Kuknoor | ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿದ ಸಾರಿಗೆ ಬಸ್ : ಆರು ಪ್ರಯಾಣಿಕರಿಗೆ ಗಾಯ

ಗಾಯಾಳುಗಳನ್ನು ಕೊಪ್ಪಳ ಜಿಲ್ಲಾಸ್ಪತ್ರೆಗೆ ರವಾನೆ

Update: 2026-08-19 18:40 IST

ಕುಕನೂರು: ಚಾಲಕನ ನಿಯಂತ್ರಣ ತಪ್ಪಿದ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್‌ವೊಂದು ರಸ್ತೆ ಬದಿಯ ಹಳ್ಳಕ್ಕೆ ಇಳಿದ ಪರಿಣಾಮ ಆರು ಪ್ರಯಾಣಿಕರು ಗಾಯಗೊಂಡ ಘಟನೆ ತಾಲೂಕಿನ ಮಂಡಲಗಿರಿ ಗ್ರಾಮದ ಸಮೀಪ ಬುಧವಾರ ಮಧ್ಯಾಹ್ನ ನಡೆದಿದೆ.

ಗದಗದಿಂದ ಕುಕನೂರಿಗೆ ಬರುತ್ತಿದ್ದ ಬಸ್‌ ಬಟಪ್ಪನಹಳ್ಳಿ–ಮಂಡಲಗಿರಿ ಮಾರ್ಗದಲ್ಲಿ ಸಂಚರಿಸುತ್ತಿತ್ತು. ಮಂಡಲಗಿರಿ ಗ್ರಾಮದ ಕೆರೆ ಸಮೀಪದ ರಸ್ತೆ ತಿರುವಿನಲ್ಲಿ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ಬಸ್‌ ರಸ್ತೆ ಬದಿಯ ಹಳ್ಳಕ್ಕೆ ಇಳಿದಿದೆ.

ಬಸ್‌ನಲ್ಲಿ ಸುಮಾರು 40ರಿಂದ 50 ಪ್ರಯಾಣಿಕರಿದ್ದರು ಎನ್ನಲಾಗಿದ್ದು, ಘಟನೆಯ ರಭಸಕ್ಕೆ ಹಲವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಆರು ಮಂದಿಗೆ ಹೆಚ್ಚಿನ ಚಿಕಿತ್ಸೆ ಅಗತ್ಯವಾಗಿದ್ದು, ಗಾಯಾಳುಗಳನ್ನು ಕುಕನೂರು ಸಮುದಾಯ ಆರೋಗ್ಯ ಕೇಂದ್ರಕ್ಕೆ ಕರೆದೊಯ್ದು ಪ್ರಾಥಮಿಕ ಚಿಕಿತ್ಸೆ ನೀಡಲಾಯಿತು. ಬಳಿಕ ಆರು ಮಂದಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಗೆ ಕಳುಹಿಸಲಾಯಿತು. ಅದೃಷ್ಟವಶಾತ್ ಯಾವುದೇ ಪ್ರಾಣಹಾನಿ ಸಂಭವಿಸಿಲ್ಲ.

ಅಪಘಾತದ ಸುದ್ದಿ ತಿಳಿದು ಕುಕನೂರು ಪೊಲೀಸ್ ಠಾಣೆಯ ಪಿಎಸ್‌ಐ ಎಸ್.ಪಿ. ನಾಯಕ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಗಾಯಾಳುಗಳ ಆರೋಗ್ಯ ವಿಚಾರಿಸಿ, ಪ್ರಯಾಣಿಕರಿಂದ ಮಾಹಿತಿ ಪಡೆದರು. ಅಪಘಾತಕ್ಕೆ ನಿಖರ ಕಾರಣ ತಿಳಿಯಲು ತನಿಖೆ ನಡೆಸಲಾಗುವುದು ಎಂದು ತಿಳಿಸಿದರು.

ಬಸ್‌ಗಳ ತಾಂತ್ರಿಕ ಪರಿಶೀಲನೆಗೆ ಆಗ್ರಹ :

ಘಟನೆಯ ಹಿನ್ನೆಲೆಯಲ್ಲಿ ಸಾರಿಗೆ ಸಂಸ್ಥೆಯ ಬಸ್‌ಗಳ ತಾಂತ್ರಿಕ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲಿಸಬೇಕು ಎಂದು ಸಾರ್ವಜನಿಕರು ಆಗ್ರಹಿಸಿದ್ದಾರೆ. ಹಳೆಯ ಅಥವಾ ದೋಷಪೂರಿತ ಬಸ್‌ಗಳನ್ನು ಸಂಚಾರಕ್ಕೆ ಬಿಡುವುದರಿಂದ ಪ್ರಯಾಣಿಕರ ಜೀವಕ್ಕೆ ಅಪಾಯ ಎದುರಾಗಬಹುದು. ಸ್ಟೇರಿಂಗ್, ಬ್ರೇಕ್, ಟೈರ್ ಸೇರಿದಂತೆ ಪ್ರಮುಖ ತಾಂತ್ರಿಕ ವ್ಯವಸ್ಥೆಗಳನ್ನು ಪರಿಶೀಲಿಸಿದ ಬಳಿಕವೇ ಬಸ್‌ಗಳನ್ನು ಮಾರ್ಗಕ್ಕೆ ಬಿಡಬೇಕು ಎಂದು ಒತ್ತಾಯಿಸಿದ್ದಾರೆ.

ಘಟನಾ ಸ್ಥಳ ಪರಿಶೀಲಿಸಿದಾಗ ಚಾಲಕನ ನಿರ್ಲಕ್ಷ್ಯ ಮೇಲ್ನೋಟಕ್ಕೆ ಕಂಡುಬಂದಿದೆ. ಮುಂದಿನ ಹಂತದ ವಿಚಾರಣೆ ಹಾಗೂ ತನಿಖೆಯಿಂದ ಅಪಘಾತದ ನಿಖರ ಕಾರಣ ತಿಳಿಯಲಿದೆ.

-ಮಂಜುನಾಥ, ಕುಕನೂರು ಸಾರಿಗೆ ಘಟಕದ ಅಧಿಕಾರಿ

ಬಟಪ್ಪನಹಳ್ಳಿಯಿಂದ ಕುಕನೂರು ಕಡೆಗೆ ಬಸ್‌ನಲ್ಲಿ ಪ್ರಯಾಣಿಸುತ್ತಿದ್ದೆ. ಸೀಟಿನಲ್ಲಿ ಕುಳಿತಿದ್ದ ನಮಗೆ ಏನಾಗುತ್ತಿದೆ ಎನ್ನುವಷ್ಟರಲ್ಲಿ ಬಸ್‌ ಹಳ್ಳಕ್ಕೆ ಇಳಿಯಿತು. ನನಗೂ ತಲೆಗೆ ಗಾಯವಾಗಿದೆ. ಬಸ್‌ ಏಕಾಏಕಿ ರಭಸವಾಗಿ ಚಲಿಸಿದಂತಾಯಿತು. ಬಳಿಕ ಚಾಲಕನ ನಿಯಂತ್ರಣ ತಪ್ಪಿ ಹಳ್ಳಕ್ಕೆ ಇಳಿಯಿತು. ಚಾಲಕನ ನಿರ್ಲಕ್ಷ್ಯವೋ ಅಥವಾ ಬಸ್‌ನ ತಾಂತ್ರಿಕ ದೋಷವೋ ಎಂಬುದು ತನಿಖೆಯಿಂದ ತಿಳಿಯಬೇಕು.

-ಶರಣಬಸಪ್ಪ ದಾನಕೈ, ಪ್ರಯಾಣಿಕ

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News