Kanakagiri | ಗಾಣಿಗ ಸಮಾಜ ಶೈಕ್ಷಣಿಕ, ಆರ್ಥಿಕವಾಗಿ ಸದೃಢವಾಗಬೇಕು: ಸುರೇಶ ಸಜ್ಜನ
ಕನಕಗಿರಿ: ಗಾಣಿಗ ಸಮಾಜ ಶೈಕ್ಷಣಿಕವಾಗಿ ಮುಂದೆ ಬರಬೇಕು. ಆದರೆ ಅದಕ್ಕೂ ಮೊದಲು ತಂದೆ-ತಾಯಿಗಳ ಶ್ರಮ ಹಾಗೂ ಸಮಾಜದ ಹಿರಿಯರ ಆಶೀರ್ವಾದ ಬಹಳ ಮುಖ್ಯವಾಗಿದೆ ಎಂದು ಗಾಣಿಗ ಸಮಾಜದ ರಾಜ್ಯಾಧ್ಯಕ್ಷ ಸುರೇಶ ಹೇಳಿದರು.
ಪಟ್ಟಣದ ಗಾಣಿಗ ಸಮಾಜದ ಗೃಹ ಪ್ರವೇಶ ಕಾರ್ಯಕ್ರಮದಲ್ಲಿ ಭಾನುವಾರ ಮಾತನಾಡಿದ ಅವರು, ಸಮಾಜದ ಪ್ರತಿಭಾವಂತ ಮಕ್ಕಳು ತಮ್ಮ ಸಂಸ್ಕೃತಿಯನ್ನು ಬೆಳೆಸಿಕೊಂಡು, ಹಿರಿಯರ ಮಾರ್ಗದರ್ಶನದಲ್ಲಿ ಮುನ್ನಡೆಯಬೇಕು. ಗೌರವಯುತ ನಡವಳಿಕೆಯನ್ನು ಜೀವನದಲ್ಲಿ ರೂಢಿಸಿಕೊಂಡಾಗ ಮಾತ್ರ ಉತ್ತಮ ವ್ಯಕ್ತಿತ್ವ ರೂಪಿಸಿಕೊಳ್ಳಲು ಸಾಧ್ಯ. ವಿದ್ಯಾರ್ಥಿಗಳು ತಂದೆ-ತಾಯಿಗಳ ಋಣ ತೀರಿಸುವ ನಿಟ್ಟಿನಲ್ಲಿ ಉತ್ತಮ ಸಾಧನೆ ಮಾಡಬೇಕು ಎಂದು ಕಿವಿಮಾತು ಹೇಳಿದರು.
ಗಾಣಿಗ ಸಮಾಜ ಆರ್ಥಿಕವಾಗಿಯೂ ಅಭಿವೃದ್ಧಿ ಹೊಂದಬೇಕು. ಆದರೆ ದುಂದುವೆಚ್ಚಕ್ಕೆ ಕಡಿವಾಣ ಹಾಕಿ ಸಮಾಜದ ಏಳಿಗೆಗಾಗಿ ಎಲ್ಲರೂ ಸಂಕಲ್ಪ ಮಾಡಬೇಕು ಎಂದರು.
ಸಾಲ ಮಾಡಿ ಮದುವೆ ಮಾಡಿಕೊಳ್ಳುವುದನ್ನು ತಪ್ಪಿಸಬೇಕು. ವಧುವಿನ ಕುಟುಂಬದಿಂದ ವರದಕ್ಷಿಣೆ ಪಡೆಯುವ ಪದ್ಧತಿಯನ್ನು ಸಂಪೂರ್ಣವಾಗಿ ನಿಲ್ಲಿಸಬೇಕು. ರಾಜ್ಯದಾದ್ಯಂತ ಸಮಾಜದ ಗುರುಗಳು ಹಾಗೂ ಹಿರಿಯರ ಮಾರ್ಗದರ್ಶನದಲ್ಲಿ ವರದಕ್ಷಿಣೆ ಪದ್ಧತಿಗೆ ಕಡಿವಾಣ ಹಾಕುವ ಮೂಲಕ ಆರ್ಥಿಕ ಸುಧಾರಣೆಗೆ ದಾರಿ ಮಾಡಿಕೊಡಬೇಕು ಎಂದು ಸಲಹೆ ನೀಡಿದರು.
ಸಹಕಾರಿ ಸಂಘಗಳ ಮೂಲಕ ಬಡವರಿಗೆ ಕಡಿಮೆ ಬಡ್ಡಿದರದಲ್ಲಿ ಸಾಲ ಸೌಲಭ್ಯ ಕಲ್ಪಿಸಿದರೆ ಸಮಾಜ ಆರ್ಥಿಕವಾಗಿ ಸದೃಢವಾಗಲಿದೆ. ಆರ್ಥಿಕವಾಗಿ ಸಬಲರಾಗಿರುವವರು ಬಡ ವಿದ್ಯಾರ್ಥಿಗಳನ್ನು ದತ್ತು ಪಡೆದು ಅವರ ವಿದ್ಯಾಭ್ಯಾಸಕ್ಕೆ ನೆರವಾಗಬೇಕು. ಇದರಿಂದ ಸಮಾಜದ ಸರ್ವತೋಮುಖ ಅಭಿವೃದ್ಧಿ ಸಾಧ್ಯವಾಗಲಿದೆ ಎಂದು ಅಭಿಪ್ರಾಯಪಟ್ಟರು.
ಕಾರ್ಯಕ್ರಮದಲ್ಲಿ ಗಾಣಿಗ ಸಮಾಜದ ರಾಜ್ಯ ಉಪಾಧ್ಯಕ್ಷ ಶಿವುರಾಜ ಸಜ್ಜನ ಸೇರಿದಂತೆ ಸಮಾಜದ ಮುಖಂಡರು ಹಾಗೂ ಸದಸ್ಯರು ಉಪಸ್ಥಿತರಿದ್ದರು.