Koppal | ಎರಡ್ಮೂರು ದಿನದಲ್ಲಿ ಹುಲಿ ಸೆರೆ ಹಿಡಿಯಲಾಗುವುದು : ಸಚಿವ ಶಿವರಾಜ ತಂಗಡಗಿ
ಕೊಪ್ಪಳ/ಕಾರಟಗಿ: ಗಂಗಾವತಿ ಭಾಗದಲ್ಲಿ ಜನರ ಆತಂಕಕ್ಕೆ ಕಾರಣವಾಗಿದ್ದ ಹುಲಿಯ ಚಲನವಲನ ಪತ್ತೆಯಾಗಿದ್ದು, ಸಿಸಿಟಿವಿಯಲ್ಲಿ ಹುಲಿಯ ಓಡಾಟ ದಾಖಲಾಗಿದೆ. ಹುಲಿಯನ್ನು ಸೆರೆ ಹಿಡಿಯಲು ತಜ್ಞರನ್ನು ಕರೆಸಲಾಗಿದ್ದು, ಎರಡ್ಮೂರು ದಿನಗಳಲ್ಲಿ ಹುಲಿ ಸೆರೆ ಹಿಡಿಯಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಹಾಗೂ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಹೇಳಿದರು.
ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಗಂಗಾವತಿ ತಾಲ್ಲೂಕಿನ ಅರಣ್ಯ ಭಾಗದಲ್ಲಿ ಕಾಣಿಸಿಕೊಂಡು ಆತಂಕ ಸೃಷ್ಟಿಸಿರುವ ಹುಲಿಯನ್ನು ಸೆರೆ ಹಿಡಿಯುವ ಕಾರ್ಯಾಚರಣೆ ಕುರಿತು ಮಾಹಿತಿ ಹಂಚಿಕೊಂಡರು.
ಅರಣ್ಯ ಅಧಿಕಾರಿಗಳೊಂದಿಗೆ ಮಾತನಾಡಿದ್ದೇನೆ. ಹುಲಿ ಹಿಡಿಯಲು ಪ್ರತ್ಯೇಕ ತಜ್ಞರು ಇದ್ದಾರೆ. ನಮ್ಮ ಅರಣ್ಯ ವಲಯದಲ್ಲಿ ಅವರು ಇಲ್ಲ. ಹೀಗಾಗಿ ಬಂಡೀಪುರ ಹಾಗೂ ದಾಂಡೇಲಿ ಅರಣ್ಯ ಪ್ರದೇಶಗಳಿಂದ ತಜ್ಞರನ್ನು ಕರೆಸಿದ್ದೇನೆ ಎಂದು ಮಾಹಿತಿ ನೀಡಿದರು.
ಹುಲಿ ಎಲ್ಲಿದೆ ಎಂಬ ಜಾಡು ಪತ್ತೆಯಾಗಿದೆ. ಎಲ್ಲಾ ಕಡೆ ಸಿಸಿಟಿವಿ ಅಳವಡಿಸಲಾಗಿದ್ದು, ಹುಲಿಯ ಚಲನವಲನವನ್ನು ಟ್ರ್ಯಾಕ್ ಮಾಡಲಾಗುತ್ತಿದೆ. ಹುಲಿಯ ಚಲನವಲನಗಳು ಸಿಸಿಟಿವಿಯಲ್ಲಿ ದಾಖಲಾಗುತ್ತಿದ್ದು, 2–3 ದಿನಗಳಲ್ಲಿ ಸೆರೆ ಹಿಡಿಯಲಾಗುವುದು. ಹೀಗಾಗಿ ಸಾರ್ವಜನಿಕರು ಆತಂಕಪಡುವ ಅಗತ್ಯವಿಲ್ಲ ಎಂದು ಸ್ಪಷ್ಟಪಡಿಸಿದರು.
ಸಚಿವ ಬಸವರಾಜ ರಾಯರೆಡ್ಡಿ ಅವರ ಹೇಳಿಕೆ ಕುರಿತ ಪ್ರಶ್ನೆಗೆ ಉತ್ತರಿಸಿದ ಅವರು, ‘ನಾನು ಎಲ್ಲಾ ಧರ್ಮಗಳನ್ನೂ ಗೌರವಿಸುವ ವ್ಯಕ್ತಿ. ನನಗೆ ಹಿಂದೂ, ಮುಸ್ಲಿಂ, ಕ್ರಿಶ್ಚಿಯನ್, ಸಿಖ್ ಸೇರಿದಂತೆ ಎಲ್ಲಾ ಧರ್ಮಗಳ ಮೇಲೂ ಗೌರವವಿದೆ. ರಾಯರೆಡ್ಡಿ ಅವರು ಯಾವ ಪರಿಸ್ಥಿತಿಯಲ್ಲಿ ಆ ರೀತಿ ಮಾತನಾಡಿದ್ದಾರೆ ಎಂಬುದು ಗೊತ್ತಿಲ್ಲ. ಬಿಜೆಪಿಯವರಿಗೆ ಮಾಡಲು ಬೇರೆ ಕೆಲಸವಿಲ್ಲ. ಹೀಗಾಗಿ ಬರೀ ಅದನ್ನೇ ಮಾತನಾಡುತ್ತಿದ್ದಾರೆ’ ಎಂದು ತಿರುಗೇಟು ನೀಡಿದರು.