ಬದುಕು ಘನತೆ ಮತ್ತು ಮಾನವ ಹಕ್ಕುಗಳ ಪ್ರಶ್ನೆ: ಭಾರತದಲ್ಲಿ ನಾಗರಿಕ ಹಕ್ಕುಗಳನ್ನು ಮಾನವ ಹಕ್ಕುಗಳ ವಿಶಾಲ ಪರಿಧಿಯಲ್ಲೇ ನೋಡಬೇಕಿದೆ
ಇಂದು ವಿಶ್ವ ಮಾನವ ಹಕ್ಕುಗಳ ದಿನ
ಡಿಸೆಂಬರ್ 10 ಅಂತರ್‌ರಾಷ್ಟ್ರೀಯ ಮಾನವ ಹಕ್ಕುಗಳ ದಿನ. ದ್ವಿತೀಯ ಮಹಾಯುದ್ಧದ ಘೋರ ಪರಿಣಾಮಗಳಿಂದ ಎಚ್ಚೆತ್ತ ವಿಶ್ವ ಸಮುದಾಯ, ಮಾನವ ಪ್ರಪಂಚದಲ್ಲಿ ಮಾನವ ಹಕ್ಕುಗಳಿಗೆ ಮಾನ್ಯತೆ ಇಲ್ಲದಿರುವುದನ್ನು ಗಮನಿಸಿದ ಒಂದು ಗಳಿಗೆ ಈ ಕಾಲಘಟ್ಟ. ಇದೇ ಸಮಯದಲ್ಲಿ ಭಾರತವೂ ವಸಾಹತುಶಾಹಿಯ ಸಂಕೋಲೆಗಳಿಂದ ವಿಮೋಚನೆ ಪಡೆದದ್ದರಿಂದ, ಹಿಂದಿನ ರಾಜಪ್ರಭುತ್ವಗಳ ಆಳ್ವಿಕೆಯಲ್ಲಿ ಕಲ್ಪನೆಯಲ್ಲೂ ಇಲ್ಲದಿದ್ದ ಮಾನವ ಹಕ್ಕುಗಳ ಅರಿವು ಸ್ವತಂತ್ರ ಭಾರತದ ಸಂವಿಧಾನದ ಮೂಲಕ ತನ್ನದೇ ಆದ ಪ್ರಾಶಸ್ತ್ಯ ಪಡೆದಿತ್ತು. ಭಾರತದ ಇತಿಹಾಸದಲ್ಲಿ ಮಾನವ ಹಕ್ಕುಗಳ ಕಲ್ಪನೆ ವೇದಕಾಲದಿಂದಲೇ ಇತ್ತು ಎಂದು ಬಿಜೆಪಿ ಮತ್ತಿತರ ಸಾಂಪ್ರದಾಯಿಕ ಪಕ್ಷಗಳು ಹೇಳಿದರೂ, ಇದು ಚರಿತ್ರೆಯನ್ನು ವೈಭವೀಕರಿಸುವ ಆತ್ಮರತಿಯ ಅತಿರೇಕ ಎಂದಷ್ಟೇ ಹೇಳಬಹುದು.
ಏಕೆಂದರೆ ‘ಮಾನವ ಹಕ್ಕು’ ಎನ್ನುವುದು ಮೂಲತಃ ಮಾನವ ಜೀವಿಯ ಬದುಕಿಗೆ ಸಂಬಂಧಿಸಿದ ನೇರವಾದ ಒಂದು ಮೂಲಭೂತ ಹಕ್ಕು. ಸಂವಿಧಾನ, ಪ್ರಜಾಪ್ರಭುತ್ವ ಅಥವಾ ನಿರಂಕುಶಾಧಿಕಾರ-ಸರ್ವಾಧಿಕಾರಗಳ ಚೌಕಟ್ಟುಗಳನ್ನೂ ಮೀರಿ, ಮನುಷ್ಯ ಕುಲದಲ್ಲಿ ಜನಿಸುವ ಜೀವಿ ಮತ್ತು ಇತರ ಚರಾಚರ ಜೀವಿಗಳಿಗೆ ಸ್ವಾಭಾವಿಕವಾಗಿ ತಮ್ಮದೇ ಆದ ಬದುಕುವ ಹಕ್ಕು ಇರುತ್ತದೆ. ಈ ಬದುಕುವ ಹಕ್ಕಿನ ಹಂದರ ಅಥವಾ ಕ್ಯಾನ್ವಾಸ್ ಭೂಗೋಳದಷ್ಟೇ ವಿಶಾಲವಾಗಿದ್ದು, ಅದರ ಪರಿಧಿಯಲ್ಲಿ ಜೀವಿಯ ಘನತೆ, ಗೌರವ, ಉತ್ತಮ ಪರಿಸರ ಹಾಗೂ ಸ್ವಾಸ್ಥ್ಯದ ಕಲ್ಪನೆಗಳೂ ಒಳಗೊಳ್ಳುತ್ತವೆ. ಮಾನವ ಕುಲಕ್ಕೆ ಸಂಬಂಧಿಸಿದಂತೆ ಶಿಕ್ಷಣ, ಉತ್ತಮ ಆರೋಗ್ಯ, ನಿತ್ಯ ಬದುಕಿಗೆ ಅಗತ್ಯವಾದ ಜಲ ಸಂಪತ್ತು, ಹಸಿರು ಸಂಪತ್ತು ಮತ್ತು ಬದುಕಲು ಬೇಕಾದ ಮೂಲ ಸೌಕರ್ಯಗಳೆಲ್ಲವೂ ಮಾನವ ಹಕ್ಕುಗಳ ನಿರ್ವಚನೆಯ ಒಂದು ಭಾಗವಾಗಿರುತ್ತವೆ.
ಆಧುನಿಕ ನಾಗರಿಕತೆಯ ನಡಿಗೆ
ಈ ಕಲ್ಪನೆಗಳಿಗೆ ಅಧಿಕೃತ ಮೊಹರು ದೊರೆತದ್ದು, 20ನೇ ಶತಮಾನದ ಭೌಗೋಳಿಕ ರಾಜಕೀಯ ಬೆಳವಣಿಗೆಗಳ ನಡುವೆ ಮತ್ತು ವಿಭಿನ್ನ ತತ್ವ ಸಿದ್ಧಾಂತಗಳ ಕ್ರಾಂತಿಕಾರಿ ಜನಾಂದೋಲನಗಳ ಮೂಲಕ. ಜಗತ್ತಿನ ಇತಿಹಾಸದಲ್ಲಿ ಆಳ್ವಿಕೆಯ ಸ್ವರೂಪಗಳು ಬದಲಾದಂತೆಲ್ಲಾ ಮಾನವ ಹಕ್ಕುಗಳ ಕಲ್ಪನೆಯೂ ಬದಲಾಗುತ್ತಲೇ ಬಂದಿರುವುದನ್ನು 1950ರ ನಂತರದ ಯುಗದಲ್ಲೂ ಕಾಣಬಹುದು. ಇಲ್ಲಿ ಆಳುವ ವರ್ಗಗಳು, ಚುನಾಯಿತ ಸರಕಾರಗಳಾಗಲೀ ಅಥವಾ ಸರ್ವಾಧಿಕಾರವಾಗಲೀ, ತಮ್ಮ ಆಳ್ವಿಕೆಗೆ ಅನುಗುಣವಾಗಿ ಮಾನವ ಹಕ್ಕುಗಳನ್ನು ವ್ಯಾಖ್ಯಾನಿಸುವ ಮೂಲಕ, ತಳಮಟ್ಟದ ಸಮಾಜಗಳ ಮೇಲೆ ನಿಯಂತ್ರಣ ಸಾಧಿಸುತ್ತವೆ. ಪ್ರಜಾಪ್ರಭುತ್ವದಲ್ಲಿ ನಾಗರಿಕ ಹಕ್ಕುಗಳ ರಕ್ಷಣೆಗೆ ದೇಶದ ಸಂವಿಧಾನ ಆಕರ ಗ್ರಂಥವಾದರೆ, ವಿಶಾಲ ಹಂದರದ ಮಾನವ ಹಕ್ಕುಗಳು ಆಳ್ವಿಕೆಗಳ ಆದ್ಯತೆ ಮತ್ತು ಆಯ್ಕೆಗಳನ್ನು ಮೀರಿ ವ್ಯಕ್ತಿಗತ ಬದುಕನ್ನು ಅವಲಂಬಿಸುತ್ತವೆ.
ಈ ಹಿನ್ನೆಲೆಯಲ್ಲೇ ವರ್ತಮಾನ ಭಾರತದಲ್ಲಿ ನಾವು ಎದುರಿಸುತ್ತಿರುವ ಮಾನವ ಹಕ್ಕುಗಳ ಸವಾಲುಗಳನ್ನು ವಿಶ್ಲೇಷಿಸಬೇಕಿದೆ. ‘ನಾಗರಿಕ ಹಕ್ಕುಗಳು’ ಎಂಬ ಕಲ್ಪನೆ ಒಂದು ನಿರ್ದಿಷ್ಟ ಭೌಗೋಳಿಕ ರಾಷ್ಟ್ರದ ಆಳ್ವಿಕೆಯ ಚೌಕಟ್ಟಿನಲ್ಲಿ ಸಾಂವಿಧಾನಿಕವಾಗಿ ಪರಿಗಣಿಸಲ್ಪಡುವ ಪ್ರತೀ ವ್ಯಕ್ತಿಯ ಹಕ್ಕುಗಳಿಗೆ ಸಂಬಂಧಿಸಿರುತ್ತದೆ. ಶಿಕ್ಷಣ, ಆರೋಗ್ಯ, ವಸತಿ, ಉತ್ತಮ ಪರಿಸರ ಮತ್ತು ಸಂವಿಧಾನದಲ್ಲಿ ಸೂಚಿತವಾಗಿರುವ ಮೂಲಭೂತ ಹಕ್ಕುಗಳನ್ನು ಈ ವ್ಯಾಪ್ತಿಯಲ್ಲಿ ಒಳಗೊಳ್ಳಬಹುದು. ಈ ಎಲ್ಲ ಹಕ್ಕುಗಳ ಅಡಿಪಾಯ ಇರುವುದು ಪ್ರಜಾತಂತ್ರ ವ್ಯವಸ್ಥೆಯಲ್ಲಿ ಮತ್ತು ಅದನ್ನು ನಿರ್ವಹಿಸಲು ಅವಲಂಬಿಸುವ ಸಾಂಸ್ಥಿಕ ನೆಲೆಗಳಲ್ಲಿ. ಕಾಲಿಕ ಚುನಾವಣೆಗಳಿಂದ ಶಾಸನಬದ್ಧ ಆಡಳಿತದವರೆಗೂ ವಿಸ್ತರಿಸುವ ನಾಗರಿಕ ಹಕ್ಕುಗಳ ಪರಿಪಾಲನೆಯನ್ನು ಸಂವಿಧಾನದ ಚೌಕಟ್ಟಿನೊಳಗೇ ನಿರ್ವಹಿಸಬೇಕಾದ ಆದ್ಯ ಕರ್ತವ್ಯ ಚುನಾಯಿತ ಸರಕಾರಗಳದ್ದಾಗಿರುತ್ತದೆ. ಈ ಕರ್ತವ್ಯದಲ್ಲಿ ಸರಕಾರಗಳು ವಿಫಲವಾದಾಗ, ಸಾಮಾನ್ಯ ನಾಗರಿಕರು ಪ್ರತಿರೋಧಿಸುವ, ಹೋರಾಡುವ ಮತ್ತು ನ್ಯಾಯಕ್ಕಾಗಿ ಆಗ್ರಹಿಸುವ ಹಕ್ಕನ್ನೂ ಭಾರತದ ಸಂವಿಧಾನ ನೀಡಿದೆ.
ಸ್ವತಂತ್ರ ಭಾರತದ ನಡಿಗೆ
ಈ ನಿಟ್ಟಿನಲ್ಲಿ ಸ್ವತಂತ್ರ ಭಾರತದಲ್ಲಿ ಹಲವು ಸಂಘಟನೆಗಳು ನಾಗರಿಕ ಹಕ್ಕುಗಳಿಗಾಗಿ ಹೋರಾಡುತ್ತಲೇ ಬಂದಿವೆ. ಇದರ ಉಗಮವನ್ನು ತುರ್ತುಪರಿಸ್ಥಿತಿಯ ಸಂದರ್ಭದಲ್ಲಿ ಗುರುತಿಸಬಹುದು. ಸಾಮಾನ್ಯ ಜನತೆಯ ಸಾಂವಿಧಾನಿಕ ಮೂಲಭೂತ ಹಕ್ಕುಗಳನ್ನೇ ಕಸಿದುಕೊಳ್ಳುವ ಕರಾಳ ತುರ್ತುಪರಿಸ್ಥಿತಿ ಸ್ವತಂತ್ರ ಭಾರತದ ಚರಿತ್ರೆಯಲ್ಲಿ ಒಂದು ಪರ್ವಕಾಲ ಎಂದು ಹೇಳಬಹುದು. ಈ ಹಕ್ಕುಗಳನ್ನು ರಕ್ಷಿಸುವ ಸಲುವಾಗಿ ಜನಸಾಮಾನ್ಯರ ನೋವು, ಸಂಕಟ, ಸವಾಲುಗಳಿಗೆ ಹೆಗಲುನೀಡಿ ನಿಲ್ಲುವ ಮೂಲಕ ಮಾನವ ಹಕ್ಕು ಸಂಘಟನೆಗಳು ಪ್ರಜಾಪ್ರಭುತ್ವದ ಮರುಸ್ಥಾಪನೆಯಲ್ಲಿ ಯಶಸ್ವಿಯಾಗಿದ್ದು ಈಗ ಇತಿಹಾಸ.
ಆದರೆ ಈ ಮರುಸ್ಥಾಪಿತ ಪ್ರಜಾಪ್ರಭುತ್ವ ಕಳೆದ ಐದು ದಶಕಗಳಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಬೇಕಿತ್ತು, ಪ್ರಜಾತಂತ್ರದ ಅಡಿಪಾಯವನ್ನು ಶಿಥಿಲವಾಗದ ಹಾಗೆ ಭದ್ರಪಡಿಸಬೇಕಿತ್ತು. ಸಮಸ್ತ ಭಾರತೀಯ ಪ್ರಜೆಗಳು ತಮ್ಮ ಸಾಂವಿಧಾನಿಕ ಹಕ್ಕುಗಳನ್ನು ಪಡೆಯಲು ಹೋರಾಡಬೇಕಾದ ಅವಶ್ಯಕತೆಯೇ ಇಲ್ಲದ ರೀತಿಯಲ್ಲಿ ಶಾಸನಬದ್ಧ ಆಳ್ವಿಕೆಗಳು ಆಡಳಿತ ನಿರ್ವಹಣೆ ಮಾಡಬೇಕಿತ್ತು. ಈ ಹಾದಿಯಲ್ಲಿ ಭಾರತದ ಪ್ರಜಾತಂತ್ರ ಪೂರ್ತಿಯಾಗಿ ಅಲ್ಲದಿದ್ದರೂ, ಬಹುಮಟ್ಟಿಗೆ ಯಶಸ್ವಿಯಾಗಿದ್ದರೂ, ಇಂದು ಭಾರತದ ಅಸಂಖ್ಯಾತ ಜನರು ಶೋಷಣೆ, ದಬ್ಬಾಳಿಕೆ, ಹಿಂಸೆ ಮತ್ತು ಅಸಮಾನತೆಗಳಿಗೆ ತುತ್ತಾಗುತ್ತಿರಲಿಲ್ಲ. ಸ್ವಾತಂತ್ಯ ಪಡೆದ ದಿನದಿಂದ ಇಂದಿನವರೆಗೂ ಜನರಿಂದಲೇ ಚುನಾಯಿತರಾಗಿ, ಶಾಸನಗಳನ್ನು ರೂಪಿಸುತ್ತಾ ತಮ್ಮ ಆಳ್ವಿಕೆಯನ್ನು ನಡೆಸುತ್ತಿರುವ ಸರಕಾರಗಳು ಮಾನವ ಹಕ್ಕುಗಳನ್ನು ಮೊದಲ ಆದ್ಯತೆಯಾಗಿ ಪರಿಗಣಿಸಿದ್ದಲ್ಲಿ ಇದು ಸಾಧ್ಯವಾಗಬಹುದಿತ್ತೇನೋ?
ಆದರೆ ವರ್ತಮಾನದ ಸಂದರ್ಭದಲ್ಲಿ ನೆಲದ ವಾಸ್ತವಗಳನ್ನು ಸೂಕ್ಷ್ಮವಾಗಿ ಗಮನಿಸಿದಾಗ ಡಿಜಿಟಲ್ ಯುಗದ ಆಳ್ವಿಕೆಯಲ್ಲೂ ಸಹ ಭಾರತೀಯ ಸಮಾಜದಲ್ಲಿ ಶೋಷಣೆಯ ಕೇಂದ್ರಗಳು, ಶೋಷಣೆಯ ಪೋಷಕ ಕೇಂದ್ರಗಳು, ಅಸಮಾನತೆಯನ್ನು ಸೃಷ್ಟಿಸುವ ಸಾಂಸ್ಥಿಕ-ಸಾಂಘಿಕ ಭೂಮಿಕೆಗಳು, ಜನರನ್ನು ಅಸಹಾಯಕತೆಗೆ ದೂಡುವ ಊಳಿಗಮಾನ್ಯ ಸಮಾಜಗಳು ಹಾಗೂ ದುರ್ಬಲ ವರ್ಗಗಳನ್ನು ನಿರಂತರವಾಗಿ ಶೋಷಿಸುತ್ತಲೇ ಇರುವ ಮೇಲ್ವರ್ಗ, ಮೇಲ್ಜಾತಿ ಮತ್ತು ಮೇಲ್ಪದರದ (Elite) ಸಮಾಜಗಳು ಜೀವಂತಿಕೆಯಿಂದ, ಕ್ರಿಯಾಶೀಲವಾಗಿದ್ದು, ಚಲನಶೀಲವೂ ಆಗಿದೆ. ಈ ವಿಶಾಲ ದೃಷ್ಟಿಯಿಂದ ನೋಡಿದಾಗ, 78 ವರ್ಷಗಳ ಸ್ವತಂತ್ರ ಆಳ್ವಿಕೆಯಲ್ಲಿ ಭಾರತೀಯ ಸಮಾಜ ‘ಮಾನವ ಹಕ್ಕು’ ಎಂಬ ಉದಾತ್ತ ಮಾನವೀಯ ಕಲ್ಪನೆಯನ್ನು ರೂಢಿಸಿಕೊಂಡೇ ಇಲ್ಲ ಎನ್ನುವುದು ಸ್ಫಟಿಕ ಸ್ಪಷ್ಟವಾಗಿ ಕಾಣುತ್ತದೆ.
ವಿಶ್ವಸಂಸ್ಥೆ ರೂಪಿಸಿರುವ ಮತ್ತು ಭಾರತ ಸರಕಾರ ಅಧಿಕೃತವಾಗಿ ಸ್ವೀಕರಿಸುವ ನಿಯಮಗಳ ಹೊರತಾಗಿಯೂ ಡಿಜಿಟಲ್ ಭಾರತದಲ್ಲಿ ಪ್ರಾಥಮಿಕ ಶಿಕ್ಷಣ, ಪ್ರಾಥಮಿಕ ಆರೋಗ್ಯ, ಶುದ್ಧ ಕುಡಿಯುವ ನೀರು, ಯೋಗ್ಯ ವಸತಿ, ಆರೋಗ್ಯಕರ ಪರಿಸರ ಮತ್ತು ಘನತೆಯ ಬದುಕು ಎಲ್ಲವೂ ಸಹ ಬಹುಜನರಿಗೆ ಮರೀಚಿಕೆಯಾಗಿಯೇ ಉಳಿದಿವೆ. ನವ ಉದಾರವಾದ ಮತ್ತು ಮಾರುಕಟ್ಟೆ ಆರ್ಥಿಕತೆ ನಿಸರ್ಗ ಸಂಪತ್ತನ್ನು ಕಾರ್ಪೊರೇಟ್ ಔದ್ಯಮಿಕ ಜಗತ್ತಿಗೆ ಹಂತಹಂತವಾಗಿ ಪರಭಾರೆ ಮಾಡುತ್ತಿರುವುದು ಒಂದು ಮಗ್ಗುಲಾದರೆ, ಮತ್ತೊಂದು ಮಗ್ಗುಲಲ್ಲಿ ದೇಶದ ಸಮಗ್ರ ಸಂಪತ್ತನ್ನು ಉತ್ಪಾದಿಸುವ ಮತ್ತು ಸಂರಕ್ಷಿಸುವ ತಳಮಟ್ಟದ ಸಮಾಜದ ದುಡಿಯುವ ಜನರು ತಮ್ಮ ಘನತೆಯ ಬದುಕನ್ನು ರೂಪಿಸಿಕೊಳ್ಳುವುದಕ್ಕೂ ಬಂಡವಾಳಶಾಹಿ ಮಾರುಕಟ್ಟೆಯನ್ನು ಅವಲಂಬಿಸುವ ದುಸ್ಥಿತಿಯನ್ನು ಎದುರಿಸುತ್ತಿದ್ದಾರೆ.
ಮರುನಿರ್ವಚನೆಯ ಹಾದಿಯ ಕಡೆಗೆ
ಈ ವಾತಾವರಣದಲ್ಲಿ ‘ಮಾನವ ಹಕ್ಕುಗಳ’ ಕಲ್ಪನೆಯನ್ನು ಮರುನಿರ್ವಚಿಸುವುದು ವರ್ತಮಾನದ ಆದ್ಯತೆಯಾಗಬೇಕಿದೆ. ನವ ಉದಾರವಾದ ಸೃಷ್ಟಿಸುತ್ತಿರುವ ಅನಿಶ್ಚಿತತೆ ಮತ್ತು ಅಭದ್ರತೆ ದುಡಿಯುವ ವರ್ಗಗಳ ಬದುಕಿನ ಸವಾಲುಗಳಾಗಿವೆ. ಈ ವ್ಯವಸ್ಥೆಯನ್ನು ಬಲವಾಗಿ ಪ್ರತಿಪಾದಿಸಿ, ಸಂರಕ್ಷಿಸುವ ಅರೆ ಊಳಿಗಮಾನ್ಯ ಸಮಾಜಗಳು ಪ್ರಜಾಪ್ರಭುತ್ವೀಯ ಭಾರತದಲ್ಲೂ ಸಕ್ರಿಯವಾಗಿದ್ದು, ಕುಗ್ರಾಮದಿಂದ ಮೆಟ್ರೊಪಾಲಿಟನ್‌ನಗರಗಳವರೆಗೂ ತಮ್ಮ ಬಾಹುಗಳನ್ನು ಚಾಚಿವೆ. ಶೋಷಣೆ ಮತ್ತು ಅಸಮಾನತೆಯ ಆಕರಗಳಾದ ಈ ಎರಡೂ ವಿದ್ಯಮಾನಗಳೇ ನವ ಭಾರತದ ಮಹಿಳಾ ಸಂಕುಲವನ್ನು ನಿರಂತರ ಅತ್ಯಾಚಾರ, ದೌರ್ಜನ್ಯ ಮತ್ತು ಕಿರುಕುಳಗಳಿಗೆ ಅಡಿಪಾಯವಾಗಿರುವುದನ್ನು ಗಮನಿಸಬೇಕಿದೆ.
ಹಾಗೆಯೇ ಜಾತಿ ಶ್ರೇಣಿಯಲ್ಲಿ ಅತ್ಯಂತ ಕೆಳಸ್ತರದಲ್ಲಿರುವ ಅಸ್ಪಶ್ಯ ಸಮುದಾಯಗಳು ಹಾಗೂ ಆಧುನಿಕ ಪರಿಭಾಷೆಯ ನಾಗರಿಕ ಜಗತ್ತಿನಿಂದ ಹೊರಗುಳಿದಿರುವ ಬುಡಕಟ್ಟು ಸಮಾಜಗಳು ಸಾಮಾಜಿಕ-ಆರ್ಥಿಕ ಶೋಷಣೆ ಮತ್ತು ಸಾಂಸ್ಕೃತಿಕ ತಾರತಮ್ಯಗಳಿಗೆ ಒಳಗಾಗುತ್ತಿವೆ. ಈ ಸಮಾಜಗಳಿಗೆ ರಕ್ಷಣೆ ನೀಡುವ ಸಾಂವಿಧಾನಿಕ ಶಾಸನಗಳು ಹಾಗೂ ನಿಯಮಗಳು ಗ್ರಾಂಥಿಕವಾಗಿ ಸುಭದ್ರವಾಗಿದ್ದರೂ, ನೆಲ ಮಟ್ಟದಲ್ಲಿ ವಾಸ್ತವ ಬದುಕನ್ನು ಗಮನಿಸಿದಾಗ, ಈ ನಿಯಮಗಳು ನಾಗರಿಕ ಹಕ್ಕುಗಳ ಚೌಕಟ್ಟುಗಳನ್ನು ದಾಟಿ ನೋಡುವುದೇ ಇಲ್ಲ ಎನ್ನುವುದು ಸ್ಪಷ್ಟವಾಗುತ್ತದೆ. ಹಾಗೆ ನೋಡುವುದೇ ಆದಲ್ಲಿ, ಮಹಿಳೆಯರು, ಆದಿವಾಸಿಗಳು, ಬುಡಕಟ್ಟು ಸಮಾಜಗಳು ಹಾಗೂ ಅಸ್ಪೃಶ್ಯ ಸಮುದಾಯಗಳು ಇಂದು ತಮ್ಮ ‘ಘನತೆಯ ಬದುಕು’ ರೂಪಿಸಿಕೊಳ್ಳಲು ಹೋರಾಡುವ ಅವಶ್ಯಕತೆ ಇರುತ್ತಿರಲಿಲ್ಲ.
ಸಮಾಜಶಾಸ್ತ್ರೀಯ ನೆಲೆಯಲ್ಲಿ ಯೋಚಿಸಿದಾಗ, ಮಾನವ ಜೀವಿ ಅಥವಾ ಇತರ ಯಾವುದೇ ಚರಾಚರಗಳಿಗೆ ಘನತೆಯ ಬದುಕು ಎನ್ನುವುದು ವಿಶಾಲ ಹಂದರದಲ್ಲಿ ವ್ಯಾಖ್ಯಾನಿಸಬೇಕಾದ ವಿದ್ಯಮಾನವಾಗುತ್ತದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಸಾಂವಿಧಾನಿಕವಾಗಿ ಖಾತರಿಪಡಿಸುವ ಅನ್ನ, ಬಟ್ಟೆ ಮತ್ತು ವಸತಿಯ ಸೌಲಭ್ಯಗಳನ್ನೂ ದಾಟಿ, ಮನುಷ್ಯ ಜೀವಿಯು ಘನತೆಯ ಬದುಕು ಸಾಗಿಸುವ ಕನಸು ಕಾಣುವುದು ಸ್ವಾಭಾವಿಕ. ಈ ಘನತೆಯ ಬದುಕು ಎನ್ನುವ ಕಲ್ಪನೆಯನ್ನು ಬಿಡಿಸಿ ನೋಡಿದಾಗ ಅಲ್ಲಿ ನಮಗೆ ಸಾಮಾಜಿಕ-ಆರ್ಥಿಕ ಸಮಾನತೆಯನ್ನೂ ಮೀರಿದ ಆದರ್ಶಗಳು ಕಾಣುತ್ತವೆ. ಉದಾಹರಣೆಗೆ ಮಹಿಳಾ ಸಂಕುಲ ಎದುರಿಸುತ್ತಿರುವ ಸಂಕಟಗಳನ್ನು ಗಮನಿಸಬಹುದು. ಇಂದು ಭಾರತೀಯ ಮಹಿಳೆ ಸಾಂಪ್ರದಾಯಿಕವಾಗಿ ವೈಭವೀಕರಿಸಲಾಗುವ ದೈವೀಕ ರೂಪ, ಕೌಟುಂಬಿಕ ಗೌರವ, ಆಧ್ಯಾತ್ಮಿಕ ಉನ್ನತಿ ಮತ್ತು ಧಾರ್ಮಿಕ ಪಾವಿತ್ರ್ಯತೆಯನ್ನೂ ದಾಟಿ, ತನ್ನ ವೈಯಕ್ತಿಕ ಘನತೆಗಾಗಿ ಹೋರಾಡುವ ಸನ್ನಿವೇಶ ಸೃಷ್ಟಿಯಾಗಿದೆ. ಅಸ್ಪಶ್ಯ ಸಮಾಜವನ್ನೂ ಇದೇ ಚೌಕಟ್ಟಿನಲ್ಲಿ ಒಳಗೊಳ್ಳಬಹುದು.
ಆಚರಣೆಯ ಚೌಕಟ್ಟುಗಳನ್ನು ದಾಟಿ..
ಮಾನವ ಹಕ್ಕುಗಳ ದಿನವನ್ನು ಆಚರಿಸುವ ಹೊತ್ತಿನಲ್ಲಿ, ಅವಕಾಶವಂಚಿತ-ಅಲಕ್ಷಿತ ಸಮಾಜಗಳ ಕಡೆಗೆ, ಪಿತೃಪ್ರಧಾನತೆಯ ದಬ್ಬಾಳಿಕೆಗೆ ಒಳಗಾಗಿರುವ ಮಹಿಳಾ ಸಂಕುಲದ ಕಡೆಗೆ, ನವ ಉದಾರವಾದಿ ಮಾರುಕಟ್ಟೆ ಆರ್ಥಿಕತೆಯ ಪ್ರಹಾರಕ್ಕೆ ಸಿಲುಕಿ ತಮ್ಮ ಮೂಲ ನೆಲೆಯನ್ನೇ ಕಳೆದುಕೊಂಡು ಪರಕೀಯರಾಗುತ್ತಿರುವ ಬುಡಕಟ್ಟು ಸಮುದಾಯಗಳ ಕಡೆಗೆ ಗಮನ ಹರಿಸುವುದು ನಮ್ಮ ಆದ್ಯತೆಯಾಗಬೇಕಿದೆ. ಈ ಸಮಾಜಗಳಲ್ಲಿ ನಡೆಯುತ್ತಿರುವ ಹೋರಾಟಗಳು ಸವಲತ್ತುಗಳು, ಸೌಲಭ್ಯಗಳಿಗಾಗಿ ಮಾತ್ರ ಅಲ್ಲ ಘನತೆಯ ಬದುಕಿಗಾಗಿ. ಈ ಘನತೆಯೇ ಸ್ವಾಭಿಮಾನದ ಅಡಿಪಾಯ, ಜನಸಾಮಾನ್ಯರ ಸ್ವಾಭಿಮಾನಿ ಬದುಕೇ ಪ್ರಜಾಪ್ರಭುತ್ವದ ಅಂತಃಸತ್ವ.
ಭಾರತದ ರಾಜಕಾರಣ, ಸಾಂಸ್ಕೃತಿಕ ಜಗತ್ತು, ಶೈಕ್ಷಣಿಕ-ಅಕಾಡಮಿಕ್ ವಲಯ, ಸಾಹಿತ್ಯ ಲೋಕ ಹಾಗೂ ನಾಗರಿಕ ಪ್ರಪಂಚ ಈ ದೃಷ್ಟಿಯಿಂದ ಭವಿಷ್ಯದತ್ತ ನೋಡಬೇಕಿದೆ. ಮಾನವ ಹಕ್ಕುಗಳ ದಿನವನ್ನು ‘ಆಚರಿಸುವ’ ಹಂತವನ್ನು ನಾವಿನ್ನೂ ತಲುಪಿಲ್ಲ ಎಂಬ ಆತ್ಮವಿಮರ್ಶೆ ಅತ್ಯವಶ್ಯವಾಗಿದೆ. 2047ರಲ್ಲಿ ನವ ಭಾರತ ‘ವಿಕಸಿತ’ ಆಗುವುದಕ್ಕೆ ಮುನ್ನ ಈ ಉದಾತ್ತ ಗುರಿಯನ್ನು ತಲುಪಲು ಸಾಧ್ಯವೇ ಎಂಬ ಪ್ರಶ್ನೆ ನಮ್ಮ ನಡುವೆ ಚರ್ಚೆಗೊಳಗಾಗಬೇಕಿದೆ.