ಯಲಬುರ್ಗಾ | ಕೊನಸಾಗರದಲ್ಲಿ ʼಮದ್ಯವ್ಯಸನ ಮುಕ್ತ ಗ್ರಾಮ ಆಂದೋಲನʼ ಗ್ರಾಮಸಭೆ
ಯಲಬುರ್ಗಾ : ತಾಲ್ಲೂಕಿನ ಕೊನಸಾಗರ ಗ್ರಾಮದಲ್ಲಿ ಪೊಲೀಸ್ ಇಲಾಖೆ, ಅಬಕಾರಿ ಇಲಾಖೆ ಹಾಗೂ ಗ್ರಾಮ ಪಂಚಾಯತ್‌ಗಳ ಸಹಯೋಗದಲ್ಲಿ ಮದ್ಯವ್ಯಸನ ಮುಕ್ತ ಗ್ರಾಮ ಆಂದೋಲನದ ಅಂಗವಾಗಿ ಗ್ರಾಮಸಭೆ ನಡೆಸಲಾಯಿತು.
ಸಭೆಯಲ್ಲಿ ಅಕ್ರಮ ಮದ್ಯ ಮಾರಾಟ, ಮದ್ಯವ್ಯಸನದಿಂದ ಉಂಟಾಗುವ ಸಾಮಾಜಿಕ ಸಮಸ್ಯೆಗಳು ಹಾಗೂ ಅವುಗಳ ನಿಯಂತ್ರಣ ಕುರಿತು ವಿಸ್ತೃತ ಚರ್ಚೆ ನಡೆಯಿತು. ಅಕ್ರಮವಾಗಿ ಮದ್ಯ ಮಾರಾಟ ಮಾಡುವವರ ವಿರುದ್ಧ ಕಟ್ಟುನಿಟ್ಟಿನ ಕಾನೂನು ಕ್ರಮ ಜರುಗಿಸಲಾಗುವುದು ಎಂದು ಅಧಿಕಾರಿಗಳು ಎಚ್ಚರಿಸಿದರು.
ಯಾರಾದರೂ ಅಕ್ರಮ ಮದ್ಯ ಮಾರಾಟದಲ್ಲಿ ತೊಡಗಿರುವುದು ಕಂಡುಬಂದಲ್ಲಿ ತಕ್ಷಣವೇ ಸಂಬಂಧಿಸಿದ ಇಲಾಖೆಗೆ ಮಾಹಿತಿ ನೀಡುವಂತೆ ಸಾರ್ವಜನಿಕರಿಗೆ ಮನವಿ ಮಾಡಲಾಯಿತು.
ಕಾರ್ಯಕ್ರಮದಲ್ಲಿ ಅಬಕಾರಿ ಇಲಾಖೆ ಕುಷ್ಟಗಿ ವೃತ್ತ ನಿರೀಕ್ಷಕ ರವಿಕುಮಾರ, ಅಬಕಾರಿ ಉಪನಿರೀಕ್ಷಕರಾದ ನೀಲಾ ಆನಂದ್, ಅಬಕಾರಿ ಸಿಬ್ಬಂದಿ ವಿಜಯ ಪ್ರತಾಪ್, ಯಲಬುರ್ಗಾ ಪೊಲೀಸ್ ಠಾಣೆಯ ಎಫ್‌ಐ ಸಿಬ್ಬಂದಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹನಮಂತರಾಯ ಯಂಕಂಚಿ ಹಾಗೂ ಅಧಿಕಾರಿಗಳಾದ ವಜ್ರಬಂಡಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ಗ್ರಾಮ ಹಿರಿಯರಾದ ಬಸವಣ್ಣೆಪ್ಪ ಈಳಗೇರ, ಯಮನೂರಸಾಬ ಕುದರಿಮೋತಿ, ಮಳಿಯಪ್ಪ ಕಮ್ಮಾರ, ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ದಾಕ್ಷಾಯಿಣಿ ಬೈರೇಗೌಡ ಬನ್ನಿಕೊಪ್ಪ, ಸದಸ್ಯರಾದ ಯಮನಪ್ಪ ಕುರ್ನಾಳ, ನಾಗಪ್ಪ ಭಜಂತ್ರಿ, ಈಶಪ್ಪ ಅರಳಿ, ಫಕೀರಪ್ಪ ಇಳಗೇರ, ಯಮನಕ್ಕೆ ಪೂಜಾರ, ಪರಶುರಾಮ ಹರಿಜನ, ಧರ್ಮಪ್ಪ ಸೇರಿದಂತೆ ಮಹಿಳಾ ಸಂಘಗಳ ಸದಸ್ಯರು, ವಿವಿಧ ಸಂಘಟನೆಗಳ ಪದಾಧಿಕಾರಿಗಳು ಹಾಗೂ ಯುವಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದರು.