Kanakagiri | ಶಿಕ್ಷಕರಿಗೆ ಸಮಯ ಪ್ರಜ್ಞೆ ಅವಶ್ಯಕ : ಜಗದೀಶ ಹಾದಿಮನಿ
ಕನಕಗಿರಿ: ಶಿಕ್ಷಕ ವೃತ್ತಿಯು ಸಮಾಜದಲ್ಲಿ ಶ್ರೇಷ್ಠ ಹಾಗೂ ಪವಿತ್ರವಾಗಿದ್ದು, ಶಿಕ್ಷಕರು ತಮ್ಮ ಕರ್ತವ್ಯಕ್ಕೆ ಚ್ಯುತಿ ಬರದಂತೆ ಪ್ರಾಮಾಣಿಕವಾಗಿ ಕಾರ್ಯನಿರ್ವಹಿಸಬೇಕು ಎಂದು ಉಪಪ್ರಾಂಶುಪಾಲ ಜಗದೀಶ ಹಾದಿಮನಿ ಹೇಳಿದರು.
ಇಲ್ಲಿನ ಸರ್ಕಾರಿ ಪ್ರೌಢಶಾಲೆಯಲ್ಲಿ ಶನಿವಾರ ಆಯೋಜಿಸಿದ್ದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಸಮಯ ಪ್ರಜ್ಞೆ, ಶಿಸ್ತು, ಸಂಯಮ, ತಾಳ್ಮೆ ಹಾಗೂ ಸಹನೆಯಂತಹ ಮೌಲ್ಯಗಳನ್ನು ಶಿಕ್ಷಕರು ಮೊದಲು ತಮ್ಮ ಜೀವನದಲ್ಲಿ ಅಳವಡಿಸಿಕೊಂಡು, ಬಳಿಕ ವಿದ್ಯಾರ್ಥಿಗಳಿಗೆ ಕಲಿಸಬೇಕು. ಆಗ ಮಾತ್ರ ಶಿಕ್ಷಕರ ದಿನಾಚರಣೆಗೆ ನಿಜವಾದ ಅರ್ಥ ಬರುತ್ತದೆ ಎಂದು ತಿಳಿಸಿದರು.
ಕಾರ್ಯಕ್ರಮದಲ್ಲಿ ಶಿಕ್ಷಕರಾದ ರಾಜೇಶ್ವರರೆಡ್ಡಿ, ಡಿ.ಬಿ.ಪಾಟೀಲ, ಬೀಬೀ ಉಮೆ ಸಲ್ಮಾ, ಅನಿಲಕುಮಾರ,ಶಾಮೀದಸಾಬ ಲೈನದಾರ, ಕನಕಾಚಲ ಕಟ್ಟಿಮನಿ , ಎಚ್.ಸಿ.ವಿಜೇಂದ್ರ, ರಾಘವೇಂದ್ರ, ಮೀನಾಕ್ಷಿ ಇತರರು ಇದ್ದರು.
ತಾಲ್ಲೂಕಿನ ಕಲಕೇರಿ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶನಿವಾರ ಶಿಕ್ಷಕರ ದಿನಾಚರಣೆ ಆಚರಿಸಲಾಯಿತು. ಡಾ.ಎಸ್ .ರಾಧಾಕೃಷ್ಣನ್ ಅವರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ .ಮಾಲಾರ್ಪಣೆ ಮಾಡಲಾಯಿತು. ಮುಖ್ಯಶಿಕ್ಷಕ ಶೇಖರಯ್ಯ ಕಲ್ಮಠ, ಅವರು ಶಿಕ್ಷಣದ ಮಹತ್ವ ಕುರಿತು ಮಾತನಾಡಿದರು.
ಶಿಕ್ಷಕರಾದ ಮಂಜುನಾಥ , ವಿಜಯ ದೊಡ್ಡಬಿದ್ರಿ, ಪವಿತ್ರಾ ಮಂಜುನಾಥ ಇತರರು ಇದ್ದರು.