ʼಇದು ಗ್ಯಾರಂಟಿ ಸರಕಾರ ಅಲ್ಲ, ಜಾಹೀರಾತು ಸರಕಾರʼ : ಕಾಂಗ್ರೆಸ್ ವಿರುದ್ಧ ವಿಜಯೇಂದ್ರ ವಾಗ್ದಾಳಿ
ಕಾರಟಗಿ (ಕೊಪ್ಪಳ ಜಿಲ್ಲೆ) : ಕುಂಭಕರ್ಣನ ನಿದ್ದೆಯಲ್ಲಿರುವ ಸರಕಾರ ಮತ್ತು ಮುಖ್ಯಮಂತ್ರಿಗಳನ್ನು ಬಿಜೆಪಿ ಬಡಿದೆಬ್ಬಿಸುತ್ತಿದೆ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಅವರು ಹೇಳಿದ್ದಾರೆ.
5ನೇ ದಿನದ ಬಳ್ಳಾರಿ ಚಲೋ ಪಾದಯಾತ್ರೆ ಅಂಗವಾಗಿ ಕಾರಟಗಿಯ ಎಪಿಎಂಸಿ ಯಾರ್ಡ್ ನಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ರಾಜ್ಯದ ಕಾಂಗ್ರೆಸ್ ಸರಕಾರ ಗ್ಯಾರಂಟಿಗಳ ನೆಪವೊಡ್ಡಿ ಗಾಳಿಯಲ್ಲಿ ಗೋಪುರ ಕಟ್ಟುತ್ತಿದೆ. ಇದು ಬಿಟ್ಟರೆ ಬೇರೇನೂ ಕೆಲಸವನ್ನೂ ಈ ಸರಕಾರ ಮಾಡುತ್ತಿಲ್ಲ. ಕಳೆದ ಮೂರು ವರ್ಷಗಳಲ್ಲಿ ಗ್ಯಾರಂಟಿಗಳ ಬಗ್ಗೆ ಭಾರಿ ಪ್ರಚಾರ ಮಾಡಿದರು. ಇದು ಜನಪ್ರಿಯ ಸರಕಾರ ಅಲ್ಲ, ಜಾಹೀರಾತು ಸರಕಾರ ಎಂದು ಹೇಳಿದ್ದೆ ಎಂದು ವ್ಯಂಗ್ಯವಾಡಿದರು.
ಮತ್ತೆ ಸರಕಾರದ ಭ್ರಮೆಯಲ್ಲಿ ಕಾಂಗ್ರೆಸ್ :
ಮುಂದಿನ ಬಾರಿ ತಮ್ಮದೇ ಸರಕಾರ ಬರುತ್ತೆ ಎಂದು ಕಾಂಗ್ರೆಸ್ ಭ್ರಮೆಯಲ್ಲಿದೆ. ಎಲ್ಲ ವರ್ಗದ ಜನರಿಗೆ ಈ ಸರಕಾರ ಅನ್ಯಾಯ ಮಾಡಿದೆ. ಆಡಳಿತ ಪಕ್ಷದ ಶಾಸಕರೇ ತಮ್ಮ ಸರಕಾರ ಟೇಕಾಪ್ ಆಗಿಲ್ಲ ಅಂತಿದ್ದಾರೆ. ಇನ್ನಾದರೂ ಈ ಸರಕಾರ ಎಚ್ಚೆತ್ತು ಬಡವರ, ರೈತರ ಬಗ್ಗೆ ಕಾಳಜಿಯನ್ನು ಸರಕಾರ ತೋರಿಸಲಿ ಎಂದರು.
ಗೃಹಲಕ್ಷ್ಮಿ ಗ್ಯಾರಂಟಿ ಹಗರಣ :
ಗೃಹಲಕ್ಷ್ಮಿ ಯೋಜನೆಯಲ್ಲಿ ಐದು ಸಾವಿರ ಕೋಟಿ ಹಗರಣದ ಬಗ್ಗೆ ಇಂದಿಗೂ ಸಿಎಂ ಆಗಲಿ, ಸಚಿವರಿಂದ ಯಾವುದೇ ಸ್ಪಷ್ಟನೆ ಬಂದಿಲ್ಲ. ಮಹಾಲೇಖಪಾಲರ ವರದಿಯಲ್ಲೂ ಇದರ ಬಗ್ಗೆ ಉಲ್ಲೇಖವಾಗಿದೆ. ಜಿಲ್ಲಾ, ತಾಲೂಕು ಮಟ್ಟದಲ್ಲಿ ಗ್ಯಾರಂಟಿ ಸಮಿತಿ ಮಾಡಿ. ಅದಕ್ಕೆ ಅಧ್ಯಕ್ಷರನ್ನು ನೇಮಿಸಿ ಸಂಪುಟ ದರ್ಜೆ ನೀಡಿ ಜನರ ತೆರಿಗೆ ಹಣದಿಂದ ಖರ್ಚು ಮಾಡುತ್ತಿದ್ದೀರಿ. ಇಷ್ಟು ದೊಡ್ಡ ಮಟ್ಟದ ಅವ್ಯವಹಾರ ನಡೆದರೂ ಈ ಸಮಿತಿ ಅಧ್ಯಕ್ಷರು ಏನು ಕತ್ತೆ ಕಾಯುತ್ತಿದ್ದರೆ ಎಂದು ಪ್ರಶ್ನಿಸಿದರು.
ಅರ್ಹ ಫಲಾನುಭವಿಗಳಿಗೆ ಗೃಹಲಕ್ಷ್ಮಿ ಹಣ ತಲುಪಿಲ್ಲವೆಂದರೆ ಇದಕ್ಕೆ ಯಾರು ಹೊಣೆ. ಇನ್ನು ಶಕ್ತಿ ಯೋಜನೆಗೆ ಭಾರಿ ಪ್ರಚಾರ ನೀಡುತ್ತಾರೆ. ಆದರೆ ಗ್ರಾಮೀಣ ಭಾಗದಲ್ಲಿ ಬಸ್ ಗಳೇ ಇಲ್ಲ. ಶಾಲೆಗೆ ಹೋಗುವ ಮಕ್ಕಳಿಗೆ ತೊಂದರೆಯಾಗಿದೆ. ಈ ಹಿಂದೆ ಯಡಿಯೂರಪ್ಪ ಅವರು ಸಿಎಂ ಇದ್ದಾಗ ಮಕ್ಕಳಿಗೆ ಸೈಕಲ್ ನೀಡಿದ್ದರು. ಅದಕ್ಕೂ ಕಾಂಗ್ರೆಸ್ ಕನ್ನ ಹಾಕಿದೆ. ಕೆಂಪು ಬಸ್‍ಗಳಲ್ಲಿ ಪ್ರಯಾಣಿಕರೇ ಇಲ್ಲ. ಇದರಿಂದ ನಷ್ಟವಾಗುತ್ತಿದೆ ಎಂದರು.
ಅನ್ನಭಾಗ್ಯ ಯೋಜನೆಯದ್ದು ಮತ್ತೊಂದು ಕಥೆ. ನರೇಂದ್ರ ಮೋದಿ ಅವರು ಪ್ರತಿ ಕುಟುಂಬಕ್ಕೆ ಹತ್ತು ಕೆಜಿ ನೀಡುತ್ತಾ ಇದ್ದರು. ಕಾಂಗ್ರೆಸ್ ಸರಕಾರ ಹತ್ತು ಕೆಜಿ ಅಕ್ಕಿ ಕೊಡ್ತೇವೆ ಅಂದ್ರು. ಅದನ್ನೂ ಸರಿಯಾಗಿ ನೀಡಲಿಲ್ಲ. ಗ್ಯಾರಂಟಿಗಳಿಗೆ ಹಣ ಹೊಂದಿಸಲು ಲಕ್ಷಾಂತರ ಬಡವರ ರೇಷನ್ ಕಾರ್ಡ್ ಅನ್ನು ರದ್ದು ಮಾಡಿದ್ದೀರಿ ಎಂದು ದೂರಿದರು.
ರಾಜ್ಯ ಸರಕಾರ ಸಾಲಮನ್ನಾ ಮಾಡಲಿ :
ರಾಜ್ಯ ಸರಕಾರದ ವ್ಯಾಪ್ತಿಯ ಸಹಕಾರ ಸಂಘದಲ್ಲಿನ ರೈತರ ಸಾಲವನ್ನು ಮನ್ನಾ ಮಾಡಲು ರಾಜ್ಯ ಸರಕಾರವೇ ಮುಂದಾಗಬೇಕು. ಆಕಾಶದಲ್ಲಿ ನಕ್ಷತ್ರ ತೋರಿಸುವುದು ಬಿಟ್ಟು ಸರಕಾರ ಹೊಣೆಗಾರಿಕೆ ತೋರಿಸಲಿ. ಸಿಎಂ ಇದರಲ್ಲಿ ಹೊಣೆಗಾರಿಕೆಯಿಂದ ನುಣುಚಿಕೊಳ್ಳುವುದನ್ನು ಬಿಡಲಿ. ಕೇಂದ್ರದ ಮೇಲೆ ಕೈ ತೋರಿಸುವುದಷ್ಟೇ ಕೆಲಸ ಅಲ್ಲ. ಇಷ್ಟೊಂದು ಸಂಖ್ಯಾಬಲದ ಬಲಿಷ್ಠ ಸರಕಾರ ಜನರಿಗೆ ಆಸರೆಯಾಗದಿದ್ದರೆ ಏನು ಪ್ರಯೋಜನ ಎಂದು ಪ್ರಶ್ನೆ ಮಾಡಿದರು.
ಜನಾಂದೋಲವಾಗಿದೆ ನಮ್ಮ ಪಾದಯಾತ್ರೆ :
ದಿನೇ ದಿನೇ ನಮ್ಮ ಪಾದಯಾತ್ರೆ ಜನಾಂದೋಲವಾಗಿ ಪರಿವರ್ತನೆಯಾಗಿದೆ. ನಮ್ಮ ಯಶಸ್ಸು ನೋಡಿ ಪಾಪ ಮುಖ್ಯಮಂತ್ರಿ ಹತಾಶರಾಗಿ ಮಾತನಾಡುತ್ತಿದ್ದಾರೆ. ಹೆಲಿಕಾಪ್ಟರ್ ನಲ್ಲಿ ಬರಪೀಡಿತ ಪ್ರದೇಶ ವೀಕ್ಷಣೆ ಮಾಡುತ್ತಿದ್ದಾರೆ. ಜೀವನದಲ್ಲಿ ಒಮ್ಮೆಯೂ ಹಸಿರು ಶಾಲು ಹಾಕದ ಸಿಎಂ ನಮ್ಮ ಪಾದಯಾತ್ರೆ ಪರಿಣಾಮ ಈಗ ಹಸಿರು ಶಾಲು ಧರಿಸಿ ಉತ್ತರ ಕರ್ನಾಟಕಕ್ಕೆ ಭೇಟಿ ನೀಡುವ ಅನಿವಾರ್ಯತೆ ಸೃಷ್ಟಿಯಾಗಿದೆ. ಇದು ನಮ್ಮ ಜಯ ಎಂದರು.
ಮಾಜಿ ಸಚಿವ ಬಿ ಶ್ರೀರಾಮುಲು, ಮಾಜಿ ಶಾಸಕ ಅನಿಲ್ ಬೆನಕೆ, ಪಕ್ಷ ಮುಖಂಡರಾದ ಕೆ ವಿರೂಪಾಕ್ಷ, ಜಿಲ್ಲಾಧ್ಯಕ್ಷ ನವೀನ ಗುಳಗಣ್ಣನವರ್ ಉಪಸ್ಥಿತರಿದ್ದರು.