ಗಂಗಾವತಿ: ತಾಲೂಕಿನ ಆನೆಗೊಂದಿ ಭಾಗದ ತೆಂಬಾದ ಸರ್ವೆ ನಂ.1ರ ವ್ಯಾಪ್ತಿಯಲ್ಲಿ ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸುತ್ತಮುತ್ತಲಿನ ಗ್ರಾಮಗಳಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ. ಹುಲಿ ಕಾಣಿಸಿಕೊಂಡಿರುವ ಕುರಿತು ಸ್ಥಳೀಯವಾಗಿ ಮಾಹಿತಿ ಹರಿದಾಡುತ್ತಿದ್ದು, ಅರಣ್ಯ ಇಲಾಖೆ ಸಾರ್ವಜನಿಕರಿಗೆ ಮುನ್ನೆಚ್ಚರಿಕೆ ಸೂಚನೆಗಳನ್ನು ನೀಡಿದೆ.

ಮಲ್ಲಾಪುರ, ರಾಂಪುರ, ರಂಗಾಪುರ, ಲಕ್ಷ್ಮೀಪುರ, ಆನೆಗೊಂದಿ ಸೇರಿದಂತೆ ಸುತ್ತಮುತ್ತಲಿನ ಗ್ರಾಮಗಳ ಜನರು ಎಚ್ಚರಿಕೆಯಿಂದ ಇರುವಂತೆ ಅರಣ್ಯ ಇಲಾಖೆ ಮನವಿ ಮಾಡಿದೆ. ಸಾರ್ವಜನಿಕರು ಒಬ್ಬೊಬ್ಬರಾಗಿ ಸಂಚರಿಸದೆ, ರೈತರು ಹೊಲ-ಗದ್ದೆಗಳಿಗೆ ತೆರಳುವಾಗ ಗುಂಪಿನಲ್ಲಿ ಹೋಗುವಂತೆ ಸೂಚಿಸಲಾಗಿದೆ.

ಸಾಕುಪ್ರಾಣಿಗಳ ಮೇವಿಗಾಗಿ ಅರಣ್ಯ ಪ್ರದೇಶದತ್ತ ತೆರಳದಂತೆ ಹಾಗೂ ವಿಶೇಷವಾಗಿ ಸಂಜೆ ಮತ್ತು ರಾತ್ರಿ ವೇಳೆ ಅನಗತ್ಯವಾಗಿ ಮನೆಯಿಂದ ಹೊರಬರದಂತೆ ಅಧಿಕಾರಿಗಳು ಎಚ್ಚರಿಕೆ ನೀಡಿದ್ದಾರೆ.

ಹುಲಿಯನ್ನು ಪತ್ತೆಹಚ್ಚಿ ಸುರಕ್ಷಿತವಾಗಿ ಸೆರೆಹಿಡಿಯಲು ಅರಣ್ಯ ಇಲಾಖೆಯ ಅಧಿಕಾರಿಗಳು ಹಾಗೂ ಸಿಬ್ಬಂದಿ ವಿರುಪಾಪುರ ಗಡ್ಡಿಯ ಫಾರೆಸ್ಟ್ ಐಬಿಯಲ್ಲಿ ಬೀಡುಬಿಟ್ಟು ಕಾರ್ಯತಂತ್ರ ರೂಪಿಸಿದ್ದಾರೆ. ಸಿಸಿಎಫ್ ಬಳ್ಳಾರಿ, ಡಿಸಿಎಫ್ ಕೊಪ್ಪಳ, ವಿಜಯನಗರ ಮತ್ತು ಬಳ್ಳಾರಿ ಸೇರಿದಂತೆ ಎಸಿಎಫ್ ಹಾಗೂ ಆರ್‌ಎಫ್‌ಒ ಮಟ್ಟದ ಅಧಿಕಾರಿಗಳು ಕಾರ್ಯಾಚರಣೆಯ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.

ಹುಲಿ ಕಾಣಿಸಿಕೊಂಡಿರುವ ಹಿನ್ನೆಲೆಯಲ್ಲಿ ಸಾರ್ವಜನಿಕರು ಆತಂಕಕ್ಕೆ ಒಳಗಾಗದೆ, ಅರಣ್ಯ ಇಲಾಖೆ ನೀಡಿರುವ ಮುನ್ನೆಚ್ಚರಿಕೆ ಸೂಚನೆಗಳನ್ನು ಕಟ್ಟುನಿಟ್ಟಾಗಿ ಪಾಲಿಸುವಂತೆ ಅಧಿಕಾರಿಗಳು ಮನವಿ ಮಾಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor