ವಾಲ್ಮೀಕಿ ನಿಗಮ ಪ್ರಕರಣದಲ್ಲಿ ನನ್ನ ಪಾತ್ರವಿಲ್ಲ: ಸಚಿವ ಬಿ.ನಾಗೇಂದ್ರ
"ನಾನೀಗ ಪೆಟ್ಟು ತಿಂದ ಹುಲಿಯಂತಾಗಿದ್ದೇನೆ"
ಬಿ.ನಾಗೇಂದ್ರ
ಕೊಪ್ಪಳ: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದಿದೆ ಎನ್ನಲಾದ ಭ್ರಷ್ಟಾಚಾರ ಪ್ರಕರಣದಲ್ಲಿ ತಮ್ಮ ಯಾವುದೇ ಪಾತ್ರವಿಲ್ಲ ಎಂದು ಸಚಿವ ಬಿ.ನಾಗೇಂದ್ರ ಸ್ಪಷ್ಟಪಡಿಸಿದರು. ಈ ಕುರಿತು ಕಾನೂನು ಹೋರಾಟ ನಡೆಸುತ್ತಿದ್ದು, ತಾವು ನಿರಪರಾಧಿ ಎಂಬುದನ್ನು ಸಾಬೀತುಪಡಿಸುವ ವಿಶ್ವಾಸವಿದೆ ಎಂದು ಹೇಳಿದರು.
ಮುನಿರಾಬಾದ್‌ನಲ್ಲಿ ನಡೆದ ಐಸಿಸಿ ಸಭೆಯಲ್ಲಿ ಭಾಗವಹಿಸುವ ಮುನ್ನ ಮಂಗಳವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಮಾಡುತ್ತಿರುವ ಟೀಕೆಗಳಿಗೆ ಪ್ರತಿಕ್ರಿಯಿಸಿದರು.
‘ನಾನು ರಾಜೀನಾಮೆ ನೀಡುವವರೆಗೆ ಹೋರಾಟ ಮುಂದುವರಿಸುತ್ತೇವೆ’ ಎನ್ನುವುದು ಬಿಜೆಪಿಯವರ ಕೆಲಸ. ಅವರು ಅವರ ಕೆಲಸ ಮಾಡಲಿ, ನಾನು ನನ್ನ ಕೆಲಸ ಮಾಡುತ್ತೇನೆ. ಸದನದಲ್ಲಿ ಬಿಜೆಪಿಯವರು ಕೇಳುವ ಎಲ್ಲ ಪ್ರಶ್ನೆಗಳಿಗೆ ಉತ್ತರ ನೀಡುತ್ತೇನೆ ಎಂದು ಸಚಿವರು ಹೇಳಿದರು.
‘ಆಪಾದಿತನೇ ಹೊರತು ಅಪರಾಧಿ ಅಲ್ಲ’ :
ವಾಲ್ಮೀಕಿ ನಿಗಮ ಪ್ರಕರಣದಲ್ಲಿ ತಾವು ಸದ್ಯಕ್ಕೆ ಆಪಾದಿತರಷ್ಟೇ, ಅಪರಾಧಿ ಅಲ್ಲ ಎಂದು ಸ್ಪಷ್ಟಪಡಿಸಿದ ನಾಗೇಂದ್ರ, ಕಾನೂನು ಹೋರಾಟ ನಡೆಸುತ್ತಿದ್ದೇನೆ. ನ್ಯಾಯಾಲಯದಿಂದ ನಿರಪರಾಧಿಯಾಗಿ ಹೊರಬರುತ್ತೇನೆ ಎಂಬ ವಿಶ್ವಾಸವಿದೆ ಎಂದರು.
ಹೈಕಮಾಂಡ್ ಯಾವುದೇ ಖಾತೆ ನೀಡಿದರೂ ಸಮರ್ಥವಾಗಿ ನಿಭಾಯಿಸುವುದಾಗಿ ತಿಳಿಸಿದ ಅವರು, ‘ನಾನೀಗ ಪೆಟ್ಟು ತಿಂದ ಹುಲಿಯಂತಾಗಿದ್ದೇನೆ. ಈ ಬಾರಿ ಯಾವುದೇ ಖಾತೆ ನೀಡಿದರೂ ಅತ್ಯಂತ ಜವಾಬ್ದಾರಿಯಿಂದ, ಜನರು ಮೆಚ್ಚುವ ರೀತಿಯಲ್ಲಿ ಕೆಲಸ ಮಾಡುತ್ತೇನೆ’ ಎಂದು ಹೇಳಿದರು.
ಇತ್ತೀಚೆಗೆ ದೆಹಲಿ, ತಿರುಪತಿ ಹಾಗೂ ಶಿರಡಿ ಸೇರಿದಂತೆ ವಿವಿಧ ಸ್ಥಳಗಳಿಗೆ ತೆರಳಿದ್ದ ಕುರಿತು ಬಿಜೆಪಿ ಮಾಡಿರುವ ಟೀಕೆಗಳಿಗೂ ಸಚಿವರು ಪ್ರತಿಕ್ರಿಯಿಸಿದರು.