ಇಂದಿನಿಂದ ಆಸ್ಟ್ರೇಲಿಯದಲ್ಲಿ 16ರೊಳಗಿನ ಮಕ್ಕಳಿಗೆ ಸಾಮಾಜಿಕ ಜಾಲತಾಣ ನಿಷೇಧ!
ಸಾಂದರ್ಭಿಕ ಚಿತ್ರ | Photo Credit : freepik
16 ವಯಸ್ಸಿಗಿಂತ ಕೆಳಗಿನ ಮಕ್ಕಳು ಬಳಸುತ್ತಿರುವ ಲಕ್ಷಾಂತರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿದ ಆಸ್ಟ್ರೇಲಿಯದ ಶಾಸನ ವಿರುದ್ಧ ಟೆಕ್ ಕಂಪೆನಿಗಳು ಕಿಡಿ ಕಾರಿವೆ.
ಆಸ್ಟ್ರೇಲಿಯದಲ್ಲಿ 16 ವರ್ಷಕ್ಕಿಂತ ಕಡಿಮೆ ವಯಸ್ಸಿನ ಬಳಕೆದಾರರಿಗೆ ಇಂದಿನಿಂದ ಸಾಮಾಜಿಕ ಮಾಧ್ಯಮ ಬಳಕೆಯನ್ನು ನಿರ್ಬಂಧಿಸಬೇಕಾಗುತ್ತದೆ. ಯುವ ಬಳಕೆದಾರರು ಸಾಮಾಜಿಕ ಜಾಲತಾಣಗಳನ್ನು ಸುರಕ್ಷಿತವಾಗಿ ಬಳಸುವ ಬಗ್ಗೆ ಜಾಗತಿಕವಾಗಿ ಪೋಷಕರಿಂದ ಒತ್ತಾಯವಿದೆ. ಡಿಸೆಂಬರ್ 10ರ ನಂತರ ಫೇಸ್‌ಬುಕ್, ಇನ್ಸ್ಟಾಗ್ರಾಂ, ಕಿಕ್, ರೆಡಿಟ್, ಸ್ನ್ಯಾಪ್‌ಚಾಟ್, ಥ್ರೆಡ್ಸ್, ಟಿಕ್‌ಟಾಕ್, ಟ್ವಿಚ್, ಎಕ್ಸ್ ಹಾಗೂ ಯುಟ್ಯೂಬ್ 16ರೊಳಗಿನ ಆಸ್ಟ್ರೇಲಿಯನ್ನರು ವೇದಿಕೆಯನ್ನು ಬಳಸದಂತೆ ಸೂಕ್ತ ಕ್ರಮ ಕೈಗೊಳ್ಳಬೇಕಿದೆ.
ಆದರೆ ಆಸ್ಟ್ರೇಲಿಯದ ಈ ಶಾಸನಕ್ಕೆ ತಂತ್ರಜ್ಞಾನ ಸಂಸ್ಥೆಗಳಿಂದ ಟೀಕೆ ವ್ಯಕ್ತವಾಗಿದೆ. ಆರಂಭದಲ್ಲಿ ಶೈಕ್ಷಣಿಕ ಉದ್ದೇಶಕ್ಕಾಗಿ ‘ಯುಟ್ಯೂಬ್’ ಬಳಸಲು ಅವಕಾಶ ಕೊಡುವ ಬಗ್ಗೆ ಆಸ್ಟ್ರೇಲಿಯ ಆಲೋಚಿಸಿತ್ತು. ಆದರೆ ನಂತರ ನಿರ್ಧಾರ ಬದಲಿಸಿದ ಆಸ್ಟ್ರೇಲಿಯದ ಸರ್ಕಾರ ಸಾಮಾಜಿಕ ಜಾಲತಾಣಗಳನ್ನು ಅಪ್ರಾಪ್ತರ ಬಳಕೆಗೆ ನಿಷೇಧಿಸಿದೆ. ಆದರೆ ಡೇಟಿಂಗ್ ವೆಬ್ತಾಣಗಳು, ಗೇಮಿಂಗ್ ವೇದಿಕೆಗಳು ಮತ್ತು ಎಐ ಚಾಟ್‌ಬಾಟ್‌ಗಳನ್ನು ನಿಯಮದಿಂದ ಹೊರಗಿರಿಸಲಾಗಿದೆ.
16 ವಯಸ್ಸಿಗಿಂತ ಕೆಳಗಿನ ಮಕ್ಕಳು ಬಳಸುತ್ತಿರುವ ಲಕ್ಷಾಂತರ ಖಾತೆಗಳನ್ನು ಬ್ಲಾಕ್ ಮಾಡುವಂತೆ ಆದೇಶಿಸಿದ ಆಸ್ಟ್ರೇಲಿಯದ ಶಾಸನದ ವಿರುದ್ಧ ಟೆಕ್ ಕಂಪೆನಿಗಳು ಕಿಡಿ ಕಾರಿವೆ. ಟೆಕ್ ಕಂಪನಿಗಳು ಮಾತ್ರವಲ್ಲದೆ ಆಸ್ಟ್ರೇಲಿಯದ ಮಾನವ ಹಕ್ಕು ಆಯೋಗ ಕೂಡ ಅಪ್ರಾಪ್ತ ಬಳಕೆದಾರರನ್ನು ಸಾಮಾಜಿಕ ಮಾಧ್ಯಮ ಬಳಕೆಯಿಂದ ನಿಷೇಧಿಸುವುದು ಸೂಕ್ತವಾದ ಸ್ಪಂದನೆಯಲ್ಲ ಎಂದು ಹೇಳಿದೆ. ಇದರಿಂದ ಮಕ್ಕಳ ವಾಕ್ ಸ್ವಾತಂತ್ರ್ಯಕ್ಕೆ ಧಕ್ಕೆಯಾಗಲಿದೆ ಎಂದು ಆಯೋಗ ಅಭಿಪ್ರಾಯಪಟ್ಟಿದೆ.
ಜಾಗತಿಕವಾಗಿ ಪ್ರತಿಧ್ವನಿಸುವ ಸಾಧ್ಯತೆ
ಆದರೆ ಆಸ್ಟ್ರೇಲಿಯದ ಈ ನಿರ್ಧಾರ ಜಾಗತಿಕವಾಗಿ ಪ್ರತಿಧ್ವನಿಸುವ ಸಾಧ್ಯತೆಯಿದೆ. ಇದೀಗ ಆಸ್ಟ್ರೇಲಿಯದಲ್ಲಿ “ಆನ್‌ಲೈನ್ ಸುರಕ್ಷತಾ ತಿದ್ದುಪಡಿ (ಸಾಮಾಜಿಕ ಮಾಧ್ಯಮ ಬಳಕೆಗೆ ಕನಿಷ್ಠ ವಯಸ್ಸು) ಕಾಯ್ದೆಯನ್ನು ಜಾರಿಗೆ ತರಲಾಗಿದೆ. ಶಾಸನ ಜಾರಿಗೆ ಬಂದ ನಂತರ 16ರ ಒಳಗಿನ ವಯಸ್ಸಿನ ಮಕ್ಕಳ ಖಾತೆಯನ್ನು ನಿಷ್ಕ್ರಿಯಗೊಳಿಸಲು ಕ್ರಮ ಕೈಗೊಳ್ಳಲಾಗುವುದು ಮತ್ತು ಹೊಸ ಖಾತೆ ತೆರೆಯಲು ಅನುಮತಿ ಕೊಡಲಾಗುವುದಿಲ್ಲ. ಸ್ಥಳೀಯ ವರದಿಗಳ ಪ್ರಕಾರ ಮೆಟಾ ಅದಾಗಲೇ 16ರೊಳಗಿನ ಮಕ್ಕಳ ಖಾತೆಗಳನ್ನು ನಿಷ್ಕ್ರಿಯಗೊಳಿಸುವ ಕಾರ್ಯವನ್ನು ಆರಂಭಿಸಿದೆ. ಸಾಮಾಜಿಕ ಮಾಧ್ಯಮ ಬಳಸುವ ಮಕ್ಕಳನ್ನು ಕಾನೂನು ಶಿಕ್ಷಿಸುವುದಿಲ್ಲ ಬದಲಾಗಿ ಮಕ್ಕಳಿಗೆ ಬಳಕೆಗೆ ಅವಕಾಶ ಕೊಡುವ ವೇದಿಕೆಗೆ 33 ದಶಲಕ್ಷ ಡಾಲರ್ ದಂಡ ಹೇರುವ ಅಪಾಯವಿದೆ.
ಆಸ್ಟ್ರೇಲಿಯ ಸರಕಾರದ ಪ್ರಕಾರ ಯುವಜನತೆ ಸಾಮಾಜಿಕ ಜಾಲತಾಣಗಳನ್ನು ಬಳಸುವಾಗ ಎದುರಿಸಬಹುದಾದ ಅಪಾಯಗಳಿಂದ ರಕ್ಷಣೆ ನೀಡುವುದು ಈ ನಿಷೇಧದ ಮುಖ್ಯ ಉದ್ದೇಶವಾಗಿದೆ. ಇದಕ್ಕೆ ಮೊದಲು ಆಸ್ಟ್ರೇಲಿಯದ ನಿಯಂತ್ರಣ ಪ್ರಾಧಿಕಾರ ನಡೆಸಿದ ಸಮೀಕ್ಷೆಯಲ್ಲಿ ಯುವ ಆಸ್ಟ್ರೇಲಿಯನ್ನು ಸೈಬರ್ ಬೆದರಿಕೆ ಪ್ರಕರಣಗಳನ್ನು ಎದುರಿಸಿರುವುದು ಕಂಡುಬಂದಿದೆ.
ಸಾಮಾಜಿಕ ಜಾಲತಾಣ ನಿಷೇಧದ ಉದ್ದೇಶವೇನು?
ಆಸ್ಟ್ರೇಲಿಯದಲ್ಲಿ ಆನ್‌ಲೈನ್ ಸುರಕ್ಷೆಗೆ ನಿಯಂತ್ರಕನಾಗಿರುವ ಇಸೇಫ್ಟಿ 2024ರ ಡಿಸೆಂಬರ್‌ನಿಂದ 2025ರ ಫೆಬ್ರವರಿ ನಡುವೆ ನಡೆಸಿದ ಸಮೀಕ್ಷೆಯಲ್ಲಿ 4ರಲ್ಲಿ 3 (ಶೇ 74) ಮಕ್ಕಳು ಆನ್‌ಲೈನ್‌ನಲ್ಲಿ ಹಾನಿಗೆ ಸಂಬಂಧಿಸಿದ ವಿಷಯವನ್ನು ನೋಡಿದ್ದಾರೆ ಅಥವಾ ಕೇಳಿದ್ದಾರೆ. 2 ರಲ್ಲಿ 1 ಕ್ಕಿಂತ ಹೆಚ್ಚು (ಶೇ 53) ಮಕ್ಕಳು ಸೈಬರ್ ಬೆದರಿಕೆಯನ್ನು ಅನುಭವಿಸಿದ್ದಾರೆ. 5 ರಲ್ಲಿ 3 (ಶೇ 60) ಮಕ್ಕಳು ಆನ್‌ಲೈನ್ ದ್ವೇಷವನ್ನು ನೋಡಿದ್ದಾರೆ ಅಥವಾ ಕೇಳಿದ್ದಾರೆ, ಆದರೆ 4 ರಲ್ಲಿ 1 ಕ್ಕಿಂತ ಹೆಚ್ಚು (ಶೇ 27) ಮಕ್ಕಳು ವೈಯಕ್ತಿಕವಾಗಿ ಅದನ್ನು ಅನುಭವಿಸಿದ್ದಾರೆ. 4 ರಲ್ಲಿ 1 (ಶೇ 25) ಮಕ್ಕಳು ಒಮ್ಮತವಿಲ್ಲದ ಟ್ರ್ಯಾಕಿಂಗ್, ಮೇಲ್ವಿಚಾರಣೆ ಅಥವಾ ಕಿರುಕುಳವನ್ನು ಅನುಭವಿಸಿದ್ದಾರೆ.