ಕೊಪ್ಪಳ | ಸೆ.3ರಿಂದ ಪ್ರವಾದಿ ಮುಹಮ್ಮದ್ ಪೈಗಂಬರ್ ಸೀರತ್ ಅಭಿಯಾನ : ಇಲಿಯಾಸ್ ನಾಲ್ಬಂದ್
ಕೊಪ್ಪಳ : ಪ್ರವಾದಿ ಮುಹಮ್ಮದ್ (ಸ) ರವರ ಜನ್ಮದಿನದ ಅಂಗವಾಗಿ ಜಮಾಅತೆ ಇಸ್ಲಾಮಿ ಹಿಂದ್ ಕೊಪ್ಪಳ ಜಿಲ್ಲಾ ಘಟಕದ ವತಿಯಿಂದ 'ನ್ಯಾಯದ ಹರಿಕಾರ ಪೈಗಂಬರ್ ಮುಹಮ್ಮದ್ (ಸ)' ಶೀರ್ಷಿಕೆಯಡಿ ಸೆ.3 ರಿಂದ 14ರ ವರೆಗೆ ಹನ್ನೊಂದು ದಿನಗಳ ಕಾಲ ಸೀರತ್ ಅಭಿಯಾನವನ್ನು ಹಮ್ಮಿಕೊಳ್ಳಲಾಗಿದೆ ಎಂದು ಸೋಲಿಡಾರಿಟಿ ಯೂತ್ ಮೂವ್ಮೆಂಟ್ ರಾಜ್ಯ ಕಾರ್ಯದರ್ಶಿ ಇಲಿಯಾಸ್ ನಾಲ್ಬಂದ್ ಅವರು ಹೇಳಿದರು.
ಈ ಕುರಿತು ನಗರದಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ)ರ ನ್ಯಾಯ ಮತ್ತು ಮಾನವೀಯತೆಯ ಸಂದೇಶಗಳನ್ನು ನಾಡಿನ ಜನತೆಗೆ ತಲುಪಿಸುವುದು ಮತ್ತು ಪ್ರವಾದಿಯವರ ಬಗೆಗಿನ ತಪ್ಪು ಕಲ್ಪನೆಗಳನ್ನು ಹೋಗಲಾಡಿಸುವುದು ಹಾಗೂ ವಿವಿಧ ಧರ್ಮಿಯರ ನಡುವಿನ ಪರಸ್ಪರ ಸಂಬಂಧಗಳನ್ನು ಬಲಪಡಿಸಲು ಈ ಅಭಿಯಾನವನ್ನು ನಡೆಸಲಾಗುತ್ತಿದೆ ಎಂದು ಹೇಳಿದರು.
ಸೆ.3 ರಿಂದ 14 ರವರೆಗೆ ಈ ಅಭಿಯಾನ ನಡೆಯಲಿದ್ದು, ಈ ಸಮಯದಲ್ಲಿ ಹಳ್ಳಿಗಳಿಗೆ ತೆರಳಿ ಈ ಅಭಿಯಾನ ನಡೆಸಲಾಗುವುದು, ಈ ಅಭಿಯಾನದ ಪ್ರಯುಕ್ತ ಶಾಂತಿ ಪ್ರಕಾಶನ ಪ್ರಕಟಿಸಿರುವ ಪ್ರವಾದಿಯವರ ಬದುಕು ಮತ್ತು ಸಂದೇಶಗಳ ಬಗ್ಗೆ ಬೆಳಕು ಚೆಲ್ಲುವ ಎರಡು ಹೊಸ ಪುಸ್ತಕಗಳನ್ನು ಬಿಡುಗಡೆಗೊಳಿಸಲಾಗುವುದು ಎಂದು ಹೇಳಿದರು.
ಈ ಅಭಿಯಾನದಲ್ಲಿ ವಿವಿಧ ಸಮಾಜ ಸೇವಾ ಚಟುವಟಿಕೆಗಳು, ಸಂವಾದ, ವಿಚಾರಗೋಷ್ಠಿ, ಸಾರ್ವಜನಿಕ ಸಭೆಗಳು, ಪ್ರಬಂಧ ಸ್ಪರ್ಧೆಗಳಂತಹ ವಿವಿಧ ಕಾರ್ಯಕ್ರಮಗಳು ಜರುಗಳಿವೆ ಎಂದು ಹೇಳಿದರು.
ಸುದ್ದಿಗೊಷ್ಟಿಯಲ್ಲಿ ರಾಬ್ತಾಯೆ ಮಿಲ್ಲತ್ ನ ಅಧ್ಯಕ್ಷ ಲಾಯಕ್ ಅಲಿ, ಜಮಾಅತೆ ಇಸ್ಲಾಮಿ ಹಿಂದ್ ನ ಜಿಲ್ಲಾ ಅಧ್ಯಕ್ಷ ಹಿದಾಯತ್ ಅಲಿ, ಸೋಲಿಡಾರಿಟಿ ಯೂತ್ ಮೂವ್ಮೆಂಟ್ ನ ಜಿಲ್ಲಾದ್ಯಕ್ಷ ಎಜಾಜ್ ಖಾನ್, ಹೆಚ್ ಆರ್ ಎಸ್ ನ ಘಟಾಕಾಧ್ಯಕ್ಷ ಅಝ್ಗರ್ ಖಾನ್, ಮತ್ತು ರೋಷನ್ ಅಹ್ಮದ್ ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು.