×
Ad

ಆ ಮಗುವಿನ ಕೈಯಿಂದ ಹೊಡೆಸಿದ್ದು ಯಾರು ?

Update: 2023-06-27 11:33 IST

ಬೆಂಗಳೂರಿನ ಡೇ ಕೇರ್ ಸೆಂಟರ್ ಒಂದರಲ್ಲಿ ನಡೆದ ಘಟನೆಯ ವೀಡಿಯೊ ನೋಡಿದ ಎಲ್ಲರನ್ನೂ ಬೆಚ್ಚಿ ಬೀಳಿಸಿದೆ. ನಗರದ ಮಕ್ಕಳ ಡೇ ಕೇರ್ ಸೆಂಟರ್ ವೊಂದರಲ್ಲಿ 2 ವರ್ಷದ ಹೆಣ್ಣು ಮಗುವಿನ ಮೇಲೆ ಮೂರು ವರ್ಷದ ಇನ್ನೊಂದು ಮಗು ಹಲ್ಲೆ ನಡೆಸುತ್ತಿರುವ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಉತ್ತರಹಳ್ಳಿ ಸಮೀಪದ ಚಿಕ್ಕಲ್ಲಸಂದ್ರದಲ್ಲಿ ಇರುವ ಟೆಂಡರ್ ಫೂಟ್ ಎಂಬ ಡೇ ಕೇರ್ ಸೆಂಟರ್ ನಲ್ಲಿ ಕಳೆದ ಬುಧವಾರ ಈ ಘಟನೆ ನಡೆದಿದೆ ಎಂದು ತಿಳಿದುಬಂದಿದೆ. ಈಗ ವೈರಲ್ ಆಗಿರುವ ವಿಡಿಯೋದಲ್ಲಿ ಡೇ ಕೇರ್ ಸೆಂಟರ್ ನಲ್ಲಿ ಮಕ್ಕಳನ್ನು ನೋಡಿಕೊಳ್ಳುತ್ತಿದ್ದ ಆಯಾ ಒಂದು ಮಗುವನ್ನು ಹೊರಗೆ ಕರೆದುಕೊಂಡು ಹೋಗುತ್ತಾರೆ. ಈ ಸಂದರ್ಭದಲ್ಲಿ ಒಂದು ಮಗು ಇನ್ನೊಂದು ಮಗುವನ್ನು ಹಿಡಿದುಕೊಂಡು ಹೊಡೆದಿದೆ. ಸುಮಾರು ನಾಲ್ಕೈದು ನಿಮಿಷ ಹೊಡೆದರೂ ಮಕ್ಕಳನ್ನ ನೋಡಿಕೊಳ್ಳಲು ಅಲ್ಲಿಗೆ ಯಾರು ಬರುವುದಿಲ್ಲ.

ಘಟನೆ ಬಗ್ಗೆ ಪೊಲೀಸರು ನೀಡಿರುವ ಮಾಹಿತಿ ಪ್ರಕಾರ ಆ ರೂಮ್ ನಲ್ಲಿ ಹಲ್ಲೆಗೊಳಗಾದ ಬಾಲಕಿ ಸಹಿತ ಏಳು ಮಕ್ಕಳಿದ್ದರು. ಒಬ್ಬಳು ಬಾಲಕಿಯನ್ನು ಕರೆದುಕೊಂಡು ಆಯಾ ಶೌಚಾಲಯಕ್ಕೆ ಹೋಗಿದ್ದಾರೆ. ಅದೇ ಸಂದರ್ಭದಲ್ಲಿ ಈ ಬಾಲಕ ಬಾಲಕಿಯನ್ನು ಮನಸೋ ಇಚ್ಛೆ ಥಳಿಸಿದ್ದಾನೆ. ಸುಮಾರು ಏಳು ನಿಮಿಷಗಳ ಕಾಲ ಸೆರೆಯಾದ ವಿಡಿಯೋದಲ್ಲಿ ಹಲವು ಬಾರಿ ಬಾಲಕಿ ಮೇಲೆ ಹಲ್ಲೆ ಮಾಡಿದ್ದಾನೆ. ಬಾಲಕಿಯ ಮನೆಯವರು ಕರೆದುಕೊಂಡು ಹೋಗಲು ಬಂದಾಗ ಕೆನ್ನೆ ಹಾಗು ಕೈಯಲ್ಲಿ ಗಾಯ ನೋಡಿ ಬೇರೆ ಮಕ್ಕಳಲ್ಲಿ ಕೇಳಿ ಬಳಿಕ ಸಿಸಿಟಿವಿ ವೀಡಿಯೊ ನೋಡಿದಾಗ ಘಟನೆ ಬೆಳಕಿಗೆ ಬಂದಿದೆ.

ಘಟನೆ ಬೆನ್ನಲ್ಲೇ ಡೇ ಕೇರ್ ಸೆಂಟರ್ ಗಳ ನಿರ್ಲಕ್ಶ್ಯದ ವಿರುದ್ಧ ಜನ ತೀವ್ರ ಆಕ್ರೋಶ ವ್ಯಕ್ತಪಡಿಸುತ್ತಿದ್ದಾರೆ. ಇಂತಹ ಸೆಂಟರ್ ಗಳಲ್ಲಿ ಸಾಕಷ್ಟು ಉದ್ಯೋಗಿಗಳಿಲ್ಲದೆ ಮಕ್ಕಳನ್ನು ಸರಿಯಾಗಿ ನೋಡಿಕೊಳ್ಳುತ್ತಿಲ್ಲ ಎಂದು ದೂರು ಕೇಳಿ ಬಂದಿದೆ. ಡೇ ಕೇರ್ ಸೆಂಟರ್ ವಿರುದ್ಧ ಪ್ರಕರಣ ದಾಖಲಾಗಿದೆ. ರಾಜ್ಯ ಮಕ್ಕಳ ಹಕ್ಕುಗಳ ಆಯೋಗ ಸ್ವಯಂ ಪ್ರೇರಿತ ಪ್ರಕರಣ ದಾಖಲಿಸಿಕೊಂಡಿದೆ. ಹಲ್ಲೆಗೊಳಗಾದ ಪುಟ್ಟ ಬಾಲಕಿಯ ಪೋಷಕರು ಹಲ್ಲೆ ಮಾಡಿರುವ ಬಾಲಕನ ಹಿತದೃಷ್ಟಿಯಿಂದ ದೂರು ದಾಖಲಿಸಿಲ್ಲ ಎಂದು ಹೇಳಲಾಗಿದೆ.

ಇಲ್ಲಿ ಹಲ್ಲೆಯಾಗಿದ್ದು ೨ ವರ್ಷದ ಬಾಲಕಿ ಮೇಲೆ. ಹಲ್ಲೆ ಮಾಡಿರೋದು ೩ ವರ್ಷದ ಬಾಲಕ. ಇಬ್ಬರೂ ಪುಟ್ಟ ಮಕ್ಕಳು. ಅದೇಗೆ ಅಷ್ಟು ಸಣ್ಣ ಮಕ್ಕಳಲ್ಲಿ ಇಂತಹ ಸ್ವಭಾವ ಕಂಡು ಬಂತು ?

ಹಲ್ಲೆಗೊಳಗಾದ ಆ ಪುಟ್ಟ ಕಂದಮ್ಮಳಿಗೆ ಆಗಿರುವ ದೈಹಿಕ ನೋವು, ಮಾನಸಿಕ ಆಘಾತ ಊಹಿಸಿದರೇ ತೀವ್ರ ತಳಮಳವಾಗುತ್ತದೆ. ಆಕೆಗೆ ದೈಹಿಕ ಆರೈಕೆಯ ಜೊತೆಗೆ ಮಾನಸಿಕವಾಗಿಯೂ ಸ್ಥೈರ್ಯ ತುಂಬುವ ಕೆಲಸವಾಗಬೇಕಾಗಿದೆ. ಅಷ್ಟೇ ಕಾಳಜಿ, ಕಳಕಳಿಯಿಂದ ಆ ಹಲ್ಲೆ ಮಾಡಿರುವ ಮೂರು ವರ್ಷದ ಬಾಲಕನ ಕಡೆಗೂ ಗಮನ ನೀಡಬೇಕಾಗಿದೆ. ಆ ಪುಟ್ಟ ಬಾಲಕ ಅಂತಹದೊಂದು ಹಲ್ಲೆ ಮಾಡಲು ಅವನಿಗೆ ಪ್ರೇರೇಪಿಸಿದ್ದು ಯಾವುದು ? ಮುಗ್ಧ ಬಾಲಕನೊಬ್ಬ ದಿಢೀರನೆ ಅಷ್ಟೊಂದು ವ್ಯಗ್ರನಾಗೋದು ಹೇಗೆ ?

ಇದು ಆ ಒಬ್ಬ ಬಾಲಕನ ಕುರಿತ ಪ್ರಶ್ನೆಯಲ್ಲ. ನಮ್ಮ ನಿಮ್ಮ ಮನೆಯಲ್ಲಿರುವ ಎಲ್ಲ ಮಕ್ಕಳ ಕುರಿತ ಪ್ರಶ್ನೆ. ಯಾಕೆ ನಮ್ಮ ಮಕ್ಕಳು ಇಷ್ಟು ಸಿಡುಕರಾಗುತ್ತಾರೆ ? ಹಿಂಸೆಯತ್ತ ವಾಲುತ್ತಾರೆ ?

ನಮ್ಮ ಮಕ್ಕಳ ಮೇಲೂ ನಾವು ಇಂತಹದೊಂದು ನಿಗಾ ಇಡಬೇಕಾಗಿದೆ. ಎಲ್ಲಕ್ಕಿಂತ ಮುಖ್ಯವಾಗಿ ಮಕ್ಕಳು ನಾವು ಹೇಳೋದನ್ನು ಅನುಸರಿಸಲ್ಲ, ನಾವು ಮಾಡೋದನ್ನು ಅನುಸರಿಸುತ್ತಾರೆ ಎಂಬುದನ್ನು ಪೋಷಕರು ಮೊದಲು ತಿಳಿದುಕೊಳ್ಳಬೇಕು. ಇದು ಪ್ರತಿಯೊಬ್ಬ ಪೋಷಕರಿಗೂ ಅರ್ಥವಾಗಬೇಕಾದ ವಿಷಯ.

ಮೊಬೈಲ್, ಟ್ಯಾಬ್, ಲ್ಯಾಪ್ ಟಾಪ್ ಗಳಲ್ಲಿ ನೋಡುವ ಸಿನಿಮಾಗಳು, ವೆಬ್ ಸೀರಿಸ್ ಗಳು, ಯೂಟ್ಯೂಬ್ ವಿಡಿಯೋಗಳು, ವೀಡಿಯೊ ಗೇಮ್ಸ್ ಗಳು - ಇವುಗಳನ್ನು ನಾವು ನೋಡೋದನ್ನು, ನೋಡಿ ನಮ್ಮ ವರ್ತನೆಯಲ್ಲಾಗುತ್ತಿರುವ ಬದಲಾವಣೆಗಳನ್ನು ನಮ್ಮ ಮಕ್ಕಳು ಗಮನಿಸುತ್ತಿರುತ್ತಾರೆ, ಮತ್ತು ನಿಧಾನವಾಗಿ ಅವುಗಳನ್ನು ತಮ್ಮೊಳಗೆ ಬೆಳೆಸಿಕೊಳ್ಳುತ್ತಾರೆ ಎಂಬುದು ನಮಗೆ ತಿಳಿದಿರಬೇಕು. ಈಗ ಟಿವಿ ನ್ಯೂಸ್ ಚಾನಲ್ ಗಳು ಪ್ರಸಾರ ಮಾಡುವ ಹಲವು ಕಾರ್ಯಕ್ರಮಗಳೂ ತೀರಾ ಪ್ರಚೋದನಕಾರಿಯಾಗಿರುತ್ತವೆ.

ಬೇರೇನೂ ಬೇಡ. ನಮ್ಮ ಮೊಬೈಲ್ ಗಳೇ ಈಗ ಅತ್ಯಂತ ಅಪಾಯಕಾರಿಯಾಗಿ ಬಿಟ್ಟಿವೆ. ನಮ್ಮ ವಾಟ್ಸ್ ಆಪ್ ಗಳಲ್ಲಿ ಬರುವ ಫಾರ್ವರ್ಡೆಡ್ ವೀಡಿಯೊಗಳು, ಆಡಿಯೊಗಳು, ಪೋಸ್ಟರ್ ಗಳನ್ನು ನೋಡಿದರೆ ಬೆಚ್ಚಿ ಬೀಳಿಸುತ್ತವೆ. ನಮ್ಮ ಸುತ್ತಮುತ್ತ ನಡೆಯುತ್ತಿರುವ ಅಪರಾಧ ಅಥವಾ ಅವಘಡಗಳ ಸಿಸಿಟಿವಿ ಫುಟೇಜ್ ಗಳು ಅದೆಷ್ಟು ವೈರಲ್ ಆಗಿ ಎಲ್ಲರ ಮೊಬೈಲ್ ತಲುಪುತ್ತಿವೆ ? ಅದನ್ನು ಎಷ್ಟು ಮಕ್ಕಳು ನೋಡುತ್ತಿದ್ದಾರೆ ? ಅದೆಷ್ಟೋ ಮನೆಗಳಲ್ಲಿ ಮಕ್ಕಳನ್ನು ಸುಮ್ಮನಾಗಿಸಲು ಪೋಷಕರೇ ಮಕ್ಕಳ ಕೈಗೆ ಮೊಬೈಲ್ ಕೊಟ್ಟು ಬಿಡುತ್ತಾರೆ.

ಮುಗ್ದ ಮಕ್ಕಳು ಈ ಸಮಾಜ ಅವರಿಗೆ ಕೊಟ್ಟಿದ್ದನ್ನು ಸ್ವೀಕರಿಸುತ್ತವೆ. ಈಗ ನಮ್ಮ ನಡುವೆ ದ್ವೇಷ, ಅಸಹನೆ, ಅಸಹಿಷ್ಣುತೆ, ಅನುಮಾನ - ಇವೇ ಹೆಚ್ಚು ವಿಜೃಂಭಿಸುತ್ತಿರುವ ಕಾಲ. ನಮ್ಮ ನಡುವೆಯೇ ಬೆಳೆಯೋ ಮಕ್ಕಳಿಗೂ ಬೇಡ ಅಂದ್ರೂ ಸುಲಭವಾಗಿ ಅವು ತಲುಪಿ ಬಿಡುತ್ತವೆ. ಅವರ ಮನಸ್ಸೊಳಗೆ ಇಳಿದುಬಿಡುತ್ತವೆ. ಹಾಗಾಗಿ ಮೊದಲು ನಾವು ಮನುಷ್ಯತ್ವ ಬೆಳೆಸಿಕೊಳ್ಳಬೇಕು. ಪರಸ್ಪರ ಪ್ರೀತಿ, ವಿಶ್ವಾಸ, ಪರೋಪಕಾರ, ದಯೆ, ಮಮತೆ, ಗೌರವದ ಗುಣಗಳನ್ನು ನಾವು ಅದೆಷ್ಟು ಹೆಚ್ಚು ಬೆಳೆಸಿಕೊಳ್ಳುತ್ತೇವೆಯೋ ಅಷ್ಟೇ ಅದು ಮಕ್ಕಳಲ್ಲಿ ಪ್ರತಿಫಲಿಸುತ್ತದೆ.

ನಮ್ಮ ಕುಟುಂಬ ಸದಸ್ಯರಲ್ಲಿ, ನೆರೆಹೊರೆಯವರಲ್ಲಿ, ಕೆಲಸದವರಲ್ಲಿ ನಮ್ಮ ವರ್ತನೆಯನ್ನು ನಮ್ಮ ಮಕ್ಕಳೂ ನೋಡುತ್ತಿರುತ್ತಾರೆ ಎಂಬುದು ನಮಗೆ ಸದಾ ನೆನಪಿರಬೇಕು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ಆರ್. ಜೀವಿ

contributor

Similar News