ಕೊಪ್ಪಳ: ನೀಟ್‌ನಲ್ಲಿ ಬಡ ವಿದ್ಯಾರ್ಥಿಯ ಸಾಧನೆ

Update: 2026-07-24 12:36 IST

ಕೊಪ್ಪಳ : ರಾಷ್ಟ್ರೀಯ ಅರ್ಹತಾ ಮತ್ತು ಪ್ರವೇಶ ಪರೀಕ್ಷೆ (ನೀಟ್) ನಲ್ಲಿ ಕೊಪ್ಪಳ ತಾಲೂಕಿನ ಸಣ್ಣ ಹಳ್ಳಿ ಹನುಮನಳ್ಳಿಯ ಪ್ರತಿಭಾವಂತ ವಿದ್ಯಾರ್ಥಿ ಪುಟ್ಟರಾಜು ಅವರು 720 ಅಂಕಗಳಿಗೆ 511 ಅಂಕಗಳನ್ನು ಗಳಿಸುವ ಮೂಲಕ ಇಡೀ ದೇಶಕ್ಕೆ ಎಸ್‌ಟಿ ವಿಭಾಗದಲ್ಲಿ 694 ರ್ಯಾಂಕ್ ಪಡೆಯುವ ಮೂಲಕ ಗಮನಾರ್ಹ ಸಾಧನೆ ಮಾಡಿದ್ದಾರೆ.

ಗ್ರಾಮೀಣ ಹಿನ್ನೆಲೆಯಿಂದ ಬಂದಿರುವ ಪುಟ್ಟರಾಜು ಅವರ ಈ ಸಾಧನೆ ಇಡೀ ಗ್ರಾಮಕ್ಕೆ ಮಾತ್ರವಲ್ಲದೆ ಕೊಪ್ಪಳ ಜಿಲ್ಲೆಯ ಶಿಕ್ಷಣ ಕ್ಷೇತ್ರಕ್ಕೂ ಹೆಮ್ಮೆಯ ವಿಷಯವಾಗಿದೆ. ವೈದ್ಯರಾಗುವ ಕನಸನ್ನು ನನಸಾಗಿಸಿಕೊಳ್ಳುವ ದೃಢ ಸಂಕಲ್ಪದೊಂದಿಗೆ ಶಿಸ್ತು, ನಿರಂತರ ಅಭ್ಯಾಸ ಹಾಗೂ ಕಠಿಣ ಪರಿಶ್ರಮದಿಂದ ಅವರು ಈ ಯಶಸ್ಸು ಸಾಧಿಸಿದ್ದಾರೆ.

ನೀಟ್ ಪರೀಕ್ಷೆಯನ್ನು ದೇಶದ ಅತ್ಯಂತ ಕಠಿಣ ಸ್ಪರ್ಧಾತ್ಮಕ ಪರೀಕ್ಷೆಗಳಲ್ಲಿ ಒಂದೆಂದು ಪರಿಗಣಿಸಲಾಗುತ್ತದೆ. ಇಂತಹ ಪರೀಕ್ಷೆಯಲ್ಲಿ 579 ಅಂಕಗಳನ್ನು ಗಳಿಸಿರುವುದು ಪುಟ್ಟರಾಜು ಅವರ ಪ್ರತಿಭೆ, ಪರಿಶ್ರಮ ಹಾಗೂ ಆತ್ಮವಿಶ್ವಾಸಕ್ಕೆ ಸಾಕ್ಷಿಯಾಗಿದೆ. ಈ ಸಾಧನೆಯಿಂದ ಸರಕಾರಿ ವೈದ್ಯಕೀಯ ಕಾಲೇಜಿನಲ್ಲಿ ಸೀಟು ಪಡೆಯುವ ಸಾಧ್ಯತೆ ಹೆಚ್ಚಿದ್ದು, ಅವರ ಭವಿಷ್ಯದ ವೈದ್ಯಕೀಯ ಶಿಕ್ಷಣಕ್ಕೆ ಭದ್ರ ಅಡಿಪಾಯವಾಗಿದೆ.

ತಮ್ಮ ಕುಟುಂಬದೊಂದಿಗೆ ಹನುಮನಲ್ಲಿಯ ತೋಟದಮನೆಯಲ್ಲಿ ವಾಸವಿರುವ ಇವರು, ಮುಖ್ಯವಾಗಿ ಕೃಷಿಯನ್ನೇ ತಮ್ಮ ಕಸಬಾಗಿಸಿಕೊಂಡಿದ್ದಾರೆ. ತಮ್ಮ ಕುಟುಂಬದ ಪರಿಸ್ಥಿತಿಯನ್ನು ಅರಿತು ಕಠಿಣ ಪರಿಶ್ರಮ ದಿಂದ ಓದಿ ಈ ಸಾಧನೆ ಮಾಡಿದ್ದಾರೆ.

ಪುಟ್ಟರಾಜು ಬರೇ ಓದುವುದಷ್ಟೇ ಅಲ್ಲದೆ ಬಿಡುವಿನ ಸಮಯದಲ್ಲಿ ಹೊಲದಲ್ಲಿ ಕೆಲಸ ಮಾಡುವುದು, ಕುರಿಗಳಿಗೆ ಮೇವು ಹಾಕುವುದು, ಕಸ ಗುಡಿಸುವುದು, ಹಾಲು ಕರಿಯುವಂತಹ ಕೆಲಸ ಮಾಡುತ್ತಲೇ ಈ ಸಾಧನೆ ಮಾಡಿದ್ದಾರೆ.

ಈ ಸಾಧನೆಯ ಹಿಂದೆ ಪುಟ್ಟರಾಜು ಅವರ ಕುಟುಂಬದ ಸದಸ್ಯರು, ಶಿಕ್ಷಕರು ಹಾಗೂ ಮಾರ್ಗದರ್ಶಕರ ಪ್ರೋತ್ಸಾಹ ಮತ್ತು ಮಾರ್ಗದರ್ಶನ ಪ್ರಮುಖ ಪಾತ್ರ ವಹಿಸಿದೆ.

ನನ್ನ ತಮ್ಮ ಇಷ್ಟು ಅಂಕ ತೆಗೆದುಕೊಂಡಿದ್ದು ನನಗೆ ಬಹಳ ಸಂತೋಷ ತಂದು ಕೊಟ್ಟಿದೆ, ರಜೆಯಲ್ಲಿ ಮನೆಗೆ ಬಂದಾಗ ಹೊಲಕ್ಕೆ ಬಂದು ಎಲ್ಲಾ ಕೆಲಸ ಮಾಡುತ್ತಾನೆ. ಕುರಿ ಕೂಡ ಕಾಯುತ್ತಾನೆ. ವೈದ್ಯನಗುವ ತನ್ನ ಕನಸು ಈಡೇರಿಸಿಕೊಳ್ಳಲಿ ಎಂದು ಹಾರೈಸುತ್ತೇನೆ.

-ಮೇಘರಾಜ ಹನುಮನಹಳ್ಳಿ

ಪುಟ್ಟರಾಜನ ಅಣ್ಣಾ

ನನ್ನ ಮಗ ಪರೀಕ್ಷೆಯಲ್ಲಿ ಪಾಸ್ ಆಗಿದ್ದು ನನಗೆ ಸಂತೋಷ ಆಗಿದೆ. ನನ್ನ ಮಗ ಬರೀ ಓದೋದು ಅಷ್ಟೇ ಅಲ್ಲ, ನಮ್ಮ ಜೊತೆ ಕೆಲಸ ಕೂಡ ಮಾಡುತಿದ್ದ. ಕಷ್ಟಕ್ಕೆ ಫಲ ಸಿಕ್ಕಿದೆ, ನನ್ನ ಮಗ ಹೊಸ ಬಟ್ಟೆ ಕೇಳಲಿಲ್ಲ, ಅವನ ಅಣ್ಣ ಉಟ್ಟು ಬಿಟ್ಟ ಬಟ್ಟೆ ಹಾಕಿಕೊಂಡು ಓದಿದ್ದಾನೆ. ನನಗೆ ಬಹಳ ಸಂತೋಷ ಅನಿಸುತ್ತಿದೆ.

-ಸುವರ್ಣ ಮಹಾಬಲೇಶ

ಪುಟ್ಟರಾಜನ ತಾಯಿ

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News