ಕೊಪ್ಪಳ | ನ್ಯಾಯಕ್ಕಾಗಿ ಸೇವೆ ಸಲ್ಲಿಸುವ ಮನೋಭಾವ ವಕೀಲರಿಗಿರಲಿ : ಮಹಾದೇವ ಸ್ವಾಮಿಜಿ
ಕುಕನೂರು : ವಕೀಲರು ಹಣ ಸಂಪಾದನೆಯನ್ನೇ ಗುರಿಯಾಗಿಸಿಕೊಳ್ಳದೆ, ಶೋಷಿತರು ಮತ್ತು ಆರ್ಥಿಕವಾಗಿ ದುರ್ಬಲರಿಗೆ ನ್ಯಾಯ ದೊರಕುವಂತೆ ಸೇವೆ ಸಲ್ಲಿಸುವ ಮನೋಭಾವ ಬೆಳೆಸಿಕೊಳ್ಳಬೇಕು ಎಂದು ಮುಂಡರಗಿ ಶ್ರೀ ಅನ್ನದಾನೇಶ್ವರ ಶಾಖಾಮಠದ ಡಾ.ಮಹಾದೇವ ಮಹಾಸ್ವಾಮಿಗಳು ಹೇಳಿದರು.
ಪಟ್ಟಣದ ಅನ್ನದಾನೇಶ್ವರ ಶಾಖಾಮಠದ ಸಭಾಭವನದಲ್ಲಿ ಎಂ.ಎಸ್. ಚಾರಿಟೇಬಲ್ ಟ್ರಸ್ಟ್ ವತಿಯಿಂದ ಅಖಿಲ ಭಾರತ ವಕೀಲರ ಪರೀಕ್ಷೆ (ಎಐಬಿಇ) ಉತ್ತೀರ್ಣರಾದ ವಕೀಲರು ಹಾಗೂ ನೂತನವಾಗಿ ಆಯ್ಕೆಯಾದ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಪದಾಧಿಕಾರಿಗಳಿಗೆ ಶನಿವಾರ ಹಮ್ಮಿಕೊಂಡಿದ್ದ ಅಭಿನಂದನಾ ಸಮಾರಂಭದಲ್ಲಿ ಅವರು ಮಾತನಾಡಿದರು.
ಭಕ್ತರು ನ್ಯಾಯಕ್ಕಾಗಿ ಪರದಾಡುತ್ತಿದ್ದ ಸಂದರ್ಭವನ್ನು ಕಂಡು ತಾವು ವಕೀಲ ಪದವಿ ಪಡೆಯುವ ಸಂಕಲ್ಪ ಮಾಡಿದ್ದಾಗಿ ಸ್ಮರಿಸಿದ ಅವರು, ನ್ಯಾಯಾಲಯಗಳಲ್ಲಿ ಹೆಚ್ಚುತ್ತಿರುವ ಪ್ರಕರಣಗಳ ಸಂಖ್ಯೆಯನ್ನು ಕಡಿಮೆ ಮಾಡಲು ಕಕ್ಷಿದಾರರಿಗೆ ಕಾನೂನು ಅರಿವು ಮೂಡಿಸಿ, ಸಾಧ್ಯವಾದಷ್ಟು ವ್ಯಾಜ್ಯಗಳನ್ನು ಸೌಹಾರ್ದಯುತವಾಗಿ ಬಗೆಹರಿಸುವ ಪ್ರಯತ್ನ ವಕೀಲರಿಂದ ಆಗಬೇಕು ಎಂದು ಹೇಳಿದರು.
ಕುಕನೂರು–ಯಲಬುರ್ಗಾ ವಕೀಲರ ಸಂಘದ ಅಧ್ಯಕ್ಷ ಸುಭಾಷ್ ಹೊಂಬಳ ಮಾತನಾಡಿ, ವಕೀಲ ವೃತ್ತಿಯಲ್ಲಿ ನಿರಂತರ ಅಧ್ಯಯನ ಅತ್ಯಗತ್ಯ. ಸಮಾಜ ನೀಡಿರುವ ಗೌರವಕ್ಕೆ ತಕ್ಕಂತೆ ಸಮಯಪ್ರಜ್ಞೆ, ಶಿಸ್ತು ಮತ್ತು ಸೌಜನ್ಯದಿಂದ ಸೇವೆ ಸಲ್ಲಿಸುವ ಮೂಲಕ ನ್ಯಾಯಾಂಗದ ಮೇಲಿನ ವಿಶ್ವಾಸವನ್ನು ಉಳಿಸಬೇಕು ಎಂದು ತಿಳಿಸಿದರು.
ಪ್ರಾಸ್ತಾವಿಕವಾಗಿ ರವಿ ಅಗೋಲಿ ಮಾತನಾಡಿ, ಕಾನೂನು ಪದವಿ ಪೂರ್ಣಗೊಳಿಸಿ ವೃತ್ತಿಗೆ ಪ್ರವೇಶಿಸುತ್ತಿರುವ ನೂತನ ವಕೀಲರನ್ನು ಒಗ್ಗೂಡಿಸಿ ಪ್ರೋತ್ಸಾಹಿಸುವ ಉದ್ದೇಶದಿಂದ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.
ಯಲಬುರ್ಗಾ ಮುರುಡಿಮಠದ ಶ್ರೀಗಳು ಹಾಗೂ ರಾಜೂರ ಶ್ರೀಗಳು ಸಾನ್ನಿಧ್ಯ ವಹಿಸಿದ್ದರು.
ಈ ವೇಳೆ ಕೊಪ್ಪಳ ಜಿಲ್ಲಾ ವಕೀಲರ ಸಂಘದ ಅಧ್ಯಕ್ಷ ಪ್ರಕಾಶ್ ಆನಂದಳ್ಳಿ, ಬಿ.ವಿ. ಸಜ್ಜನ, ಅಂದನಗೌಡ ಮಾಲಿಪಾಟೀಲ, ಬಸವರಾಜ ಮೇಲುಸಕ್ಕರೆ, ಪುಷ್ಪ ಬೇವೂರ, ಆನಂದ ಉಳ್ಳಾಗಡ್ಡಿ, ಮಹಾಂತೇಶ್ ಬೂದುಗುಂಪಿ, ಬಸವರಾಜ ಜಂಗ್ಲಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.