ಮೈಸೂರು : ನಾಡಹಬ್ಬ ಮೈಸೂರು ದಸರಾ ಮಹೋತ್ಸವ-2026ರ ನಾಡಕುಸ್ತಿ ಪಂದ್ಯಾವಳಿಗೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕುಸ್ತಿಪಟುಗಳಿಗೆ ಭುಜ ತಟ್ಟುವ ಮೂಲಕ ಉದ್ಘಾಟಿಸಿದ್ದಾರೆ.

ನಗರದ ಕರ್ನಾಟಕ ವಸ್ತು ಪ್ರದರ್ಶನದ ಪ್ರಾಧಿಕಾರ ಆವರಣದ ಡಿ.ದೇವರಾಜು ಅರಸು ವಿವಿಧೋದ್ದೇಶ ಕ್ರೀಡಾಂಗಣದಲ್ಲಿ ರವಿವಾರ ಆಯೋಜಿಸಿದ್ದ ದಸರಾ ನಾಡಕುಸ್ತಿ ಪಂದ್ಯಾವಳಿಯಲ್ಲಿ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಮಂಗಳಾರತಿ ನೆರವೇರಿಸಿ, ಮೊದಲ ಮಾರ್ಫಿಟ್ ಕುಸ್ತಿಯನ್ನು ಕೆಲ ಸಮಯ ವೀಕ್ಷಿಸಿ ಕುಸ್ತಿ ಪಟುಗಳಿಗೆ ಪ್ರೋತ್ಸಾಹ ನೀಡಿದರು.

2025ನೇ ದಸರಾ ಕಂಠೀರವ ಪ್ರಶಸ್ತಿ ವಿಜೇತ ಬೆಳಗಾವಿಯ ಪೈಲ್ವಾನ್ ಕಾಮೇಶ್ ಪಾಟೀಲ್ ಹಾಗೂ ಮಹಾರಾಷ್ಟ್ರದ ಪೈಲ್ವಾನ್ ಶ್ರೀಮಂತ್ ಬ್ಹೊಸ್ಲೆ ನಡುವೆ ಮೊದಲ ಮಾರ್ಫಿಟ್ ಕುಸ್ತಿ ರೋಚಕವಾಗಿ ನಡೆಯಿತು. ಇದಕ್ಕ ತೀರ್ಪುಗಾರರಾಗಿ ಪೈ.ಶ್ರೀನಿವಾಸ್ ಹಾಗೂ ಪೈ.ಮಹೇಶ್ ಕಾರ್ಯನಿರ್ವಹಿಸಿದರು.

ಕಾರ್ಯಕ್ರಮದಲ್ಲಿ ನಗರಾಭಿವೃದ್ದಿ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ, ಪಶುಸಂಗೋಪನೆ ಮತ್ತು ರೇಷ್ಮೆ ಸಚಿವ ಸಿ.ಪುಟ್ಟರಂಗಶೆಟ್ಟಿ, ಶಾಸಕರಾದ ಅನಿಲ್ ಚಿಕ್ಕಮಾದು, ಟಿ.ಎಸ್.ಶ್ರೀವತ್ಸ , ಕೆ.ಹರೀಶ್ ಗೌಡ, ಡಿ.ರವಿಶಂಕರ್, ಡಾ.ಬಿ.ಆರ್.ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತ ಅಧ್ಯಕ್ಷ ಸಿ.ನರೇಂದ್ರ, ಕರ್ನಾಟಕ ವಸ್ತು ಪ್ರದರ್ಶನ ಪ್ರಾಧಿಕಾರದ ಅಧ್ಯಕ್ಷ ಅಯೂಬ್ ಖಾನ್, ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ, ದಸರಾ ಕುಸ್ತಿ ಉಪಸಮಿತಿ ಅಧ್ಯಕ್ಷ ಶ್ರೀನಿವಾಸಗೌಡ, ವಿಶೇಷಾಧಿಕಾರಿ ಎಲ್.ನಾಗೇಶ್, ಕಾರ್ಯಾಧ್ಯಕ್ಷ ಎಂ.ಧರ್ಮೇಂದ್ರ, ಕಾರ್ಯದರ್ಶಿ ನರಸಿಂಹ ಮೂರ್ತಿ ಇತರರು ಇದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor