ಕೊಪ್ಪಳ | ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯಿಂದ ಉಚಿತ ಮೃತದೇಹ ಸಾಗಣೆ ವಾಹನ ಲೋಕಾರ್ಪಣೆ
ಕೊಪ್ಪಳ: ನಗರದ ಸಮುದಾಯದ ಬಡವರು, ನಿರ್ಗತಿಕರು ಹಾಗೂ ಕಾಲೋನಿಗಳ ನಿವಾಸಿಗಳ ಅನುಕೂಲಕ್ಕಾಗಿ ‘ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿ’ ವತಿಯಿಂದ ಉಚಿತ ಮೃತದೇಹ ಸಾಗಣೆ ವಾಹನವನ್ನು ಸಾರ್ವಜನಿಕ ಸೇವೆಗೆ ಮುಕ್ತಗೊಳಿಸಲಾಯಿತು.
ನಗರದಲ್ಲಿ ಆಯೋಜಿಸಲಾಗಿದ್ದ ಕಾರ್ಯಕ್ರಮದಲ್ಲಿ ಮುಸ್ಲಿಂ ಸಮುದಾಯದ ಧರ್ಮಗುರುಗಳ ಪವಿತ್ರ ಹಸ್ತದಿಂದ ಈ ನೂತನ ಮೃತದೇಹ ಸಾಗಣೆ ವಾಹನ ಲೋಕಾರ್ಪಣೆಗೊಳಿಸಲಾಯಿತು.
ಈ ಸಂದರ್ಭದಲ್ಲಿ ಸಮುದಾಯದ ಮುಖಂಡರು ಮಾತನಾಡಿ, ಅನೇಕ ಬಡ ಕುಟುಂಬಗಳಿಗೆ ಮತ್ತು ದೂರದ ಕಾಲೋನಿಗಳ ಜನರಿಗೆ ಮೃತರ ಅಂತ್ಯಸಂಸ್ಕಾರದ ಸಮಯದಲ್ಲಿ ವಾಹನದ ವ್ಯವಸ್ಥೆ ಮಾಡಿಕೊಳ್ಳುವುದು ಕಷ್ಟಸಾಧ್ಯವಾಗಿತ್ತು. ಇದನ್ನು ಮನಗಂಡು ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯು ಹಮ್ಮಿಕೊಂಡಿರುವ ಈ ಜನೋಪಯೋಗಿ ಕಾರ್ಯ ಶ್ಲಾಘನೀಯವಾಗಿದೆ. ಕಷ್ಟದಲ್ಲಿದ್ದವರಿಗೆ ನೆರವಾಗಲು ಈ ವಾಹನ ಬಳಕೆಯಾಗಲಿದೆ," ಎಂದು ತಿಳಿಸಿದರು.
ಈ ಉದ್ಘಾಟನಾ ಸಮಾರಂಭದಲ್ಲಿ ಅಲ್ ಅಮೀನ್ ಬೈತುಲ್ ಮಾಲ್ ಕಮಿಟಿಯ ಸರ್ವ ಪದಾಧಿಕಾರಿಗಳು, ಉಲಮಾಗಳು, ಸಮಾಜದ ಹಿರಿಯ ಮುಖಂಡರು ಹಾಗೂ ಯುವಕರು ಉಪಸ್ಥಿತರಿದ್ದು ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.