×
Ad

ಇಸ್ರೇಲ್ ವಿರೋಧಿ, ಸಮಾಜವಾದಿ ಯುವ ನಾಯಕ ನ್ಯೂಯಾರ್ಕ್ ಮೇಯರ್ ಅಭ್ಯರ್ಥಿ

Update: 2025-06-25 23:02 IST

PC : financialexpress.com

ಜಗತ್ತಿನ ಅತ್ಯಂತ ಪ್ರತಿಷ್ಠಿತ ನಗರಗಳಲ್ಲಿ ಒಂದಾದ ಅಮೇರಿಕಾದ ನ್ಯೂಯಾರ್ಕ್ ನಲ್ಲಿ ಹೊಸ ಇತಿಹಾಸ ನಿರ್ಮಾಣವಾಗಿದೆ.

ಅಲ್ಲಿನ ಮೇಯರ್ ಹುದ್ದೆಗೆ ಡೆಮೊಕ್ರಾಟ್ ಪಕ್ಷದ ಅಭ್ಯರ್ಥಿಯನ್ನು ಆಯ್ಕೆ ಮಾಡುವ ಚುನಾವಣೆಯಲ್ಲಿ ಅಚ್ಚರಿಯ ಫಲಿತಾಂಶ ಬಂದಿದೆ.

ಡೆಮೊಕ್ರಾಟ್ ಪಕ್ಷದ ಇಂಡಿಯನ್ ಅಮೇರಿಕನ್, ಇನ್ನೂ ಕೇವಲ 33 ವರ್ಷದ ಯುವ ನಾಯಕ, ಮುಸ್ಲಿಂ ಸಮುದಾಯದ ಝೋಹ್ರಾನ್ ಮಮ್ದಾನಿ ತಮ್ಮ ಪಕ್ಷದ ಹಿರಿಯ ಹಾಗು ಪ್ರಭಾವೀ ನಾಯಕ ಆಂಡ್ರೂ ಕುಮೋ ಅವರನ್ನು ಸೋಲಿಸಿ ಮೇಯರ್ ಚುನಾವಣೆಗೆ ಪಕ್ಷದ ಅಧಿಕೃತ ಅಭ್ಯರ್ಥಿಯಾಗಿ ಆಯ್ಕೆಯಾಗಿದ್ದಾರೆ.

" ನೆಲ್ಸನ್ ಮಂಡೇಲಾ ಅವರು ಹೇಳಿದಂತೆ ಮಾಡಿ ತೋರಿಸುವವರೆಗೂ ಅದು ಅಸಾಧ್ಯವೆಂಬಂತೆಯೇ ಕಾಣುತ್ತದೆ. ಆದರೆ ಸ್ನೇಹಿತರೇ, ನಾವು ಮಾಡಿ ತೋರಿಸಿದ್ದೇವೆ. ಅದನ್ನು ಮಾಡಿರುವುದು ನೀವು. ನ್ಯೂಯಾರ್ಕ್ ನಗರಕ್ಕೆ ಡೆಮೊಕ್ರಾಟ್ ಮೇಯರ್ ಅಭ್ಯರ್ಥಿಯಾಗುವುದು ನನ್ನ ಪಾಲಿಗೆ ದೊಡ್ಡ ಗೌರವ " ಎಂದು ಝೋಹ್ರಾನ್ ಮಮ್ದಾನಿ ಹೇಳಿದ್ದಾರೆ.

ಅವರು ಹೇಳಿದ್ದರಲ್ಲಿ ಆಶ್ಚರ್ಯವೇನಿಲ್ಲ. ಯಾಕಂದ್ರೆ ಈ ಸ್ವಯಂ ಘೋಷಿತ ಡೆಮೋಕ್ರಾಟಿಕ್ ಸಮಾಜವಾದಿ ಅಲ್ಲಿ ಆಯ್ಕೆಯಾಗುವುದು ಅಸಾಧ್ಯ ಎಂಬಷ್ಟೇ ಕಷ್ಟವಿತ್ತು. ಆದರೆ ಅವರು ಆಯ್ಕೆಯಾಗಿದ್ದಾರೆ. ಅಸಾಧ್ಯವನ್ನು ಸಾಧ್ಯವಾಗಿಸಿದ್ದಾರೆ. ತೀರಾ ಇತ್ತೀಚಿನವರೆಗೂ ಪ್ರಭಾವೀ ನಾಯಕ ಕುಮೋ ಅವರೇ ಗೆಲ್ಲುವ ಫೆವರಿಟ್ ಆಗಿದ್ದರು. ಆದರೆ ಮಂಗಳವಾರ ಅವರು 36.4% ಮತಗಳನ್ನು ಪಡೆದು ಸೋಲೊಪ್ಪಿಕೊಂಡಿದ್ದಾರೆ. ಈ ವರ್ಷದ ಅಂತ್ಯದಲ್ಲಿ ಎಂಬತ್ತು ಲಕ್ಷ ಜನಸಂಖ್ಯೆಯ ನ್ಯೂಯಾರ್ಕ್ ನಗರದ ಮೇಯರ್ ಹುದ್ದೆಗೆ ಚುನಾವಣೆ ನಡೆಯಲಿದೆ. ನ್ಯೂಯಾರ್ಕ್ ಡೆಮೊಕ್ರಾಟರ ಭದ್ರಕೋಟೆ ಎಂದೇ ಪರಿಗಣಿಸಲ್ಪಟ್ಟ ನಗರ.

"ನಿಮಗಾಗಿ ಕೆಲಸ ಮಾಡಲು, ನಿಮಗೆ ಸವಲತ್ತುಗಳು ಕೈಗೆಟಕುವಂತಾಗಲು, ನೀವು ಸುರಕ್ಷಿತವಾಗಿರಲು ನಾನು ಹೋರಾಡುತ್ತೇನೆ. ನಾವು ಸ್ವತಂತ್ರವಾಗಿರಬಹುದು, ನಮ್ಮ ಜೀವನೋಪಾಯ ಗಳಿಸಬಹುದು ಹಾಗು ನಮ್ಮ ಹಕ್ಕುಗಳನ್ನು ಕೇಳಬಹುದು " ಎಂದು ಝೋಹ್ರಾನ್ ಮಮ್ದಾನಿ ಹೇಳಿದ್ದಾರೆ. ತನ್ನ ಹಿನ್ನೆಲೆ ಹಾಗು ಸಿದ್ಧಾಂತದ ಬಗ್ಗೆ ಮುಕ್ತವಾಗಿ ಮಾತಾಡುವ ಝೋಹ್ರಾನ್ ತಾನು ಅಧ್ಯಕ್ಷ ಟ್ರಂಪ್ ಪಾಲಿನ ಅತ್ಯಂತ ಕೆಟ್ಟ ದುಃಸ್ವಪ್ನ ಎಂದೇ ಬಣ್ಣಿಸಿಕೊಂಡಿದ್ದಾರೆ.

ಝೋಹ್ರಾನ್ ಉಗಾಂಡದ ಶಿಕ್ಷಣ ತಜ್ಞ ಮಹಮೂದ್ ಮಮ್ದಾನಿ ಹಾಗು ಖ್ಯಾತ ಭಾರತೀಯ ಚಿತ್ರ ನಿರ್ದೇಶಕಿ ಮೀರಾ ನಾಯರ್ ಅವರ ಪುತ್ರ. ಹುಟ್ಟಿದ್ದು, ಬೆಳೆದಿದ್ದು ಉಗಾಂಡದ ಕಂಪಾಲದಲ್ಲಿ. ಏಳು ವರ್ಷದವನಿರುವಾಗ ನ್ಯೂಯಾರ್ಕ್ ಗೆ ಬಂದರು. 2018 ರಲ್ಲಿ ಅಮೇರಿಕನ್ ಪ್ರಜೆಯಾದರು. ಮೈನೆ ರಾಜ್ಯದ ಬೌಡೊಯ್ನ್ ಕಾಲೇಜಿನಲ್ಲಿ ಆಫ್ರಿಕನ್ ಸ್ಟಡೀಸ್ ನಲ್ಲಿ ಪದವಿ ಪಡೆದಿದ್ದಾರೆ. ಈ ವರ್ಷದ ಪ್ರಾರಂಭದಲ್ಲಿ ಸಿರಿಯನ್ ಕಲಾವಿದೆ ರಮಾ ದುವಾಜಿಯನ್ನು ವಿವಾಹವಾದರು. ರಾಜಕೀಯಕ್ಕೆ ಬರುವ ಮೊದಲು ಸರಕಾರ ಒಕ್ಕಲೆಬ್ಬಿಸುವ ವಿರುದ್ಧ ಹೋರಾಡಲು ಬಡವರಿಗೆ ನೆರವಾಗುತ್ತಿದ್ದರು. ರ್ಯಾಪ್ ಸಂಗೀತ ಹಾಗು ಬರಹ ರಂಗದಲ್ಲೂ ಕೈಯಾಡಿಸಿದ್ದರು.

2020 ರಲ್ಲಿ ನ್ಯೂಯಾರ್ಕ್ ಅಸೆಂಬ್ಲಿಗೆ ಸ್ಪರ್ಧಿಸಿ ಅದರ ಸದಸ್ಯರಾದರು. ಆ ಸ್ಥಾನ ಪಡೆದ ಪ್ರಪ್ರಥಮ ದಕ್ಷಿಣ ಏಷ್ಯಾದ ವ್ಯಕ್ತಿ, ಪ್ರಪ್ರಥಮ ಉಗಾಂಡಾ ಮೂಲದ ವ್ಯಕ್ತಿ ಹಾಗು ಮೂರನೇ ಮುಸ್ಲಿಂ ವ್ಯಕ್ತಿ ಅವರಾದರು.

ತಾನು ಧ್ವನಿ ಇಲ್ಲದ ವರ್ಗಗಳ ಧ್ವನಿ ಎಂದೇ ಗುರುತಿಸಿಕೊಳ್ಳುವ ಝೋಹ್ರಾನ್, ವಿಶ್ವದ ಅತ್ಯಂತ ದುಬಾರಿ ನಗರಗಳಲ್ಲಿ ಒಂದಾದ ನ್ಯೂಯಾರ್ಕ್ ನಲ್ಲಿ ದುಡಿಯುವ ವರ್ಗದ ಜನರ ಪಾಲಿಗೆ ಜೀವನ ಸುಲಭವಾಗಿಸುವುದೇ ತನ್ನ ಗುರಿ ಎಂದು ಘೋಷಿಸಿದ್ದರು. ನಗರದ ಅತಿ ಶ್ರೀಮಂತರಿಗೆ ಹೆಚ್ಚುವರಿ ತೆರಿಗೆ ವಿಧಿಸಿ ದುಡಿಯುವವರಿಗೆ ಅಗತ್ಯ ವಸ್ತುಗಳು ಕೈಗೆಟಕುವ ಬೆಲೆಯಲ್ಲಿ ಸಿಗುವಂತೆ ಮಾಡುವುದು ಅವರ ಪ್ಲ್ಯಾನ್. ಬರ್ನಿ ಸ್ಯಾಂಡರ್ಸ್ ಹಾಗು ಅಲೆಕ್ಸಾಂಡ್ರಾ ಒಕಾಸಿಯೋ ರಂತಹ ಇತರ ಸಮಾಜವಾದಿ ಡೆಮೊಕ್ರಾಟ್ ನಾಯಕರು ಝೋಹ್ರಾನ್ ನನ್ನ ಬೆಂಬಲಿಸಿದ್ದಾರೆ.

ತಳಮಟ್ಟದಲ್ಲಿ ಕಾರ್ಯಕರ್ತರ ಜಾಲವನ್ನೇ ಕಟ್ಟಿ ನಿಲ್ಲಿಸಿರುವ ಝೋಹ್ರಾನ್ ತನ್ನ ವಿಭಿನ್ನ ಪ್ರಚಾರ ತಂತ್ರದ ಮೂಲಕ ಜನರ ಗಮನ ಸೆಳೆದರು. ಚುನಾವಣಾ ಪ್ರಕ್ರಿಯೆ ಬಗ್ಗೆ ಉಪಯುಕ್ತ ಮಾಹಿತಿಗಳಿರುವ ಆಕರ್ಷಕ ಶಾರ್ಟ್ ವಿಡಿಯೋಗಳು, ಬಾಲಿವುಡ್ ಸಿನಿಮಾಗಳ ಉಲ್ಲೇಖಗಳು, ಝೋಹ್ರಾನ್ ರಿಂದ ಆಗಾಗ ಹಿಂದಿ ಉರ್ದು ಮಾತುಗಳು ಜನರನ್ನು ಆಕರ್ಷಿಸಿದ್ದವು. ಒಟ್ಟಾರೆ ಜನರನ್ನು ನೇರವಾಗಿ ತಲುಪಿ, ಅವರ ಸಮಸ್ಯೆಗಳಿಗೆ ಸ್ಪಂದಿಸುವ ಭರವಸೆಯಾಗಿ ಝೋಹ್ರಾನ್ ಕಂಡಿದ್ದಾರೆ.

ನಿರೀಕ್ಷೆಯಂತೆ ಟ್ರಂಪ್ ಆಡಳಿತ ವೈಖರಿಯ ಕಟು ಟೀಕಾಕಾರರಾಗಿ ಝೋಹ್ರಾನ್ ಗುರುತಿಸಿಕೊಂಡಿದ್ದಾರೆ. ವಿಶೇಷವಾಗಿ ಟ್ರಂಪ್ ಸರಕಾರದ ವಲಸೆ ನೀತಿ, ಅಕ್ರಮ ವಲಸಿಗರ ಬಂಧನಗಳನ್ನು ಅವರು ಸ್ಪಷ್ಟವಾಗಿ ವಿರೋಧಿಸಿದ್ದಾರೆ.

ಕುಮೋ ವಿರುದ್ಧದ ಝೋಹ್ರಾನ್ ಗೆಲುವು ಹಲವು ಕಾರಣಗಳಿಗಾಗಿ ಅಸಾಮಾನ್ಯವಾದುದು. ಈ ಮೊದಲು ನ್ಯೂಯಾರ್ಕ್ ರಾಜ್ಯದ ಗವರ್ನರ್ ಆಗಿದ್ದ ಕುಮೋ ಒಂದು ಡಝನ್ ಮಹಿಳೆಯರು ಲೈಂಗಿಕ ದೌರ್ಜನ್ಯ ಆರೋಪ ಮಾಡಿದ ಬಳಿಕ ರಾಜೀನಾಮೆ ನೀಡಬೇಕಾಯಿತು. ಕುಮೋ ತಂದೆ ಕೂಡ ನ್ಯೂಯಾರ್ಕ್ ಗವರ್ನರ್ ಆಗಿದ್ದವರು. ಕುಮೋ ಮೇಯರ್ ಚುನಾವಣೆಗೆ ಸ್ಪರ್ಧಿಸಲು ಮುಂದಾಗಲು ಪ್ರಮುಖ ಕಾರಣ ಹಾಲಿ ಮೇಯರ್ ಡೆಮೊಕ್ರಾಟ್ ಪಕ್ಷದ ಎರಿಕ್ ಆಡಮ್ಸ್ ವಿರುದ್ಧ ಬಂದ ಭ್ರಷ್ಟಾಚಾರ ಆರೋಪಗಳು. ಈಗ ಎರಿಕ್ ಸ್ವತಂತ್ರ ಅಭ್ಯರ್ಥಿಯಾಗಿ ಕಣಕ್ಕಿಳಿಯುತ್ತಿದ್ದಾರೆ. ಹಾಗಾಗಿ ಈಗ ಡೆಮೊಕ್ರಾಟ್ ಮೇಯರ್ ಅಭ್ಯರ್ಥಿ ಆಗಲು ಹೊರಟಿದ್ದರು ಕುಮೋ. ಅವರಿಗೆ ಮಾಜಿ ಅಧ್ಯಕ್ಷ ಬಿಲ್ ಗೇಟ್ಸ್ , ಮಾಜಿ ಮೇಯರ್ ಬ್ಲೂಮ್ ಬರ್ಗ್ ಅವರ ಬೆಂಬಲವೂ ಇತ್ತು.

ಝೋಹ್ರಾನ್ ಯಹೂದಿ ವಿರೋಧಿ ಎಂದು ಕುಮೋ ಪ್ರಚಾರ ಮಾಡಿದ್ದರು. ಇಸ್ರೇಲ್ ಬಿಟ್ಟರೆ ಅತಿ ಹೆಚ್ಚು ಯಹೂದಿಗಳು ಇರುವ ನಗರ ನ್ಯೂಯಾರ್ಕ್. ಆದರೆ ಅದಕ್ಕೆ ತಿರುಗೇಟು ಕೊಟ್ಟಿದ್ದ ಝೋಹ್ರಾನ್ "ನ್ಯೂಯಾರ್ಕ್ ನ ಯಹೂದಿಗಳಿಗೆ ಎಲ್ಲಿ ಅಗತ್ಯ ಬಿದ್ದರೂ ನಾನು ಅವರ ಜೊತೆಗಿರುತ್ತೇನೆ " ಎಂದು ಹೇಳಿದ್ದರು. ಹಾಗು ಕುಮೋ ಪ್ರಚಾರಕ್ಕೆ ದೊಡ್ಡ ಕಾರ್ಪೊರೇಟ್ ಕಂಪೆನಿಗಳ ಹಣ ಪಡೆಯುತ್ತಿರುವುದನ್ನು ಪ್ರಶ್ನಿಸಿದ್ದರು. ನ್ಯೂ ಯಾರ್ಕ್ ಟೈಮ್ಸ್ ಪ್ರಕಾರ ಕುಮೋ ಬೆಂಬಲಿಗರು ಝೋಹ್ರಾನ್ ವಿರುದ್ಧ ಪ್ರಚಾರಕ್ಕೆ 25 ಮಿಲಿಯನ್ ಡಾಲರ್ ಹಣ ಸಂಗ್ರಹಿಸಿದ್ದರು.

ಈ ಅಧ್ಯಕ್ಷೀಯ ಅಭ್ಯರ್ಥಿ ಆಯ್ಕೆಯ ಫಲಿತಾಂಶ ಅಧಿಕೃತವಾಗಿ ಹೊರಬೀಳುವುದು ಜುಲೈ ಒಂದರಂದು. ಝೋಹ್ರಾನ್ ಭರ್ಜರಿ ಮುನ್ನಡೆ ಪಡೆದಿರುವುದರಿಂದ ಅವರ ಗೆಲುವು ಬಹುತೇಕ ಖಚಿತವಾಗಿದೆ. ಅವರು ಸ್ವತಂತ್ರ ಅಭ್ಯರ್ಥಿ ಹಾಲಿ ಮೇಯರ್ ಎರಿಕ್ ಆಡಮ್ಸ್ ಹಾಗು ರಿಪಬ್ಲಿಕನ್ ಅಭ್ಯರ್ಥಿ ಕರ್ಟಿಸ್ ಸಿಲ್ವಾ ಅವರನ್ನು ನವೆಂಬರ್ ನಲ್ಲಿ ನಡೆಯುವ ಮೇಯರ್ ಚುನಾವಣೆಯಲ್ಲಿ ಎದುರಿಸಲಿದ್ದಾರೆ.

ಆ ಚುನಾವಣೆಯಲ್ಲಿ ಗೆದ್ದರೆ, ಝೋಹ್ರಾನ್ ನ್ಯೂಯಾರ್ಕ್ ನ ಪ್ರಪ್ರಥಮ ಇಂಡಿಯನ್ ಅಮೇರಿಕನ್ ಹಾಗು ಪ್ರಪ್ರಥಮ ಮುಸ್ಲಿಂ ಮೇಯರ್ ಅಗಲಿದ್ದಾರೆ. ಅವರ ಗೆಲುವು ಅಮೇರಿಕದ ರಾಷ್ಟ್ರೀಯ ರಾಜಕಾರಣದಲ್ಲಿ ಸಮಾಜವಾದಿ ಹಾಗು ಜನಪರ ಚಿಂತನೆಗೆ ಜನ ಬೆಂಬಲ ಪಡೆಯಲಿದೆ.

ನ್ಯೂಯಾರ್ಕ್ ನಲ್ಲಿ ಡೆಮೊಕ್ರಾಟ್ ಮತದಾರರು ಹೆಚ್ಚಿದ್ದರೂ ಕಳೆದ ಅಧ್ಯಕ್ಷೀಯ ಚುನಾವಣೆಯಲ್ಲಿ ಕಮಲಾ ಹ್ಯಾರಿಸ್ ಗೆ ಇಲ್ಲಿ ಸಿಕ್ಕಿದ ಮುನ್ನಡೆ ಈ ಹಿಂದೆ ಬೈಡನ್ ಗೆ ಸಿಕ್ಕಿದ್ದಕ್ಕಿಂತ ಕಡಿಮೆ ಇತ್ತು. ಅದಕ್ಕೆ ಡೆಮೊಕ್ರಾಟರ ಹೆಚ್ಚು ಪ್ರಗತಿಪರ ನಿಲುವುಗಳೇ ಕಾರಣ ಎಂಬ ವಿಶ್ಲೇಷಣೆಯೂ ಕೇಳಿ ಬಂದಿತ್ತು.

ಈ ನವೆಂಬರ್ ನಲ್ಲಿ ಪಕ್ಕಾ ಪ್ರಗತಿಪರ, ಜಾತ್ಯತೀತ ಹಾಗು ಸಮಾಜವಾದಿ ಚಿಂತನೆಯ ಮುಸ್ಲಿಂ ಅಭ್ಯರ್ಥಿ ಝೋಹ್ರಾನ್ ಆ ಅಭಿಪ್ರಾಯವನ್ನು ಸುಳ್ಳಾಗಿಸಿ, ನ್ಯೂಯಾರ್ಕ್ ನಲ್ಲಿ ಗೆಲುವು ದಾಖಲಿಸುತ್ತಾರಾ ಎಂಬುದು ಸದ್ಯದ ಕುತೂಹಲ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News