ಮೈಸೂರು : ಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕ, ಸಂಗೀತ ತಜ್ಞ ಹಾಗೂ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿ ಪುರಸ್ಕೃತ ಪಂಡಿತ್ ಇಂದೂಧರ್ ನಿರೋಡಿ ಮುಂಬೈನಲ್ಲಿ ನಿಧನರಾಗಿದ್ದಾರೆ.

ಮೈಸೂರಿನ ಸರಸ್ವತಿಪುರಂ ನಿವಾಸಿಯಾಗಿದ್ದ ಪಂಡಿತ್ ಇಂದೂಧರ್ ನಿರೋಡಿ, ಆಗ್ರಾ ಘರಾಣೆಯ ಹಿರಿಯ ಹಾಗೂ ಪ್ರಖ್ಯಾತ ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತ ಗಾಯಕರಾಗಿ ಗುರುತಿಸಿಕೊಂಡಿದ್ದರು. ತಮ್ಮ ವಿಶಿಷ್ಟ ಗಾಯನ ಶೈಲಿ, ಸಂಗೀತ ಜ್ಞಾನ ಹಾಗೂ ದೀರ್ಘಕಾಲದ ಕಲಾಸೇವೆಯ ಮೂಲಕ ಸಂಗೀತ ಕ್ಷೇತ್ರದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ್ದರು.

ಹಿಂದೂಸ್ತಾನಿ ಶಾಸ್ತ್ರೀಯ ಸಂಗೀತದ ಪರಂಪರೆಯನ್ನು ಮುಂದುವರಿಸುವಲ್ಲಿ ಮಹತ್ವದ ಕೊಡುಗೆ ನೀಡಿದ್ದ ಅವರು, ಸಂಗೀತ ಕ್ಷೇತ್ರದಲ್ಲಿನ ಅಪಾರ ಸೇವೆಗಾಗಿ ಕೇಂದ್ರ ಸಂಗೀತ ನಾಟಕ ಅಕಾಡಮಿ ಪ್ರಶಸ್ತಿಗೆ ಭಾಜನರಾಗಿದ್ದರು.

ಮೈಸೂರಿನೊಂದಿಗೆ ವಿಶೇಷ ನಂಟು ಹೊಂದಿದ್ದ ಇಂದೂಧರ್ ನಿರೋಡಿ ಅವರ ನಿಧನದಿಂದ ಸಂಗೀತ ಲೋಕಕ್ಕೆ, ವಿಶೇಷವಾಗಿ ಮೈಸೂರಿನ ಕಲಾ ಮತ್ತು ಸಂಗೀತ ಕ್ಷೇತ್ರಕ್ಕೆ ತುಂಬಲಾರದ ನಷ್ಟ. ಅವರ ಅಗಲಿಕೆಗೆ ಸಂಗೀತಾಸಕ್ತರು ಹಾಗೂ ಕಲಾವಿದರು ಸಂತಾಪ ವ್ಯಕ್ತಪಡಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor