ಕನಕಗಿರಿ : ಯೂರಿಯಾ ಗೊಬ್ಬರಕ್ಕೆ ರೈತರ ನೂಕುನುಗ್ಗಲು; ಹೆಚ್ಚುವರಿ ಸ್ಟಾಕ್‌ಗೆ ಆಗ್ರಹ
ಕೊಪ್ಪಳ : ಕನಕಗಿರಿ ತಾಲೂಕಿನ ಮುಸಲಾಪೂರ ಗ್ರಾಮದ ಕೊಪ್ಪಳ ರಸ್ತೆಯಲ್ಲಿರುವ ಸಜ್ಜಲ ಶ್ರೀ ಆಗ್ರೋ ಕೇಂದ್ರದ ಮುಂದೆ ಬುಧವಾರ ಬೆಳಗ್ಗೆಯಿಂದಲೇ ಯೂರಿಯಾ ಗೊಬ್ಬರಕ್ಕಾಗಿ ರೈತರ ದೊಡ್ಡ ಗುಂಪು ಜಮಾಯಿಸಿ ನೂಕುನುಗ್ಗಲು ಉಂಟಾಗಿದೆ.
ಮುಂಗಾರು ಹಂಗಾಮದ ಬಿತ್ತನೆ ಕಾರ್ಯ ಭರದಿಂದ ಸಾಗುತ್ತಿರುವ ಹಿನ್ನೆಲೆಯಲ್ಲಿ ಬೆಳೆಗಳಿಗೆ ಯೂರಿಯಾ ಗೊಬ್ಬರ ಅತ್ಯಗತ್ಯವಾಗಿದೆ. ಆದರೆ ಸಕಾಲಕ್ಕೆ ಗೊಬ್ಬರ ಸರಬರಾಜು ಇಲ್ಲದ ಕಾರಣ ರೈತರು ತೀವ್ರ ಪರದಾಟಕ್ಕೆ ಒಳಗಾಗಿದ್ದಾರೆ. ರಸ್ತೆ ಬದಿಯಲ್ಲಿ ಬೈಕ್‌ಗಳನ್ನು ನಿಲ್ಲಿಸಿ ಗಂಟೆಗಟ್ಟಲೆ ಕಾಯುತ್ತಾ, ಗೊಬ್ಬರ ಪಡೆಯಲು ರೈತರು ಹರಸಾಹಸ ಪಡುತ್ತಿದ್ದಾರೆ. ಅಂಗಡಿ ತೆರೆಯುವುದಕ್ಕೂ ಮುನ್ನವೇ ನೂರಾರು ರೈತರು ಸರತಿ ಸಾಲಿನಲ್ಲಿ ನಿಂತಿದ್ದ ದೃಶ್ಯ ಕಂಡುಬಂದಿದೆ.
“ಈಗಲೇ ಗೊಬ್ಬರ ಹಾಕದಿದ್ದರೆ ಬೆಳೆ ಇಳುವರಿ ತೀವ್ರವಾಗಿ ಕುಸಿಯುತ್ತದೆ. ಸರ್ಕಾರ ತಕ್ಷಣ ಹೆಚ್ಚುವರಿ ಸ್ಟಾಕ್ ಕಳುಹಿಸಬೇಕು” ಎಂದು ಸ್ಥಳೀಯ ರೈತರಾದ ಮಂಜುನಾಥ ಬೇವೂರು, ಪ್ರಶಾಂತ, ಚೆನ್ನಬಸಪ್ಪ ಕುಳಜಿ, ಮಹೇಶ ಮುಂತಾದವರು ಆಗ್ರಹಿಸಿದ್ದಾರೆ.