ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿಯಲ್ಲಿ ಗೋಲ್ಮಾಲ್

ಆಯುಕ್ತರ ಹೆಸರಿನಲ್ಲಿ ಖಾತೆ ಸೃಷ್ಠಿಸಿ 7.80 ಲಕ್ಷ ರೂ. ನುಂಗಿದ ಹೊರ ಗುತ್ತಿಗೆ ನೌಕರ

Update: 2026-07-24 00:02 IST

ಕೊಪ್ಪಳ: ನಿವೇಶನ ಕೊಡಿಸುವುದಾಗಿ ನಂಬಿಸಿ, ಕೊಪ್ಪಳ ನಗರಾಭಿವೃದ್ಧಿ ಪ್ರಾಧಿಕಾರದ (ಕುಡಾ) ಆಯುಕ್ತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಸೃಷ್ಟಿಸಿ 7.80 ಲಕ್ಷ ರೂ. ವಂಚಿಸಿರುವ ಪ್ರಕರಣ ಬೆಳಕಿಗೆ ಬಂದಿದೆ. ಈ ಸಂಬಂಧ ಕುಡಾದ ಮಾಜಿ ಹೊರಗುತ್ತಿಗೆ ನೌಕರ ರವೀಂದ್ರಕುಮಾರ್ ವಿರುದ್ಧ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಗಂಗಾವತಿಯ ಬಸವಣ್ಣ ಸರ್ಕಲ್ ನಿವಾಸಿ ಬನಶಂಕರಿ ಅವರು ಕುಡಾದ ನಿವೇಶನಕ್ಕಾಗಿ ಅರ್ಜಿ ಸಲ್ಲಿಸಿದ್ದರು. ಈ ವೇಳೆ ಕುಡಾ ಕಚೇರಿಯಲ್ಲಿ ಹೊರಗುತ್ತಿಗೆ ನೌಕರನಾಗಿ ಕಾರ್ಯನಿರ್ವಹಿಸಿದ್ದ ರವೀಂದ್ರಕುಮಾರ್, ನಿವೇಶನ ಮಂಜೂರು ಮಾಡಿಸುವುದಾಗಿ ನಂಬಿಸಿ ಆಯುಕ್ತರ ಹೆಸರಿನ ನಕಲಿ ಬ್ಯಾಂಕ್ ಖಾತೆಗೆ 7.80 ಲಕ್ಷ ರೂ. ಜಮಾ ಮಾಡಿಸಿಕೊಂಡು ವಂಚನೆ ಎಸಗಿದ್ದಾನೆ ಎಂದು ಆರೋಪಿಸಲಾಗಿದೆ.

ಹಣ ಪಾವತಿಸಿದ ಬಳಿಕ ಯಾವುದೇ ಪ್ರತಿಕ್ರಿಯೆ ಸಿಗದ ಹಿನ್ನೆಲೆಯಲ್ಲಿ ಬನಶಂಕರಿ ಅವರು ಕುಡಾ ಆಯುಕ್ತರನ್ನು ಸಂಪರ್ಕಿಸಿ ಲಿಖಿತ ದೂರು ನೀಡಿದಾಗ ಪ್ರಕರಣ ಬಹಿರಂಗವಾಗಿದೆ.

15 ವರ್ಷ ಸೇವೆ, ಬಳಿಕ ವಜಾ :

ರವೀಂದ್ರಕುಮಾರ್ ಸುಮಾರು 15 ವರ್ಷಗಳ ಕಾಲ ದಿನಗೂಲಿ ಆಧಾರದ ಮೇಲೆ ಕುಡಾದ ಲೆಕ್ಕಪತ್ರ ಮತ್ತು ಇಎಸ್ಟಿ ವಿಭಾಗದಲ್ಲಿ ಕಾರ್ಯನಿರ್ವಹಿಸಿದ್ದ. ದುರ್ನಡತೆಯ ಆರೋಪದ ಹಿನ್ನೆಲೆಯಲ್ಲಿ ಈ ವರ್ಷದ ಜನವರಿ 12ರಂದು ಸೇವೆಯಿಂದ ವಜಾಗೊಳಿಸಲಾಗಿತ್ತು. ಬಳಿಕ ವೀರೇಶ ಸೌಡಿ ಅವರನ್ನು ನೇಮಕ ಮಾಡಲಾಗಿದ್ದರೂ, ಕಚೇರಿ ದಾಖಲೆಗಳ ಹಸ್ತಾಂತರಕ್ಕೆ ರವೀಂದ್ರ ಸಹಕರಿಸಿರಲಿಲ್ಲ ಎಂದು ತಿಳಿದುಬಂದಿದೆ.

ಆಯುಕ್ತರ ಹೆಸರಿನಲ್ಲಿ ಖಾತೆ, ಚೆಕ್‌ಗೂ ನಕಲಿ ಸಹಿ :

ಕುಡಾದ ವಿವಿಧ ಬ್ಯಾಂಕ್ ಖಾತೆಗಳ ಮಾಹಿತಿ ಹೊಂದಿದ್ದ ರವೀಂದ್ರ, ಜೂನ್ 11ರಂದು ಆಯುಕ್ತರ ಹೆಸರಿನಲ್ಲಿ ನಕಲಿ ಬ್ಯಾಂಕ್ ಖಾತೆ ಬಳಸಿ ಬನಶಂಕರಿಯಿಂದ ಹಣ ಜಮಾ ಮಾಡಿಸಿಕೊಂಡಿದ್ದಾನೆ. ಬಳಿಕ ಆಯುಕ್ತರ ಚೆಕ್‌ಗೆ ನಕಲಿ ಸಹಿ ಹಾಕಿ, ಕಚೇರಿಯ ಮುದ್ರೆ ಬಳಸಿ ಆರ್‌ಟಿಜಿಎಸ್ ಮೂಲಕ ಹಣವನ್ನು ತನ್ನ ಖಾತೆಗೆ ವರ್ಗಾಯಿಸಿಕೊಂಡಿದ್ದಾನೆ ಎಂದು ಆರೋಪಿಸಲಾಗಿದೆ.

ಅಧಿಕಾರಿಗಳಿಗೂ ಗೊತ್ತಿರದ ಖಾತೆ :

ಕೊಪ್ಪಳದ ಎಚ್‌ಡಿಎಫ್‌ಸಿ ಬ್ಯಾಂಕ್‌ನಲ್ಲಿ ಎರಡು ವರ್ಷಗಳ ಹಿಂದೆ ಆಯುಕ್ತರ ಹೆಸರಿನಲ್ಲಿ ಖಾತೆ ತೆರೆಯಲಾಗಿದ್ದು, ಅದರ ಮಾಹಿತಿ ಕುಡಾ ಅಧಿಕಾರಿಗಳು ಹಾಗೂ ಪ್ರಾಧಿಕಾರದ ಅಧ್ಯಕ್ಷರಿಗೂ ಇರಲಿಲ್ಲ ಎಂದು ತಿಳಿದು ಬಂದಿದೆ. ನಗರದ ವಿವಿಧ ಬ್ಯಾಂಕ್‌ಗಳಲ್ಲಿ ಆಯುಕ್ತರ ಹೆಸರಿನಲ್ಲಿ ಒಟ್ಟು 11 ಖಾತೆಗಳಿದ್ದು, ಅವುಗಳ ಸಂಪೂರ್ಣ ಮಾಹಿತಿ ಅಧಿಕಾರಿಗಳ ಬಳಿ ಇರಲಿಲ್ಲ ಎನ್ನಲಾಗಿದೆ.

ತನಿಖೆ ಆರಂಭ :

ಪ್ರಕರಣ ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಕುಡಾ ಅಧಿಕಾರಿಗಳು ಸಭೆ ನಡೆಸಿ ರವೀಂದ್ರಕುಮಾರ್ ವಿರುದ್ಧ ನಗರ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ. ಮಹಿಳೆ ಜಮಾ ಮಾಡಿದ್ದ ಹಣವನ್ನು ಆರೋಪಿಯು ಈಗಾಗಲೇ ಬ್ಯಾಂಕ್‌ನಿಂದ ಹಿಂಪಡೆದಿರುವ ಶಂಕೆ ವ್ಯಕ್ತವಾಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕುಡಾ ಆಯುಕ್ತ ಶರಣಪ್ಪ, “ಇದೇ ರೀತಿಯ ಇನ್ನಷ್ಟು ವಂಚನೆ ಪ್ರಕರಣಗಳು ನಡೆದಿವೆಯೇ ಎಂಬುದು ಸಮಗ್ರ ತನಿಖೆಯ ಬಳಿಕವೇ ಗೊತ್ತಾಗಲಿದೆ. ಸದ್ಯ ನಗರ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ,” ಎಂದು ತಿಳಿಸಿದ್ದಾರೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಎಂ.ಡಿ ಅಖೀಲ್ ಉಡೇವು

contributor

Similar News