Koppal | ಸೇವಾ ಭದ್ರತೆ ಸಿಗುವವರೆಗೂ ಹೋರಾಟ ನಿಲ್ಲದು: ಡಾ.ಹನುಮಂತಗೌಡ ಕಲ್ಮನಿ
ಕೊಪ್ಪಳ: ಹಲವು ವರ್ಷಗಳಿಂದ ರಾಜ್ಯದ ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವ ನಮ್ಮ ಬೇಡಿಕೆಗಳನ್ನು ಸರ್ಕಾರ ನಿರ್ಲಕ್ಷಿಸುತ್ತಿರುವುದು ಸರಿಯಲ್ಲ. ಬೆಳಗಾವಿಯಲ್ಲಿ ನಡೆಯಲಿರುವ ಚಳಿಗಾಲದ ಅಧಿವೇಶನದ ವೇಳೆ ಹೋರಾಟ ರೂಪಿಸಲಾಗುತ್ತಿದ್ದು, ನಾಡಿನ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರು ಹಾಸಿಗೆ ಸಮೇತ ಹೋರಾಟದಲ್ಲಿ ಪಾಲ್ಗೊಳ್ಳಲು ಬೆಳಗಾವಿಗೆ ಆಗಮಿಸಬೇಕು ಎಂದು ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಡಾ.ಹನುಮಂತಗೌಡ ಕಲ್ಮನಿ ಕರೆ ನೀಡಿದರು.
ನಗರದ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜಿನಲ್ಲಿ ಶನಿವಾರ ನಡೆದ ಅತಿಥಿ ಉಪನ್ಯಾಸಕರ ಸಮಸ್ಯೆಗಳು ಹಾಗೂ ಬೆಳಗಾವಿ ಅಧಿವೇಶನದ ವೇಳೆ ಹೋರಾಟದ ರೂಪುರೇಷೆ ಸಿದ್ಧಪಡಿಸುವ ಕುರಿತ ಪೂರ್ವಭಾವಿ ಸಭೆಯಲ್ಲಿ ಅವರು ಮಾತನಾಡಿದರು.
ಸರ್ಕಾರ ಈಗಾಗಲೇ ನಮ್ಮಲ್ಲೇ ಶೈಕ್ಷಣಿಕ ಸಂಯೋಜಕರು ಮತ್ತು ಅತಿಥಿ ಉಪನ್ಯಾಸಕರು ಎಂದು ವಿಭಜನೆ ಮಾಡಿದೆ. ಆದರೆ ನಾವೆಲ್ಲರೂ ಒಂದೇ. ಶೈಕ್ಷಣಿಕ ಸಂಯೋಜಕರ ಹುದ್ದೆಗಳನ್ನು ಮೂರು ವರ್ಷಗಳ ಬದಲಾಗಿ ಕಾಯಂಗೊಳಿಸಬೇಕು. ಅತಿಥಿ ಉಪನ್ಯಾಸಕರಾಗಿ ಕಾರ್ಯನಿರ್ವಹಿಸುತ್ತಿರುವವರಿಗೆ ಸೇವಾ ಭದ್ರತೆ ನೀಡಬೇಕು ಎಂದು ಆಗ್ರಹಿಸಿದರು.
ಸರ್ಕಾರದ ಪ್ರಣಾಳಿಕೆಯಲ್ಲಿ ಘೋಷಿಸಿರುವಂತೆ ಅತಿಥಿ ಉಪನ್ಯಾಸಕರಿಗೆ ಸೇವಾ ಭದ್ರತೆ ಒದಗಿಸಬೇಕು. 2009ರ ಎಂಫಿಲ್ ಪದವಿಯನ್ನು ಪರಿಗಣಿಸಬೇಕು. ಸೇವೆಯಿಂದ ನಿವೃತ್ತರಾದ ಬಳಿಕ ನೀಡುವ ಐದು ಲಕ್ಷ ರೂ. ಇಡುಗಂಟನ್ನು 50 ಲಕ್ಷ ರೂ. ಗಳಿಗೆ ಏರಿಸಬೇಕು. ಅತಿಥಿ ಉಪನ್ಯಾಸಕರನ್ನು ಆರೋಗ್ಯ ವಿಮೆಯ ವ್ಯಾಪ್ತಿಗೆ ಒಳಪಡಿಸಬೇಕು ಎಂಬ ಹಲವು ಬೇಡಿಕೆಗಳನ್ನು ಮುಂದಿಟ್ಟುಕೊಂಡು ಬೆಳಗಾವಿ ಅಧಿವೇಶನದ ವೇಳೆ ಹೋರಾಟ ನಡೆಸಲಾಗುವುದು ಎಂದರು.
ರಾಜ್ಯದ ಸುಮಾರು 430 ಸರ್ಕಾರಿ ಪ್ರಥಮ ದರ್ಜೆ ಕಾಲೇಜುಗಳಲ್ಲಿ ಕಾರ್ಯನಿರ್ವಹಿಸುತ್ತಿರುವ ಅತಿಥಿ ಉಪನ್ಯಾಸಕರು ಹಾಗೂ ಶೈಕ್ಷಣಿಕ ಸಂಯೋಜಕರು ಹೋರಾಟದ ದಿನಾಂಕ ನಿಗದಿಯಾದ ಬಳಿಕ ಹಾಸಿಗೆ ಸಮೇತ ಬೆಳಗಾವಿಗೆ ಆಗಮಿಸಬೇಕು. ಈ ಬಾರಿ ಪ್ರತಿಬಾರಿಯಂತೆ ಸಾಂಕೇತಿಕ ಹೋರಾಟ ನಡೆಸದೆ, ಬೇಡಿಕೆಗಳು ಈಡೇರುವವರೆಗೂ ಪ್ರತಿಭಟನೆ ಮುಂದುವರಿಸಲಾಗುವುದು ಎಂದು ಕಲ್ಮನಿ ತಿಳಿಸಿದರು.
ಈ ವೇಳೆ ಅತಿಥಿ ಉಪನ್ಯಾಸಕರಾದ ಡಾ. ಸಣ್ಣ ದೇವೇಂದ್ರ ಸ್ವಾಮಿ, ಡಾ. ತುಕಾರಾಂ ನಾಯ್ಕ, ವಿಜಯಕುಮಾರ್ ಕುಲಕರ್ಣಿ, ವಾಸುದೇವ ಬುರ್ಲಿ, ಬಸವರಾಜ ಸಸಿಮಠ, ಗೀತಾ ಬನ್ನಿಕೊಪ್ಪ, ಡಾ. ಶಿವಬಸಪ್ಪ ಮಸ್ಕಿ, ಶರಣಪ್ಪ ತಳವಾರ, ಶ್ರೀಕಾಂತ ಸಿಂಗಾಪುರ, ಶಿವಪ್ರಸಾದ ಹಾದಿಮನಿ, ಜ್ಞಾನೇಶ್ವರ ಪತ್ತಾರ, ಸಂಗಮೇಶ್ವರ ಸಂಗಪ್ಪ ಮತ್ತಿತರರು ಮಾತನಾಡಿದರು.
ಮಹಿಳಾ ಕಾಲೇಜಿನ ಪ್ರಾಚಾರ್ಯ ಡಾ. ಗಣಪತಿ ಲಮಾಣಿ ಅವರು ಅತಿಥಿ ಉಪನ್ಯಾಸಕರ ಹೋರಾಟಕ್ಕೆ ಯಶಸ್ಸು ಸಿಗಲಿ ಎಂದು ಶುಭ ಹಾರೈಸಿದರು. ಈ ಸಂದರ್ಭದಲ್ಲಿ ಅವರನ್ನು ಸತ್ಕರಿಸಿ ಗೌರವಿಸಲಾಯಿತು. ಸಂಘಟನೆಯ ಜಿಲ್ಲಾಧ್ಯಕ್ಷ ಡಾ. ವೀರಣ್ಣ ಸಜ್ಜನರ ಅಧ್ಯಕ್ಷತೆ ವಹಿಸಿದ್ದರು. ಬಸವರಾಜ ಕರುಗಲ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಡಾ. ಮಹಾಂತೇಶ ನೆಲಾಗಣಿ ನಿರೂಪಿಸಿದರು. ಡಾ. ಬಸವರಾಜ ಡಿ. ಸ್ವಾಗತಿಸಿದರು. ರಿಯಾಜ್ ಪರ್ವಿನ್ ವಂದಿಸಿದರು.
ಸೇವಾ ಭದ್ರತೆ ಸಿಗುವವರೆಗೂ ಹೋರಾಟ ನಿಲ್ಲದು :
ಅತಿಥಿ ಉಪನ್ಯಾಸಕರ ಬೇಡಿಕೆಗಳ ಈಡೇರಿಕೆಗೆ ಆಗ್ರಹಿಸಿ ಹಲವು ವರ್ಷಗಳಿಂದ ಹೋರಾಟ ನಡೆಸುತ್ತಾ ಬರಲಾಗಿದೆ. ಆದರೆ ಈ ಬಾರಿ ಬೆಳಗಾವಿ ಅಧಿವೇಶನದ ವೇಳೆ ನಡೆಯುವ ಅತಿಥಿ ಉಪನ್ಯಾಸಕರ ಹೋರಾಟ ಅಂತಿಮ ಹೋರಾಟವಾಗಲಿದೆ. ಸೇವಾ ಭದ್ರತೆ ಸಿಗುವವರೆಗೂ ಹೋರಾಟ ನಿಲ್ಲುವುದಿಲ್ಲ ಎಂದು ಅತಿಥಿ ಉಪನ್ಯಾಸಕರ ಸಂಘಟನೆಯ ರಾಜ್ಯಾಧ್ಯಕ್ಷ ಡಾ. ಹನುಮಂತಗೌಡ ಕಲ್ಮನಿ ಎಚ್ಚರಿಸಿದರು.