Kanakagiri | ಎಂಎಸ್‌ಎಂಎಲ್ ನಿಗಮದ ಮಂಡಳಿ ನಿರ್ದೇಶಕರಾಗಿ ಗಂಗಾಧರಸ್ವಾಮಿ ನೇಮಕ
ಕನಕಗಿರಿ: ಇಲ್ಲಿನ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ಅವರನ್ನು ಮೈಸೂರು ಮಿನರಲ್ಸ್ ಲಿಮಿಟೆಡ್ (ಎಂಎಸ್‌ಎಂಎಲ್) ನಿಗಮದ ಮಂಡಳಿ ನಿರ್ದೇಶಕರನ್ನಾಗಿ ನೇಮಕ ಮಾಡಲಾಗಿದೆ ಎಂದು ಪ್ರಕಟಣೆ ತಿಳಿಸಿದೆ.
ಜಿಲ್ಲಾ ಉಸ್ತುವಾರಿ ಸಚಿವ ಶಿವರಾಜ ತಂಗಡಗಿ ಅವರ ಶಿಫಾರಸ್ಸಿನ ಮೇರೆಗೆ ಈ ನೇಮಕಾತಿ ಮಾಡಲಾಗಿದೆ.
ಕಳೆದ ಹಲವು ವರ್ಷಗಳಿಂದ ಕಾಂಗ್ರೆಸ್ ಪಕ್ಷದಲ್ಲಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿರುವ ಗಂಗಾಧರಸ್ವಾಮಿ ಕಲ್ಲಬಾಗಿಲಮಠ ಅವರು, ಕನಕಗಿರಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರಾಗಿ ಪಕ್ಷ ಸಂಘಟನೆಯಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಅವರ ಪಕ್ಷದ ಸೇವೆ ಹಾಗೂ ನಿಷ್ಠೆಯನ್ನು ಗುರುತಿಸಿ ಸರ್ಕಾರ ಈ ಜವಾಬ್ದಾರಿ ನೀಡಿದೆ.
ಅವರ ನೇಮಕಾತಿಗೆ ಕನಕಗಿರಿ ಭಾಗದ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಹಾಗೂ ಅಭಿಮಾನಿಗಳು ಸಂತಸ ವ್ಯಕ್ತಪಡಿಸಿ ಅಭಿನಂದನೆ ಸಲ್ಲಿಸಿದ್ದಾರೆ.
ಈ ಕುರಿತು ಪ್ರತಿಕ್ರಿಯಿಸಿದ ಗಂಗಾಧರಸ್ವಾಮಿ, “ನನಗೆ ಈ ಜವಾಬ್ದಾರಿ ನೀಡಿದ ಮುಖ್ಯಮಂತ್ರಿ, ಸಚಿವ ಶಿವರಾಜ ತಂಗಡಗಿ ಹಾಗೂ ಪಕ್ಷದ ಹಿರಿಯ ಮುಖಂಡರಿಗೆ ಧನ್ಯವಾದಗಳು. ನೀಡಿರುವ ಜವಾಬ್ದಾರಿಯನ್ನು ಪ್ರಾಮಾಣಿಕವಾಗಿ ನಿರ್ವಹಿಸುತ್ತೇನೆ” ಎಂದು ಹೇಳಿದರು.