ಸಾಂದರ್ಭಿಕ ಚಿತ್ರ | PC : magnific

ಕೊಪ್ಪಳ: ಕೊಪ್ಪಳ ತಾಲ್ಲೂಕಿನ ಗ್ರಾಮವೊಂದರ ಗೋದಾಮಿನಲ್ಲಿ ಅಪ್ರಾಪ್ತ ಬಾಲಕಿ ಮೇಲೆ ವ್ಯಕ್ತಿಯೊಬ್ಬ ಅತ್ಯಾಚಾರ  ಎಸಗಿದ ಆರೋಪ ಕೇಳಿಬಂದಿದೆ.

ಸಂತ್ರಸ್ತ ಬಾಲಕಿಯ ತಾಯಿ ನೀಡಿದ ದೂರಿನ ಪ್ರಕಾರ, ಬಾಲಕಿ ಯಲಬುರ್ಗಾ ತಾಲ್ಲೂಕಿನ ಗ್ರಾಮದ ಕಾಲೇಜಿನಲ್ಲಿ ವ್ಯಾಸಂಗ ಮಾಡುತ್ತಿದ್ದು, ಮುಖದ ಮೇಲೆ ಕಾಣಿಸಿಕೊಂಡಿದ್ದ ಗುಳ್ಳೆಗಳಿಗೆ ಚಿಕಿತ್ಸೆ ಪಡೆಯಲು ಕೊಪ್ಪಳಕ್ಕೆ ಹೋಗುವುದಾಗಿ ತಿಳಿಸಿ ಮನೆಯಿಂದ ತೆರಳಿದ್ದಳು. ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಮನೆಗೆ ವಾಪಸ್ ಬಂದ ಬಳಿಕ ಸುಸ್ತಾಗುತ್ತಿದೆ ಎಂದು ಹೇಳಿ ಮಲಗಿಕೊಂಡಿದ್ದಳು. ಇದರಿಂದ ಆತಂಕಗೊಂಡ ಕುಟುಂಬಸ್ಥರು ಆಕೆಯನ್ನು ಮತ್ತೆ ಆಸ್ಪತ್ರೆಗೆ ದಾಖಲಿಸಿದ್ದರು. ಈ ವೇಳೆ ಬಾಲಕಿ ತನ್ನ ಮೇಲೆ ಮುತ್ತಣ್ಣಕರಡಿ ಎಂಬಾತ ಅತ್ಯಾಚಾರ ಎಸಗಿರುವುದಾಗಿ ಕುಟುಂಬಸ್ಥರಿಗೆ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಬಾಲಕಿಗೆ ಮೂರ್ನಾಲ್ಕು ತಿಂಗಳ ಹಿಂದೆ ಆರೋಪಿ ಮುತ್ತಣ್ಣನ ಪರಿಚಯವಾಗಿತ್ತು. ಆತ ಬಾಲಕಿಯನ್ನು ಪ್ರೀತಿಸುವುದಾಗಿ ಹೇಳಿ ಆಕೆಯ ಹಿಂದೆ ಸುತ್ತಾಡುತ್ತಿದ್ದ. ಬಾಲಕಿ ತಾನು ಇನ್ನೂ ಚಿಕ್ಕವಳಾಗಿದ್ದು, ತನ್ನ ಹಿಂದೆ ಸುತ್ತಾಡದಂತೆ ಹಲವು ಬಾರಿ ಹೇಳಿದ್ದರೂ ಆತ ಕೇಳಿರಲಿಲ್ಲ ಎಂದು ದೂರಿನಲ್ಲಿ ತಿಳಿಸಲಾಗಿದೆ.

ಇತ್ತೀಚೆಗೆ ಆರೋಪಿ ಮೋಟಾರು ಸೈಕಲ್‌ನಲ್ಲಿ ಬಂದು ಬಾಲಕಿಯನ್ನು ಬಲವಂತವಾಗಿ ಕರೆದುಕೊಂಡು ಹೋಗಿ ಗೋದಾಮಿನಲ್ಲಿ ಲೈಂಗಿಕ ದೌರ್ಜನ್ಯ ಎಸಗಿದ್ದಾನೆ ಎಂದು ಬಾಲಕಿ ತಿಳಿಸಿದ್ದಾಳೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿದೆ.

ಈ ಕುರಿತು ಬಾಲಕಿಯ ತಾಯಿ ನೀಡಿದ ದೂರಿನ ಆಧಾರದ ಮೇಲೆ ಕೊಪ್ಪಳ ಮಹಿಳಾ ಪೊಲೀಸ್ ಠಾಣೆಯಲ್ಲಿ ಭಾನುವಾರ ಎಫ್‌ಐಆರ್ ದಾಖಲಿಸಲಾಗಿದ್ದು, ಪೊಲೀಸರು ಪ್ರಕರಣದ ತನಿಖೆ ಕೈಗೊಂಡಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor