Mandya | ಕೆ.ಆರ್.ಎಸ್. ಡ್ಯಾಂಗೆ ಮುತ್ತಿಗೆ ಯತ್ನ: ಬಿಜೆಪಿ ನಾಯಕರು ಪೊಲೀಸ್ ವಶಕ್ಕೆ

Update: 2026-07-31 15:41 IST

ಮಂಡ್ಯ: ತಮಿಳುನಾಡಿಗೆ ಪ್ರತಿ ದಿನ 3,500 ಕ್ಯುಸೆಕ್ ಕಾವೇರಿ ನೀರು ಹರಿಸಬೇಕು ಎಂಬ ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರದ ನಿರ್ದೇಶನ ವಿರೋಧಿಸಿ ಶ್ರೀರಂಗಪಟ್ಟಣದ ಕೆ.ಆರ್.ಎಸ್ ಡ್ಯಾಂಗೆ ಶುಕ್ರವಾರ ಮುತ್ತಿಗೆ ಹಾಕಲು ಯತ್ನಿಸಿದ ಬಿಜೆಪಿ ನಾಯಕರನ್ನು ಪೊಲೀಸರು ವಶಕ್ಕೆ ಪಡೆದರು.

ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ, ವಿಧಾನಸಭೆ ವಿಪಕ್ಷ ನಾಯಕ ಆರ್.ಅಶೋಕ, ವಿಧಾನ ಪರಿಷತ್ ವಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ, ಶಾಸಕ ಶ್ರೀವತ್ಸ ಸೇರಿದಂತೆ ನೂರಾರು ಮಂದಿಯನ್ನು ವಶಕ್ಕೆ ಪಡೆದ ಪೊಲೀಸರು ಬಳಿಕ ಬಿಡುಗಡೆಗೊಳಿಸಿದರು.

ಕಾವೇರಿ ವಿವಾದಕ್ಕೆ ಶಾಶ್ವತ ಪರಿಹಾರ ಕಂಡುಕೊಳ್ಳಿ: ಯುಡಿಯೂರಪ್ಪ

ಇದಕ್ಕೂ ಮೊದಲು ನಡೆದ ಪ್ರತಿಭಟನೆಯನ್ನುದ್ದೇಶಿಸಿ ಮಾತನಾಡಿದ ಮಾಜಿ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ, ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ರಾಜ್ಯದ ಜನರ ಹಿತಕ್ಕಿಂತ ದಿಲ್ಲಿಯಲ್ಲಿ ರಾಹುಲ್ ಗಾಂಧಿ ಮನೆ ಕಾದು ಸಚಿವ ಸಂಪುಟ ವಿಸ್ತರಣೆ ಮಾಡುವುದೇ ಮುಖ್ಯವಾಗಿದೆ ಎಂದು ಆರೋಪಿಸಿದ್ದಾರೆ.

ಶಿವಕುಮಾರ್ ಅವರು ಪ್ರಾಮಾಣಿಕರಾಗಿದ್ದರೆ ಹನಿ ನೀರನ್ನೂ ಕೆಆರ್ಎಸ್ನಿಂದ ಬಿಡಲ್ಲ; ಅಗತ್ಯ ಬಿದ್ದರೆ ಸಿಎಂ ಸ್ಥಾನಕ್ಕೆ ರಾಜೀನಾಮೆ ನೀಡುತ್ತೇನೆ ಎನ್ನುತ್ತಿದ್ದರು. ಆದರೆ ಅವರು ಅದನ್ನು ಹೇಳದೆ ರಾಜಕೀಯ ದೊಂಬರಾಟ ಮಾಡುತ್ತಿದ್ದಾರೆ. ಮುಖ್ಯಮಂತ್ರಿ ಈಗಲಾದರೂ ತಮಿಳುನಾಡಿನ ಮುಖ್ಯಮಂತ್ರಿ ವಿಜಯ್ ಅವರನ್ನು ಕರೆದುಕೊಂಡು ಬಂದು ಕೆಆರ್ಎಸ್ ಅನ್ನು ತೋರಿಸಲಿ. ಮುಂದಿನ ದಿನಗಳಲ್ಲಿ ಕುಡಿಯುವ ನೀರಿಗೂ ತೊಂದರೆಯಾಗಲಿ ಎಂದು ಮನವರಿಕೆ ಮಾಡಿಕೊಡಲಿ ಎಂದು ಆಗ್ರಹಿಸಿದರು.

ರಾಜ್ಯ ಸರ್ಕಾರ ಸರಿಯಾದ ಸಮಯದಲ್ಲಿ ಸುಪ್ರೀಂ ಕೋರ್ಟ್ ಗೆ ನೀರಿನ ಕೊರತೆ ಬಗ್ಗೆ ಸೂಕ್ತವಾಗಿ ಮನವರಿಕೆ ಮಾಡಿಕೊಡಬೇಕಿತ್ತು. ಆಗ ಇಂದಿನ ಗಂಡಾಂತರದಿಂದ ತಪ್ಪಿಸಿಕೊಳ್ಳಬಹುದಿತ್ತು. ಆದರೆ ಈಗ ನೀರಿಗೆ ಹಾಹಾಕಾರ ಇದೆ. ಉಸಿರುಕಟ್ಟುವ ಸ್ಥಿತಿ ನಿರ್ಮಾಣವಾಗಿದೆ ಎಂದರು.

. ಕಾವೇರಿ ನೀರಿನ ಸಮಸ್ಯೆಗೆ ಶಾಶ್ವತ ಪರಿಹಾರವನ್ನು ರಾಜ್ಯ ಸರಕಾರ ಕಂಡುಕೊಳ್ಳಬೇಕಿದೆ. ಈ ನಿಟ್ಟಿನಲ್ಲಿ ಮೇಕೆದಾಟು ಯೋಜನೆ ಆರಂಭಿಸಲಿ ಎಂದು ಯಡಿಯೂರಪ್ಪ ಆಗ್ರಹಿಸಿದರು.

ಡಿಕೆಶಿ ತಮಿಳುನಾಡಿನ ನೀರುಗಂಟಿ: ಆರ್ ಅಶೋಕ್

ವಿಧಾನಸಭೆ ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಮಾತನಾಡಿ, ಸಿಎಂ ಶಿವಕುಮಾರ್ ತಮಿಳುನಾಡಿನ ಜೊತೆ ಶಾಮೀಲಾಗಿ ಆ ರಾಜ್ಯದ ನೀರುಗಂಟಿಯಾಗಿ ಕೆಲಸ ಮಾಡುತ್ತಿದ್ದಾರೆ ಎಂದು ಆರೋಪಿಸಿದರು.

ದೆಹಲಿಯಲ್ಲೇ ಇದ್ದ ಶಿವಕುಮಾರ್ ಕಾನೂನು ತಜ್ಞರ ಜೊತೆ ಮಾತನಾಡಿ, ನ್ಯಾಯಾಧೀಕರಣದ ಮುಂದೆ ಯಾವ ರೀತಿ ವಾದ ಮಾಡಬೇಕು ಎಂಬುದನ್ನು ಚರ್ಚೆ ಮಾಡಬೇಕಿತ್ತು. ಆದರೆ ಮಾಡಲಿಲ್ಲ. ಈಗ ನೀರು ಖಾಲಿಯಾಗ್ತ ಇದೆ. ರಾಜ್ಯದ ಜನರ ಹಿತಾಸಕ್ತಿಗಿಂತ ದೆಹಲಿಯಲ್ಲಿ ರಾಹುಲ್ ಗಾಂಧಿ ಮನೆ ಕಾಯುವುದೇ ಸಿಎಂಗೆ ಮುಖ್ಯವಾಗಿತ್ತು ಎಂದು ದೂರಿದರು,

ರೈತರಿಗೆ ಬೆಳೆ ಬೆಳೆಯಬೇಡಿ ಎಂದು ಸಿಎಂ ಹೇಳಿದ್ದಾರೆ. ಆದರೆ ಅವರಿಗೆ ಪರ್ಯಾಯ ವ್ಯವಸ್ಥೆ ಸಹ ಮಾಡಿಲ್ಲ. ಪರಿಹಾರ ನೀಡಿಲ್ಲ. ಬರಗಾಲ ಸಹ ಘೋಷಣೆ ಮಾಡಿಲ್ಲ. ಕೇಂದ್ರಕ್ಕೆ ವರದಿ ಸಹ ನೀಡಿಲ್ಲ. ಉತ್ತರ ಕರ್ನಾಟಕದಲ್ಲಿ ಜನ ಗುಳೇ ಹೋಗುತ್ತಿದ್ದಾರೆ. ಇವರ ಗಮನವೆಲ್ಲ ಸಚಿವ ಸಂಪುಟ ರಚನೆ ಮಾಡುವುದರಲ್ಲೇ ಮುಳುಗಿದೆ ಎಂದು ಟೀಕಿಸಿದರು.

 

 

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News