ಸಚಿವ ನಾಗೇಂದ್ರ ವಿರುದ್ಧ ಇರುವುದು ಆರೋಪ; ಆರೋಪಕ್ಕೂ ಶಿಕ್ಷೆಗೂ ವ್ಯತ್ಯಾಸವಿದೆ : ಸಚಿವ ಶಿವರಾಜ್‌ ತಂಗಡಗಿ

"ಜಾಮೀನಿನ ಮೇಲೆ ಬಿಜೆಪಿಗರು ಎಷ್ಟು ಮಂದಿ‌ ಹೊರಗೆ ಇದ್ದಾರೆ ಎಂಬುದು ತಿಳಿದಿಲ್ವಾ"

Update: 2026-08-11 19:44 IST

ಕೊಪ್ಪಳ (ಮುನಿರಾಬಾದ್) : ಸಚಿವ ಬಿ.ನಾಗೇಂದ್ರ ಅವರ ರಾಜೀನಾಮೆಗೆ ಆಗ್ರಹಿಸುತ್ತಿರುವ ಬಿಜೆಪಿ ನಾಯಕರು ಸಾಚಾಗಳಂತೆ ವರ್ತಿಸುತ್ತಿದ್ದಾರೆ. ಅವರು ಮೊದಲು ತಮ್ಮ ತಟ್ಟೆಯಲ್ಲಿ ಬಿದ್ದಿರುವ ಕತ್ತೆಯನ್ನು ನೋಡಿಕೊಳ್ಳಲಿ ಎಂದು ಸಚಿವ ಶಿವರಾಜ್ ಎಸ್.ತಂಗಡಗಿ ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು.

ಮುನಿರಾಬಾದ್‌ನಲ್ಲಿ ಮಂಗಳವಾರ ಮಾಧ್ಯಮದವರ ಪ್ರಶ್ನೆಗೆ ಪ್ರತಿಕ್ರಿಯಿಸಿದ ಅವರು, ನಾಗೇಂದ್ರ ಅವರ ವಿರುದ್ಧ ಇರುವುದು ಕೇವಲ ಆರೋಪ. ಆರೋಪ ಸಾಬೀತಾಗಿಲ್ಲ. ಆರೋಪಕ್ಕೂ ಶಿಕ್ಷೆಗೂ ವ್ಯತ್ಯಾಸವಿದೆ ಎಂದು ಹೇಳಿದರು.

ಜಾಮೀನಿನ ಮೇಲೆ ಬಿಜೆಪಿಗರು ಎಷ್ಟು ಮಂದಿ‌ ಹೊರಗೆ ಇದ್ದಾರೆ ಎಂಬುದು ತಿಳಿದಿಲ್ವಾ ? ಶಾಸಕ ಜನಾರ್ದನ ರೆಡ್ಡಿ ಸೇರಿದಂತೆ ತಮ್ಮ ಪಕ್ಷದ ನಾಯಕರ ವಿರುದ್ಧದ ಪ್ರಕರಣಗಳ ಬಗ್ಗೆ ಬಿಜೆಪಿಗರು ಉತ್ತರಿಸಲಿ ಎಂದು ಟೀಕಿಸಿದರು.

ತಮ್ಮ ಪಕ್ಷದ ಕೇಂದ್ರ ಗೃಹ ಸಚಿವರ ವಿರುದ್ಧ ಈ ಹಿಂದೆ ಕೇಳಿಬಂದಿದ್ದ ಆರೋಪಗಳನ್ನು ಹಾಗೂ ಅವರು ಪ್ರಸ್ತುತ ಹೊಂದಿರುವ ಹುದ್ದೆಯನ್ನು ಬಿಜೆಪಿ ನಾಯಕರು ನೆನಪಿಸಿಕೊಳ್ಳಬೇಕು ಎಂದು ಸಚಿವರು ವ್ಯಂಗ್ಯವಾಡಿದರು.

ಪ್ರಮುಖ ವಿರೋಧ ಪಕ್ಷವಾಗಿರುವ ಬಿಜೆಪಿಗೆ ವಿಧಾನಮಂಡಲ ಅಧಿವೇಶನದಲ್ಲಿ ಚರ್ಚಿಸಲು ಯಾವುದೇ ವಿಷಯವಿಲ್ಲ. ಹೀಗಾಗಿ ಸಚಿವ ನಾಗೇಂದ್ರ ಅವರ ಹೆಸರನ್ನು ಪ್ರಸ್ತಾಪಿಸಿ ಕಲಾಪಕ್ಕೆ ಅಡ್ಡಿಪಡಿಸಲು ಮುಂದಾಗಿದೆ ಎಂದು ಆರೋಪಿಸಿದರು.

‘ಖಾತೆ ಹಂಚಿಕೆ ಹೈಕಮಾಂಡ್ ನಿರ್ಧಾರ’ :

ಖಾತೆ ಹಂಚಿಕೆ ಕುರಿತು ಹೈಕಮಾಂಡ್ ಹಾಗೂ ಮುಖ್ಯಮಂತ್ರಿ ನಿರ್ಧಾರ ಕೈಗೊಳ್ಳಲಿದ್ದಾರೆ. ಯಾವುದೇ ಖಾತೆ ನೀಡಿದರೂ ಜವಾಬ್ದಾರಿಯಿಂದ ನಿರ್ವಹಿಸಲಾಗುವುದು ಎಂದು ಶಿವರಾಜ ತಂಗಡಗಿ ಹೇಳಿದರು.

ತಮ್ಮನ್ನು ಸಚಿವರನ್ನಾಗಿ ಮಾಡಿದ ಹಿನ್ನೆಲೆಯಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಧನ್ಯವಾದ ತಿಳಿಸಲು ತೆರಳಿದ್ದೆ ಎಂದು ಅವರು ಸ್ಪಷ್ಟಪಡಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News