ಕೊಪ್ಪಳ: ಜನರ ಕಲ್ಯಾಣ ಮತ್ತು ಯಲಬುರ್ಗಾ ಕ್ಷೇತ್ರದ ಸಮಗ್ರ ಅಭಿವೃದ್ಧಿಯೇ ನಮ್ಮ ಗುರಿಯಾಗಿದೆ ಎಂದು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಹೇಳಿದರು.

ಬುಧವಾರ ಯಲಬುರ್ಗಾ ವಿಧಾನಸಭಾ ಕ್ಷೇತ್ರದ ಚಿಕ್ಕಮ್ಯಾಗೇರಿ, ಕಲ್ಲೂರು ಹಾಗೂ ಸಂಗನಾಳ ಮತ್ತು ರಾಜೂರು ಗ್ರಾಮಗಳಲ್ಲಿ ಸಂಚರಿಸಿ ಜನಸಂದರ್ಶನ ಕಾರ್ಯಕ್ರಮ ನಡೆಸಿ ಮಾತನಾಡಿದ ಅವರು ನಮ್ಮ ಕ್ಷೇತ್ರದಲ್ಲಿ ಈ ಹಿಂದೆ 24 ಕೆರೆಗಳನ್ನು ತುಂಬಿಸಲಾಗಿತ್ತು. ಪ್ರಸ್ತುತ ರೂ. 970 ಕೋಟಿ ವೆಚ್ಚದಲ್ಲಿ ನದಿಯಿಂದ ಯಲಬುರ್ಗಾ-ಕುಕನೂರು ಭಾಗದಲ್ಲಿನ 34 ಕೆರೆಗಳನ್ನು ತುಂಬಿಸುವ ಯೋಜನೆಗೆ ಟೆಂಡರ್ ಪ್ರಕ್ರಿಯೆ ಪೂರ್ಣಗೊಂಡಿದ್ದು, ಶೀಘ್ರದಲ್ಲೇ ಕಾಮಗಾರಿ ಆರಂಭವಾಗಲಿದೆ ಎಂದರು.

ಎರೆ ಭಾಗದ ಸುಮಾರು 23 ಹಳ್ಳಿಗಳಿಗೆ ಶುದ್ಧ ಕುಡಿಯುವ ನೀರು ಒದಗಿಸಲು ರೂ. 125 ಕೋಟಿ ವೆಚ್ಚದ ಯೋಜನೆ ರೂಪಿಸಲಾಗಿದೆ. ತುಂಗಭದ್ರಾ ನದಿಯಿಂದ ಡಿಬಿಒಟಿ ಮೂಲಕ ನೀರು ಒದಗಿಸುವ ಪ್ರಕ್ರಿಯೆಗೆ ಚಾಲನೆ ನೀಡಲಾಗಿದೆ. ಕ್ಷೇತ್ರದ ರಸ್ತೆಗಳ ಸುಧಾರಣೆಗೆ ಆದ್ಯತೆ ನೀಡಲಾಗಿದ್ದು, ಮುಂಡರಗಿ-ರಾಜೂರು-ಯಲಬುರ್ಗಾ ಸಂಪರ್ಕ ರಸ್ತೆಗಳ ಡಾಂಬರೀಕರಣ ಹಾಗೂ ದುರಸ್ತಿ ಕಾಮಗಾರಿಗಳು ಅಕ್ಟೋಬರ್‌ನಿಂದ ಚುರುಕುಗೊಳ್ಳಲಿವೆ. ಸಂಕನೂರು, ಮುಧೋಳ, ಯಲಬುರ್ಗಾ ಮಾರ್ಗದ ರಸ್ತೆಗಾಗಿ ರೂ. 400 ಕೋಟಿ ಅನುದಾನ ಮೀಸಲಿಡಲಾಗಿದೆ ಎಂದರು.

ಸರ್ಕಾರಿ ಶಾಲಾ-ಕಾಲೇಜುಗಳಲ್ಲಿ 1 ರಿಂದ ದ್ವಿತೀಯ ಪಿಯುಸಿ ವರೆಗೆ ಓದಿದ ವಿದ್ಯಾರ್ಥಿನಿಯರಿಗೆ ಉನ್ನತ ಶಿಕ್ಷಣ ಮುಂದುವರಿಸಲು ನೆರವಾಗುವಂತೆ ’ದೀಪಿಕಾ’ ಯೋಜನೆಯನ್ನು ಜಾರಿಗೆ ತರಲಾಗಿದ್ದು, ಈ ಯೋಜನೆಯಡಿ ಬಿಎ, ಬಿಕಾಂ, ಬಿಎಸ್ಸಿ, ಎಂಜಿನಿಯರಿಂಗ್, ಎಂಬಿಬಿಎಸ್ ವ್ಯಾಸಂಗಕ್ಕೆ ವಿದ್ಯಾರ್ನಿಯರಿಗೆ ವಾರ್ಷಿಕ ರೂ. 30,000 ಪ್ರೋತ್ಸಾಹಧನ ನೀಡಲಾಗುತ್ತಿದೆ. ಗ್ರಾಮೀಣ ಭಾಗದಲ್ಲಿ ಹೆಣ್ಣು ಮಕ್ಕಳು ಇದರ ಸದುಪಯೋಗ ಪಡೆದುಕೊಳ್ಳಬೇಕು. ಯಲಬುರ್ಗಾ ತಾಲ್ಲೂಕಿಗೆ 13ಕ್ಕೂ ಹೆಚ್ಚು ಕರ್ನಾಟಕ ಪಬ್ಲಿಕ್ ಶಾಲೆಗಳು (ಕೆಪಿಎಸ್) ಮಂಜೂರಾಗಿದ್ದು, ಪ್ರತಿ ಶಾಲೆಗೆ ರೂ. 4ಕೋಟಿ ವೆಚ್ಚದಲ್ಲಿ ಕಟ್ಟಡ ನಿರ್ಮಾಣವಾಗುತ್ತಿದೆ. ಬೇವೂರಿನಲ್ಲಿ ರೂ. 24 ಕೋಟಿ ವೆಚ್ಚದಲ್ಲಿ ಸುಸಜ್ಜಿತ ವಸತಿಯುತ ಬಿಸಿಎ, ಬಿಕಾಂ, ಬಿಎಸ್ಸಿ ಪದವಿ ಕಾಲೇಜು ಹಾಗೂ ವಿದ್ಯಾರ್ಥಿ-ವಿದ್ಯಾರ್ಥಿನಿಯರಿಗೆ ತಲಾ 180 ಸಾಮರ್ಥ್ಯದ ಹಾಸ್ಟೆಲ್ ನಿರ್ಮಾಣಕ್ಕೆ ಅನುಮೋದನೆ ದೊರೆತಿದೆ ಎಂದು ಹೇಳಿದರು.

ಪ್ರಸ್ತುತ ರಾಜ್ಯದಲ್ಲಿ ಎದುರಾಗಿರುವ ಭೀಕರ ಬರಗಾಲದ ಹಿನ್ನೆಲೆಯಲ್ಲಿ ಈಗಾಗಲೇ ಗಂಗಾವತಿ, ಕುಕನೂರು, ಕನಕಗಿರಿ ತಾಲ್ಲೂಕುಗಳನ್ನು ಬರಪೀಡಿತ ಎಂದು ಘೋಷಿಸಲಾಗಿದೆ. ಸೆಪ್ಟೆಂಬರ್ ಅಂತ್ಯಕ್ಕೆ ಬರಲಿರುವ ಎರಡನೇ ಪಟ್ಟಿಯಲ್ಲಿ ಯಲಬುರ್ಗಾ ತಾಲೂಕನ್ನೂ ಸೇರ್ಪಡೆಗೊಳಿಸಿ, ರೈತರಿಗೆ ಹಾಗೂ ಜನರಿಗೆ ಅಗತ್ಯ ನೆರವು ಕಲ್ಪಿಸಲಾಗುವುದು ಎಂದು ಹೇಳಿದರು.  

ಈ ಸಂದರ್ಭದಲ್ಲಿ ಯಲಬುರ್ಗಾ ತಾಲೂಕು ಗ್ಯಾರಂಟಿ ಯೋಜನೆಗಳ ಅನುಷ್ಟಾನ ಸಮಿತಿ ಅಧ್ಯಕ್ಷರಾದ ಸುಧೀರ ಕೊರಳಳ್ಳಿ, ಯಲಬುರ್ಗಾ ತಾ.ಪಂ ಇಓ ನೀಲಗಂಗಾ ಬಬಲಾದ, ಕುಕನೂರು ತಾ.ಪಂ ಇಓ ಬೆಟದೇಶ ಮಾಳೆಕೊಪ್ಪ, ಕೆ.ಆರ್.ಐ.ಡಿ.ಎಲ್ ಅಧಿಕಾರಿ ಅನಿಲ್ ಪಾಟೀಲ, ಲೋಕೋಪಯೋಗಿ ಇಲಾಖೆ ಅಧಿಕಾರಿ ಮಲ್ಲಿಕಾರ್ಜುನ, ಮುಖಂಡರಾದ ಕೆ.ಎಂ ಸೈಯದ್, ಶಿವನಗೌಡ ದಾನರೆಡ್ಡಿ, ಕೆರೆಬಸಪ್ಪ ನಿಡಗುಂದಿ, ಹಂಪಯ್ಯ ಹಿರೇಮಠ, ವರದಯ್ಯ ಸೇರಿದಂತೆ ಇತರೆ ಜನಪ್ರತಿನಿಧಿಗಳು, ಗ್ರಾಮಸ್ಥರು, ವಿವಿಧ ಇಲಾಖೆಗಳ ಅಧಿಕಾರಿಗಳು, ಸಿಬ್ಬಂದಿಗಳು ಉಪಸ್ಥಿತರಿದ್ದರು.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor