ್ರಹ್ಲಾದರೆಡ್ಡಿ ಹಾಗೂ ಶ್ರೀನಿವಾಸ ಪೂಜಾರ ಅವರನ್ನು ಅವಾಚ್ಯ ಶಬ್ದಗಳಿಂದ ನಿಂದನೆ ಮಾಡಿ ಹಲ್ಲೆ ಮಾಡಿದ್ದಾರೆ. ಅಲ್ಲದೆ ಮೊಬೈಲ್ ಕಸಿದುಕೊಂಡು ಪೋಟೋ, ವಿಡಿಯೋ ಅಳಿಸಿಹಾಕಿದ್ದಾರೆ. ಇದು ಪ್ರಜಾಪ್ರಭುತ್ವದ ಕಗ್ಗೊಲೆ ಮಾಡಿದಂತಾಗಿದೆ. ಅಲ್ಲದೆ ಪತ್ರಿಕಾ ಸ್ವಾತಂತ್ರ್ಯ ವನ್ನು ಹತ್ತಿಕ್ಕುವ ಕುತಂತ್ರ ಅಡಗಿದೆ ಎಂದು ದೂರಿದರು.
ಘಟನೆಯ ಸ್ಥಳದಲ್ಲಿ ಪೊಲೀಸರು ಇದ್ದರೂ ಪತ್ರಕರ್ತರ ಮೇಲೆ ಹಲ್ಲೆ ನಡೆದಿರುವುದು ತೀವ್ರ ಖಂಡನೀಯ ಎಂದರು.
ಘಟನೆಯನ್ನು ಸೂಕ್ತ ರೀತಿಯಲ್ಲಿ ತನಿಖೆ ನಡೆಸಿ ಹಲ್ಲೆ ಮತ್ತು ದೌರ್ಜನ್ಯಕ್ಕೆ ಒಳಗಾದ ಪತ್ರಕರ್ತರಿಗೆ ನ್ಯಾಯ ಕೊಡಿಸಬೇಕೆಂದು ಎಂದು ಆಗ್ರಹಿಸಿದ್ದಾರೆ.
ಪತ್ರಕರ್ತರಾದ ವಿಜಯಭಾಸ್ಕರರೆಡ್ಡಿ, ಪ್ರಹ್ಲಾದರೆಡ್ಡಿ ಮಾದಿನಾಳ, ಮಧುಸೂದನರೆಡ್ಡಿ, ಶ್ರೀನಿವಾಸ ಪೂಜಾರ, ಹೊನ್ನೂರುಹುಸೇನ ಬೇಲ್ದಾರ್, ಹುಲಗಪ್ಪ ಉಪ್ಪಾರ, ಚೇತನ ಯಾದವ,ಮಹಾಂತೇಶ, ಅಯ್ಯಪ್ಪ ಇತರರು ಇದ್ದರು.