ಕುಕನೂರು: ಖಾಸಗಿ ಜಮೀನಿಗೆ ಸಂಬಂಧಿಸಿದ ಪ್ರಕರಣದಲ್ಲಿ ನ್ಯಾಯಾಲಯದ ಆದೇಶವನ್ನು ಸಂಪೂರ್ಣವಾಗಿ ಅನುಷ್ಠಾನಗೊಳಿಸುವಲ್ಲಿ ವಿಳಂಬವಾದ ಹಿನ್ನೆಲೆಯಲ್ಲಿ ಕುಕನೂರು ತಹಶೀಲ್ದಾರ್ ಕಚೇರಿಗೆ ಸ್ಥಳೀಯ ಸಿವಿಲ್ ನ್ಯಾಯಾಲಯವು ಜಪ್ತಿ ವಾರೆಂಟ್ ಜಾರಿಗೊಳಿಸಿದೆ.

ಪ್ರಕರಣಕ್ಕೆ ಸಂಬಂಧಿಸಿದ ಕಂದಾಯ ದಾಖಲೆಗಳಲ್ಲಿ ಅಗತ್ಯ ಬದಲಾವಣೆಗಳನ್ನು ಮಾಡುವಂತೆ ನ್ಯಾಯಾಲಯ ನಿರ್ದೇಶಿಸಿತ್ತು. ಅದರಂತೆ ಒಂದು ಆರ್‌ಟಿಸಿ ಬದಲಾವಣೆ ಪೂರ್ಣಗೊಂಡಿದ್ದು, ಮತ್ತೊಂದು ಆರ್‌ಟಿಸಿ ಬದಲಾವಣೆ ಸರ್ವೆ ಇಲಾಖೆಯ ಹಂತದಲ್ಲಿ ಬಾಕಿ ಉಳಿದಿತ್ತು ಎಂದು ತಿಳಿದುಬಂದಿದೆ.

ನ್ಯಾಯಾಲಯದ ಆದೇಶ ಸಂಪೂರ್ಣವಾಗಿ ಅನುಷ್ಠಾನಗೊಳ್ಳದ ಹಿನ್ನೆಲೆಯಲ್ಲಿ ಜಪ್ತಿ ವಾರೆಂಟ್ ಜಾರಿಯಾಗಿದ್ದು, ಅದರ ಅನ್ವಯ ತಹಶೀಲ್ದಾರ್ ಕಚೇರಿಯಲ್ಲಿದ್ದ ಕೆಲವು ಪೀಠೋಪಕರಣಗಳು ಹಾಗೂ ತಹಶೀಲ್ದಾರ್ ಮತ್ತು ಉಪತಹಶೀಲ್ದಾರ್ ಬಳಸುವ ಕುರ್ಚಿಗಳನ್ನು ಜಪ್ತಿ ಪ್ರಕ್ರಿಯೆಗೆ ಒಳಪಡಿಸಲಾಗಿದೆ ಎಂದು ತಿಳಿದುಬಂದಿದೆ.

ಸರ್ವೆ ಇಲಾಖೆಯ ಹಂತದಲ್ಲಿ ಪ್ರಕ್ರಿಯೆ ಬಾಕಿ

ಈ ಕುರಿತು ತಹಶೀಲ್ದಾರ್ ಬಸವರಾಜ ಬೆಣ್ಣೆಶಿರೂರು ಸ್ಪಷ್ಟನೆ ನೀಡಿ, ‘ಖಾಸಗಿ ಜಮೀನಿಗೆ ಸಂಬಂಧಿಸಿದಂತೆ ನ್ಯಾಯಾಲಯ ನೀಡಿದ್ದ ನಿರ್ದೇಶನದಂತೆ ಒಂದು ಆರ್‌ಟಿಸಿ ಬದಲಾವಣೆ ಈಗಾಗಲೇ ಪೂರ್ಣಗೊಳಿಸಲಾಗಿದೆ. ಮತ್ತೊಂದು ಆರ್‌ಟಿಸಿಗೆ ಸಂಬಂಧಿಸಿದ ಪ್ರಕ್ರಿಯೆ ಸರ್ವೆ ಕಚೇರಿ ಹಂತದಲ್ಲಿ ಬಾಕಿ ಉಳಿದಿದ್ದರಿಂದ ವಿಳಂಬವಾಗಿದೆ’ ಎಂದು ತಿಳಿಸಿದ್ದಾರೆ.

‘ನ್ಯಾಯಾಲಯದ ಆದೇಶವನ್ನು ಉದ್ದೇಶಪೂರ್ವಕವಾಗಿ ಪಾಲಿಸದೇ ಇರುವ ಉದ್ದೇಶ ಕಚೇರಿಗೆ ಇರಲಿಲ್ಲ. ಸರ್ವೆ ಇಲಾಖೆಯ ಪ್ರಕ್ರಿಯೆ ಪೂರ್ಣಗೊಳ್ಳದ ಹಿನ್ನೆಲೆಯಲ್ಲಿ ಉಳಿದ ದಾಖಲೆ ಬದಲಾವಣೆ ಕಾರ್ಯವನ್ನು ನಿಗದಿತ ಅವಧಿಯಲ್ಲಿ ಪೂರ್ಣಗೊಳಿಸಲು ಸಾಧ್ಯವಾಗಲಿಲ್ಲ’ ಎಂದು ಹೇಳಿದ್ದಾರೆ.

ಬಾಕಿ ಇರುವ ಸರ್ವೆ ಕಾರ್ಯ ಪೂರ್ಣಗೊಂಡ ಬಳಿಕ ಸಂಬಂಧಿಸಿದ ಆರ್‌ಟಿಸಿ ಬದಲಾವಣೆ ಸೇರಿದಂತೆ ನ್ಯಾಯಾಲಯದ ನಿರ್ದೇಶನದಂತೆ ಮುಂದಿನ ಕ್ರಮ ಕೈಗೊಳ್ಳಬೇಕಿದೆ. ನ್ಯಾಯಾಲಯದ ಆದೇಶಗಳ ಅನುಷ್ಠಾನದಲ್ಲಿ ಸಂಬಂಧಿಸಿದ ಇಲಾಖೆಗಳ ನಡುವೆ ಸಮನ್ವಯ ಅಗತ್ಯವಾಗಿದ್ದು, ಬಾಕಿ ಇರುವ ಪ್ರಕ್ರಿಯೆಗಳನ್ನು ತ್ವರಿತವಾಗಿ ಪೂರ್ಣಗೊಳಿಸುವ ಅಗತ್ಯವಿದೆ ಎಂದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor