×
Ad

ಹನುಮಸಾಗರ | ತಾಲ್ಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ವಿಚಾರಗೋಷ್ಠಿ

Update: 2025-12-31 18:39 IST

ಕುಷ್ಟಗಿ : ಇಲ್ಲಿನ ಹನುಮಸಾಗರ ಕರಿಸಿದ್ಧೇಶ್ವರ ಮಠದಲ್ಲಿ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಹಾಗೂ ಜ್ಞಾನವಿಕಾಸ ಕಾರ್ಯಕ್ರಮದಡಿ ತಾಲ್ಲೂಕು ಮಟ್ಟದ ಮಹಿಳಾ ಜ್ಞಾನವಿಕಾಸ ವಿಚಾರಗೋಷ್ಠಿಯನ್ನು ಬುಧವಾರ ಹಮ್ಮಿಕೊಳ್ಳಲಾಯಿತು.

ಕಾರ್ಯಕ್ರಮದಲ್ಲಿ ತಾಲ್ಲೂಕು ಯೋಜನಾಧಿಕಾರಿ ನಿರಂಜನ್ ಮಾತನಾಡಿ, ಮಹಿಳೆಯರು ಕೇವಲ ಗೃಹಕಾರ್ಯಗಳಿಗೆ ಸೀಮಿತರಾಗದೆ ಶಿಕ್ಷಣ, ಉದ್ಯೋಗ, ಸ್ವ ಉದ್ಯೋಗ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಕ್ರಿಯವಾಗಿ ತೊಡಗಿಸಿಕೊಳ್ಳಬೇಕು. ಸಮಾಜದ ಸರ್ವಾಂಗೀಣ ಅಭಿವೃದ್ಧಿಗೆ ಮಹಿಳೆಯರ ಪಾತ್ರ ಅತ್ಯಂತ ಮಹತ್ವದ್ದಾಗಿದೆ ಎಂದು ಹೇಳಿದರು.

ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಘದ ನಿರ್ದೇಶಕ ಪ್ರಕಾಶರಾವ್ ಮಾತನಾಡಿ, ಮಹಿಳೆಗೆ ಸಮಾಜದಲ್ಲಿ ಶ್ರೇಷ್ಠ ಸ್ಥಾನವಿದೆ. ನದಿ ಹಾಗೂ ಭೂಮಿಯನ್ನು ತಾಯಿಗೆ ಹೋಲಿಸುವಂತೆ ಮಹಿಳೆಯನ್ನು ನವದುರ್ಗೆಯ ರೂಪದಲ್ಲಿ, ಮಗಳಾಗಿ, ತಾಯಿಯಾಗಿ ಹಾಗೂ ಪತ್ನಿಯಾಗಿ ಗೌರವಿಸಲಾಗುತ್ತದೆ. ನಮ್ಮ ಹಿಂದುಳಿದ ಸ್ಥಿತಿಗೆ ಅಜ್ಞಾನವೇ ಪ್ರಮುಖ ಕಾರಣ. ಮಹಿಳೆಯರಿಗೆ ವ್ಯವಹಾರ ಜ್ಞಾನ ನೀಡಿದಲ್ಲಿ ಅವರು ಎಲ್ಲ ಕ್ಷೇತ್ರಗಳಲ್ಲೂ ಸಾಧನೆ ಮಾಡಲು ಸಾಧ್ಯ. ಆರೋಗ್ಯಕರ ಆಹಾರ ಸೇವನೆ ಹಾಗೂ ಕಾನೂನು ಅರಿವು ಮಹಿಳೆಯರಿಗೆ ಅಗತ್ಯ. ಮಹಿಳೆಯರು ಉದ್ಯೋಗಿಗಳಾಗುವ ಜೊತೆಗೆ ಸ್ವ ಉದ್ಯೋಗಿಗಳಾಗಬೇಕೆಂದು ಕರೆ ನೀಡಿದರು.

ಪ್ರಾದೇಶಿಕ ನಿರ್ದೇಶಕ ಚಂದ್ರಶೇಖರ ಮಾತನಾಡಿ, ಜ್ಞಾನವರ್ಧನೆಗೆ ಸಹಕಾರಿಯಾಗುವ ಅನೇಕ ಯೋಜನೆಗಳನ್ನು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಜಾರಿಗೊಳಿಸಿದೆ. ಕಣ್ಣೀರಿನಿಂದ ಬಂದ ಹಣವನ್ನು ಕಣ್ಣೀರು ಒರೆಸುವ ಉದ್ದೇಶದಿಂದಲೇ ಈ ಯೋಜನೆಗಳನ್ನು ಅನುಷ್ಠಾನಗೊಳಿಸಲಾಗುತ್ತಿದೆ. ಪ್ರತಿಯೊಬ್ಬರಿಗೂ ಕನಸು ಇರುತ್ತದೆ. ಆ ಕನಸು ನನಸಾಗಲು ಧರ್ಮಸ್ಥಳ ಯೋಜನೆ ಸಹಾಯಕರವಾಗಿದೆ. ಆರಂಭದಲ್ಲಿ ಮೂರು ಕೋಟಿ ರೂಪಾಯಿ ಆದಾಯ ಹೊಂದಿದ್ದ ಯೋಜನೆ ಇಂದು ಸುಮಾರು ಮೂನ್ನೂರು ಕೋಟಿ ರೂಪಾಯಿ ಸಾಲ ವಿತರಣೆ ಮಟ್ಟಕ್ಕೆ ಬೆಳೆಯುತ್ತಿದೆ. ರಾಜ್ಯದಾದ್ಯಂತ 55 ಲಕ್ಷ ಸಂಘಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು ಮೂರು ಕೋಟಿ ಜನರು ಯೋಜನೆಯ ಸೌಲಭ್ಯ ಪಡೆದಿದ್ದಾರೆ. ಜಾತಿಭೇದವಿಲ್ಲದೆ ಬಡತನ ನಿರ್ಮೂಲನೆಯೇ ಸಂಘದ ಮುಖ್ಯ ಗುರಿಯಾಗಿದೆ ಎಂದು ತಿಳಿಸಿದರು.

ಧರ್ಮಸ್ಥಳ ಸಂಘದ ವತಿಯಿಂದ 1 ಲಕ್ಷ 17 ಸಾವಿರ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ, ಸರ್ಕಾರಿ ಶಾಲೆಗಳಿಗೆ ಅತಿಥಿ ಶಿಕ್ಷಕರ ನೇಮಕ ಸೇರಿದಂತೆ ವಿವಿಧ ಸಾಮಾಜಿಕ ಯೋಜನೆಗಳು ಜಾರಿಯಲ್ಲಿವೆ. ಅಲ್ಲದೆ 17 ಸಾವಿರ ಕುಟುಂಬಗಳಿಗೆ ತಿಂಗಳಿಗೆ ಸಾವಿರ ರೂಪಾಯಿ ಸಹಾಯಧನ ನೀಡಲಾಗುತ್ತಿದೆ ಎಂಬ ಮಾಹಿತಿಯನ್ನೂ ಅವರು ಹಂಚಿಕೊಂಡರು.

ಸಹಶಿಕ್ಷಕಿ ಲೀಲಾ ಶೆಟ್ಟರ್ ಅವರು ಮಾತನಾಡಿದರು.

ಕಾರ್ಯಕ್ರಮದ ಅಂಗವಾಗಿ ರಂಗೋಲಿ ಸ್ಪರ್ಧೆ, ಪೌಷ್ಟಿಕ ಆಹಾರ ತಯಾರಿಕಾ ಸ್ಪರ್ಧೆ, ಪುಷ್ಪಗುಚ್ಛ ಸ್ಪರ್ಧೆ ಹಾಗೂ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯಿತು. ಸ್ಪರ್ಧೆಗಳಲ್ಲಿ ಭಾಗವಹಿಸಿದ ಮಹಿಳೆಯರಿಗೆ ಬಹುಮಾನಗಳನ್ನು ವಿತರಿಸಲಾಯಿತು.

ಕಾರ್ಯಕ್ರಮಕ್ಕೆ ನಿವೃತ್ತ ಮುಖ್ಯಶಿಕ್ಷಕಿ ಪ್ರಭಾ ಪಂಥ ಅಧ್ಯಕ್ಷತೆ ವಹಿಸಿದ್ದರು. ಜಿಲ್ಲಾ ಜನಜಾಗೃತಿ ವೇದಿಕೆ ಸದಸ್ಯ ವಿ.ವಿ.ಹಿರೇಮಠ, ಸಮನ್ವಯಾಧಿಕಾರಿ ನಂದಾ, ರೂಪಾ, ಮಂಜುಳಾ ಬೋವಿ, ಅಬುಬಕರ, ಸುನಿತಾ ಕೊಮಾರಿ, ಬಸಮ್ಮ ಹಿರೇಮಠ, ಶ್ರೀದೇವಿ ಹಿರೇಮಠ, ಜ್ಞಾನವಿಕಾಸ ಸಮನ್ವಯಾಧಿಕಾರಿಗಳು, ಮೇಲ್ವಿಚಾರಕರು, ಸಂಯೋಜಕಿಯರು ಸೇರಿದಂತೆ ಅನೇಕರು ಉಪಸ್ಥಿತರಿದ್ದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News