×
Ad

ಯಲಬುರ್ಗಾ | ಗ್ರಾಹಕರಿಗೆ ಅನ್ಯಾಯವಾದರೆ ಅಂಜದೆ ದೂರು ನೀಡಿ: ಸೌಭಾಗ್ಯಲಕ್ಷ್ಮೀ

Update: 2025-12-31 17:33 IST

ಯಲಬುರ್ಗಾ:ಯಾವುದೇ ತಯಾರಕರು ಅಥವಾ ಮಾರಾಟಗಾರರಿಂದ ಗ್ರಾಹಕರಿಗೆ ಅನ್ಯಾಯವಾದಲ್ಲಿ ಯಾರಿಗೂ ಅಂಜದೇ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕಿಗೆ ದೂರು ದಾಖಲಿಸಬೇಕು ಎಂದು ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಅಧ್ಯಕ್ಷೆ ಜಿ.ಇ.ಸೌಭಾಗ್ಯಲಕ್ಷ್ಮೀ ಹೇಳಿದರು.

ಪಟ್ಟಣದ ಕಂದಾಯ ಭವನದಲ್ಲಿ ಬುಧವಾರ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಆಹಾರ–ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆ, ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗ ಸೇರಿದಂತೆ ವಿವಿಧ ಇಲಾಖೆಗಳ ಸಂಯುಕ್ತಾಶ್ರಯದಲ್ಲಿ ಆಯೋಜಿಸಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಖರೀದಿಸುವ ವಸ್ತುವಿನ ಬೆಲೆ ಕಡಿಮೆಯಿದ್ದರೂ ಅದರ ಗುಣಮಟ್ಟ ಸರಿಯಾಗಿರದಿದ್ದರೆ ರಶೀದಿ ಸಮೇತ ದೂರು ದಾಖಲಿಸಬೇಕು. ಇದರಿಂದ ತಯಾರಕರು ಹಾಗೂ ಮಾರಾಟಗಾರರು ಎಚ್ಚೆತ್ತುಕೊಳ್ಳುವಂತೆ ಆಗುತ್ತದೆ. ಜೊತೆಗೆ ಮುಂದಿನ ಗ್ರಾಹಕರಿಗೆ ಆಗುವ ಅನ್ಯಾಯವನ್ನು ತಡೆಯಲು ಸಹಕಾರಿಯಾಗುತ್ತದೆ. ಅನ್ಯಾಯಕ್ಕೊಳಗಾದ ಗ್ರಾಹಕರಿಗೆ ಗ್ರಾಹಕರ ವೇದಿಕೆ ಸೂಕ್ತ ಪರಿಹಾರ ಒದಗಿಸುತ್ತದೆ ಎಂದರು.

ಜಿಲ್ಲಾ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಉಪನಿರ್ದೇಶಕ ಸೋಮಶೇಖರ ಬಿರಾದರ ಮಾತನಾಡಿ, ಗ್ರಾಮೀಣ ಪ್ರದೇಶಗಳಲ್ಲಿಯೂ ಗ್ರಾಹಕ ಜಾಗೃತಿ ಮೂಡಿಸುವ ಉದ್ದೇಶದಿಂದ ತಾಲೂಕು ಮಟ್ಟದಲ್ಲಿ ಇಂತಹ ಕಾರ್ಯಕ್ರಮಗಳನ್ನು ಆಯೋಜಿಸಲಾಗುತ್ತಿದೆ ಎಂದರು.

ಕೊಪ್ಪಳದ ನ್ಯಾಯವಾದಿ ಹಾಗೂ ಹೋರಾಟಗಾರ್ತಿ ಸಾವಿತ್ರಿ ಮುಜಮದಾರ ವಿಶೇಷ ಉಪನ್ಯಾಸ ನೀಡಿ, ವಸ್ತು ಖರೀದಿಯಲ್ಲಿ ಮಹಿಳೆಯರು ಹೆಚ್ಚಾಗಿ ಮೋಸಕ್ಕೆ ಒಳಗಾಗುತ್ತಿದ್ದಾರೆ ಎಂದು ಆತಂಕ ವ್ಯಕ್ತಪಡಿಸಿದರು.

ಜಾಹೀರಾತುಗಳಿಗೆ ಮರುಳಾಗದೇ ಗುಣಮಟ್ಟದ ವಸ್ತುಗಳಿಗೆ ಆದ್ಯತೆ ನೀಡಬೇಕು. ಇತ್ತೀಚೆಗೆ ಸೈಬರ್ ಹಾಗೂ ಡಿಜಿಟಲ್ ವಂಚನೆಗಳು ಹೆಚ್ಚುತ್ತಿದ್ದು, ಸಾವಿರಾರು ಕೋಟಿ ರೂ. ಮೌಲ್ಯದ ವಂಚನೆ ನಡೆದಿದೆ ಎಂದು ವಿಷಾದಿಸಿದರು.

ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ಆಯೋಗದ ಸದಸ್ಯ ರಾಜು ಮೇತ್ರಿ, ತಹಶೀಲ್ದಾರ್ ಪ್ರಕಾಶ ನಾಶಿ, ತಾ.ಪಂ. ಕಾರ್ಯನಿರ್ವಾಹಕ ಅಧಿಕಾರಿ ನೀಲಗಂಗಮ್ಮ ಮಾತನಾಡಿದರು.

ಕಾರ್ಯಕ್ರಮದಲ್ಲಿ ತಾಲೂಕಿನ ನ್ಯಾಯಬೆಲೆ ಅಂಗಡಿ ಮಾಲಕರು, ಆಸಕ್ತ ಗ್ರಾಹಕರು ಹಾಗೂ ಸಾರ್ವಜನಿಕರು ಭಾಗವಹಿಸಿದ್ದರು.

ಆಹಾರ ಇಲಾಖೆಯ ಮಲ್ಲಿಕಾರ್ಜುನ ಪ್ರಾರ್ಥಿಸಿದರು. ಸಹಾಯಕ ನಿರ್ದೇಶಕ ಕೆ.ಆರ್.ದೇವರಾಜು ಸ್ವಾಗತಿಸಿದರು. ಶಿವಮೂರ್ತಿ ಇಟಗಿ ಭಾವಗೀತೆ ಹಾಡಿದರು. ಸರ್ಕಾರಿ ಅಪರ ವಕೀಲ ಮಲ್ಲನಗೌಡ ಪಾಟೀಲ ನಿರೂಪಿಸಿ ವಂದಿಸಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News