Mysuru | ಪ್ರತಾಪ್ ಸಿಂಹರನ್ನು ಬಂಧಿಸಿ, ಪ್ರಕರಣಗಳನ್ನು ಸಿಐಡಿಗೆ ವಹಿಸಿ: ದಲಿತ ಮುಖಂಡರ ಒತ್ತಾಯ
ಮೈಸೂರು : ನೀಲಿ ಶಾಲು, ದಸಂಸದ ಬಗ್ಗೆ ಅವಹೇಳನಕಾರಿಯಾಗಿ ಮಾತನಾಡಿರುವ ಮಾಜಿ ಸಂಸದ ಪ್ರತಾಪ್ ಸಿಂಹನಿಗೆ ನೀಲಿ ಶಾಲಿನ ಮಹತ್ವ ತಿಳಿಸಬೇಕು. ಆತನನ್ನು ಕೂಡಲೇ ಬಂಧಿಸಬೇಕು ಮತ್ತು ಆತನ ಮೇಲಿರುವ ಎಲ್ಲ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು ಎಂದು ದಲಿತ ಮುಖಂಡರು ಒತ್ತಾಯ ಮಾಡಿದ್ದಾರೆ.
ನಗರದ ಜಲದರ್ಶಿನಿ ಅತಿಥಿಗೃಹದಲ್ಲಿ ಸೋಮವಾರ ಗಾಂಧಿನಗರದ ಉರಿಲಿಂಗಿಪೆದ್ದಿಮಠದ ಜ್ಞಾನಪ್ರಕಾಶ್ ಸ್ವಾಮೀಜಿ ನೇತೃತ್ವದಲ್ಲಿ ದಲಿತ ಪ್ರಗತಿಪರ ಸಂಘಟನೆಗಳ ಒಕ್ಕೂಟದ ವತಿಯಿಂದ ಸಭೆ ನಡೆಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಜ್ಞಾನಪ್ರಕಾಶ್ ಸ್ವಾಮೀಜಿ, ಪ್ರತಾಪ ಸಿಂಹ ದಲಿತರ ವಿರುದ್ಧ ಅವಹೇಳನಕಾರಿಯಾಗಿ ಮಾತನಾಡಿದ್ದಾನೆ. ಟಿ.ನರಸೀಪುರದಲ್ಲಿ ಗಣೇಶ ವಿಸರ್ಜನೆ ವೇಳೆ ಮಸೀದಿ ಎದುರು ನಿಂತುಕೊಂಡು ಇನ್‌ಸ್ಪೆಕ್ಟರ್ ವಿರುದ್ಧ ತೊಡೆತಟ್ಟಿದ್ದಾನೆ. ‘ದಸಂಸದವರು ಅಂಬೇಡ್ಕರ್ ಬಗ್ಗೆ ಐದು ಪೈಸೆ ಓದಿಕೊಂಡಿಲ್ಲ’ ಎಂದು ಹೇಳಿದ್ದಾನೆ. ನೀಲಿ ಶಾಲಿನ ಮಹತ್ವದ ಬಗ್ಗೆ ಆತನಿಗೆ ತಿಳಿಸಬೇಕು, ಅಂಬೇಡ್ಕರ್ ಬಗ್ಗೆ ಆತ ಏನು ಓದಿಕೊಂಡಿದ್ದಾನೆ ಎಂಬುದನ್ನು ಕೇಳಬೇಕು. ಹಾಗಾಗಿ ರಾಜ್ಯಾದ್ಯಂತ ಚರ್ಚೆ ಮಾಡಿ ಶೀಘ್ರದಲ್ಲೇ ಒಂದು ತೀರ್ಮಾನ ಕೈಗೊಳ್ಳೋಣ ಎಂದು ಹೇಳಿದರು.
ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್ ಮಾತನಾಡಿ, ಮೊದಲು ಪ್ರತಾಪಸಿಂಹ ವಿರುದ್ಧ ರೌಡಿಶೀಟ್ ತೆರೆಯಬೇಕು ಎಂದು ಒತ್ತಾಯಿಸಿದರು.
ಸಭೆಯಲ್ಲಿ ವಕೀಲ ಪುಟ್ಟಸಿದ್ದೇಗೌಡ, ದಸಂಸ ಮುಖಂಡರಾದ ಬುಗತಗಳ್ಳಿ ಮಣಿಯಯ್ಯ, ದೇವಗಳ್ಳಿ ಸೋಮಶೇಖರ್, ಭರತ್ ರಾಮಸ್ವಾಮಿ, ಧನಂಜಯ ಎಲಿಯೂರು,ವಕೀಲರಾದ ಪುಟ್ಟಸಿದ್ದೇಗೌಡ, ಕಾಂತರಾಜು, ಪ್ರೇಮ್, ಮಂಜುನಾಥ್, ಅಶೋಕಪುರಂ ಮಹೇಶ್, ಕಲ್ಲಹಳ್ಳಿ ಕುಮಾರ್, ಲೇಖಕ ಸಿದ್ದಸ್ವಾಮಿ, ಎಸ್‌ಡಿಪಿಐ ಮುಖಂಡ ರಫತ್ ಖಾನ್, ಜವಾದ್ ಮುಹಮ್ಮದ್, ಕೇಬಲ್ ಅಮ್ಜದ್, ದಿಲೀಪ್ ಜಿ.ನರಸಯ್ಯ, ಅಶೋಕಪುರಂ ಪುಟ್ಟರಾಜು, ಡಾ.ಬಿ.ಕೆ.ಜ್ಞಾನಪ್ರಕಾಶ್, ಆರ್.ರಾಜು, ನೀಲಪ್ಪ, ವಿಜಯಶಂಕರ, ಚಿಕ್ಕಕಾನ್ಯ ಕೃಷ್ಣಮೂರ್ತಿ, ಮಂಜು ಮುರಡಗಳ್ಳಿ, ಹಾರೋಹಳ್ಳಿ ನಟರಾಜ್, ಸೋಮಯ್ಯ, ಸುರೇಶ್, ಎಸ್.ಡಿ.ಸಣ್ಣಸ್ವಾಮಿ, ವೈ.ಟಿ.ಶಿವಕುಮಾರ್, ರಾಹುಲ್, ಅಶೋಕ್ ಬುದ್ಧ, ನಾರಾಯಣಸ್ವಾಮಿ, ಬದನವಾಳು ಬಸವಣ್ಣ, ಕುಮಾರ್ ಮದ್ದೂರು ಮತ್ತಿತರರು ಉಪಸ್ಥಿತರಿದ್ದರು.
ಪ್ರತಾಪ್ ಸಿಂಹನನ್ನು ಕೂಡಲೇ ಬಂಧಿಸಬೇಕು, ಆತನ ಎಲ್ಲ ಪ್ರಕರಣಗಳನ್ನು ಸಿಐಡಿ ತನಿಖೆಗೆ ವಹಿಸಬೇಕು. ಈ ಎಲ್ಲ ಘಟನೆಗೆ ಕಾರಣರಾಗಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿಯನ್ನು ವರ್ಗಾವಣೆ ಮಾಡಬೇಕು.
ಕಲ್ಲಹಳ್ಳಿ ಕುಮಾರ್, ದಸಂಸ ತಾಲೂಕು ಸಂಚಾಲಕ