ಮೈಸೂರು ದಸರಾ ಕ್ರೀಡಾಕೂಟ ಸಿಎಂ ಕಪ್–2026ಕ್ಕೆ ಡಿಸಿಎಂ ಜಿ.ಪರಮೇಶ್ವರ್ ಚಾಲನೆ
ಮೈಸೂರು : ʼದಸರಾ ಕ್ರೀಡಾಕೂಟವು ಕೇವಲ ಕ್ರೀಡಾ ಸ್ಪರ್ಧೆಯಲ್ಲ, ಕ್ರೀಡಾಪಟುಗಳ ಪ್ರತಿಭೆ ಮತ್ತು ಸಾಧನೆಗೆ ವೇದಿಕೆಯಾಗಿದೆ. ಕ್ರೀಡಾಪಟುಗಳಿಗೆ ಹೆಚ್ಚಿನ ಪ್ರೋತ್ಸಾಹ ನೀಡುವ ಉದ್ದೇಶದಿಂದ ಉದ್ಯೋಗ ಮೀಸಲಾತಿ, ಬಹುಮಾನ ಮೊತ್ತ ಹೆಚ್ಚಳ ಹಾಗೂ ಕ್ರೀಡಾ ಮೂಲಸೌಕರ್ಯ ಅಭಿವೃದ್ಧಿಗೆ ನಮ್ಮ ಸರಕಾರ ವಿಶೇಷ ಆದ್ಯತೆ ನೀಡುತ್ತಿದೆ ಎಂದು ಉಪಮುಖ್ಯಮಂತ್ರಿ ಹಾಗೂ ಕ್ರೀಡಾ ಸಚಿವ ಡಾ.ಜಿ.ಪರಮೇಶ್ವರ್ ಹೇಳಿದರು.
ಮೈಸೂರಿನ ಚಾಮುಂಡಿ ವಿಹಾರ ಒಳಾಂಗಣ ಕ್ರೀಡಾಂಗಣದಲ್ಲಿ ರವಿವಾರ ನಾಡಹಬ್ಬ ದಸರಾ ಪ್ರಯುಕ್ತ ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ ಹಾಗೂ ಕರ್ನಾಟಕ ಕ್ರೀಡಾ ಪ್ರಾಧಿಕಾರದ ವತಿಯಿಂದ ಆಯೋಜಿಸಿದ್ದ ರಾಜ್ಯಮಟ್ಟದ ದಸರಾ ಕ್ರೀಡಾಕೂಟ ಸಿಎಂ ಕಪ್–2026ಕ್ಕೆ ಚಾಲನೆ ನೀಡಿ ಬಳಿಕ ಅವರು ಮಾತನಾಡಿ, ದಸರಾ ಕ್ರೀಡಾಕೂಟವನ್ನು ಅತ್ಯಂತ ವಿಜೃಂಭಣೆಯಿಂದ ಆಯೋಜಿಸಿರುವ ಎಲ್ಲಾ ಸಂಘಟಕರು ಹಾಗೂ ಅಧಿಕಾರಿಗಳಿಗೆ ಅಭಿನಂದನೆ ಸಲ್ಲಿಸಿದರು.
ನೂರಾರು ವರ್ಷಗಳ ಇತಿಹಾಸ ಹೊಂದಿರುವ ಮೈಸೂರು ದಸರಾ ವಿಶ್ವಪ್ರಸಿದ್ಧವಾಗಿದ್ದು, ಅದರ ಪರಂಪರೆಯ ಭಾಗವಾಗಿ ನಡೆಯುತ್ತಿರುವ ಕ್ರೀಡಾಕೂಟ ರಾಜ್ಯದ ಕ್ರೀಡಾ ಕ್ಷೇತ್ರಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಹೇಳಿದರು.
ಮೈಸೂರು ದಸರಾ ಕ್ರೀಡಾಕೂಟಕ್ಕೆ ಐತಿಹಾಸಿಕ ಹಿನ್ನೆಲೆಯಿದ್ದು, ವಿಜಯನಗರ ಸಾಮ್ರಾಜ್ಯದ ಅರಸರು ಆರಂಭಿಸಿದ ನವರಾತ್ರಿ ಉತ್ಸವದ ಸಂದರ್ಭದಲ್ಲಿ ಕ್ರೀಡೆಗಳಿಗೂ ಪ್ರೋತ್ಸಾಹ ನೀಡಲಾಗುತ್ತಿತ್ತು. ಕುಸ್ತಿ, ಕತ್ತಿವರಸೆ ಸೇರಿದಂತೆ ವಿವಿಧ ಕ್ರೀಡೆಗಳನ್ನು ಆಯೋಜಿಸುವ ಮೂಲಕ ಕ್ರೀಡಾ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಲಾಗುತ್ತಿತ್ತು. ಇದೇ ಪರಂಪರೆಯನ್ನು ಮೈಸೂರು ಅರಸರು ಮುಂದುವರಿಸಿಕೊಂಡು ಬಂದರು. ಕಾಲ ಬದಲಾದಂತೆ ದಸರಾ ಕ್ರೀಡಾಕೂಟವೂ ಆಧುನಿಕ ಸ್ವರೂಪ ಪಡೆದುಕೊಂಡಿದೆ ಎಂದು ತಿಳಿಸಿದರು.
ಈ ಬಾರಿಯ ದಸರಾ ಕ್ರೀಡಾಕೂಟದಲ್ಲಿ 26 ಕ್ರೀಡಾ ವಿಭಾಗಗಳನ್ನು ಆಯೋಜಿಸಿರುವುದು ಸಂತಸದ ಸಂಗತಿ. ರಾಜ್ಯದ ವಿವಿಧ ಜಿಲ್ಲೆಗಳಿಂದ ಕ್ರೀಡಾಪಟುಗಳು ಭಾಗವಹಿಸಿದ್ದು, ಮೈಸೂರು ದಸರಾ ಇತಿಹಾಸದಲ್ಲಿ 2026ರ ಕ್ರೀಡಾಕೂಟವೂ ಸ್ಮರಣೀಯವಾಗಿ ಉಳಿಯಲಿದೆ ಎಂದರು.
ಕ್ರೀಡಾಪಟುಗಳಿಗೆ ಶೇ. 2ರಷ್ಟು ಉದ್ಯೋಗ ಮೀಸಲಾತಿ
ರಾಜ್ಯ ಸರ್ಕಾರ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಮೂಲಕ ಕ್ರೀಡಾ ಕ್ಷೇತ್ರಕ್ಕೆ ಉತ್ತೇಜನ ನೀಡುತ್ತಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ನೇತೃತ್ವದ ಸರ್ಕಾರದ ಅವಧಿಯಲ್ಲಿ ಕರ್ನಾಟಕ ಒಲಿಂಪಿಕ್ಸ್ ಸಂಸ್ಥೆಯ ಅಧ್ಯಕ್ಷರಾದ ವಿಧಾನ ಪರಿಷತ್ ಸದಸ್ಯ ಗೋವಿಂದರಾಜ್ ಅವರ ಸಲಹೆ ಹಾಗೂ ಪ್ರಯತ್ನಗಳು ಕ್ರೀಡಾಪಟುಗಳಿಗೆ ಉದ್ಯೋಗ ಮೀಸಲಾತಿ ಕಲ್ಪಿಸುವಲ್ಲಿ ಮಹತ್ವದ ಪಾತ್ರ ವಹಿಸಿವೆ ಎಂದು ತಿಳಿಸಿದರು.
ಆರಂಭದಲ್ಲಿ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳಲ್ಲಿ ಕ್ರೀಡಾಪಟುಗಳಿಗೆ ಉದ್ಯೋಗಾವಕಾಶ ಕಲ್ಪಿಸುವ ಪ್ರಯತ್ನಗಳನ್ನು ಕೈಗೊಳ್ಳಲಾಯಿತು. ನಾನು ಗೃಹ ಸಚಿವನಾಗಿದ್ದ ಸಂದರ್ಭದಲ್ಲಿ ಪೊಲೀಸ್ ಇಲಾಖೆಯ ನೇಮಕಾತಿಯಲ್ಲಿ ಉತ್ತಮ ಸಾಧನೆ ಮಾಡಿದ ಕ್ರೀಡಾಪಟುಗಳಿಗೆ ಶೇ. 3ರಷ್ಟು ಮೀಸಲಾತಿ ನೀಡಲಾಗಿತ್ತು ಎಂದು ಸ್ಮರಿಸಿದರು.
ಇದೀಗ ರಾಜ್ಯ ಸರ್ಕಾರವು ಎಲ್ಲಾ ಇಲಾಖೆಗಳ ನೇಮಕಾತಿಗಳಲ್ಲಿಯೂ ಕ್ರೀಡಾಪಟುಗಳಿಗೆ ಶೇ. 2ರಷ್ಟು ಉದ್ಯೋಗ ಮೀಸಲಾತಿ ಕಲ್ಪಿಸುವ ಕುರಿತು ಇತ್ತೀಚೆಗೆ ಆದೇಶ ಹೊರಡಿಸಿದ್ದೇವೆ. ಈ ಕ್ರಮವು ಕ್ರೀಡಾಪಟುಗಳಿಗೆ ಭದ್ರವಾದ ಭವಿಷ್ಯ ರೂಪಿಸಿಕೊಳ್ಳಲು ನೆರವಾಗಲಿದೆ. ಕ್ರೀಡೆಯಲ್ಲಿ ಸಾಧನೆ ಮಾಡಿದವರು ಉದ್ಯೋಗಕ್ಕಾಗಿ ಪರದಾಡುವ ಪರಿಸ್ಥಿತಿ ತಪ್ಪಿಸಿ, ಕ್ರೀಡೆಯನ್ನೇ ವೃತ್ತಿಜೀವನದ ಭಾಗವಾಗಿಸಿಕೊಳ್ಳಲು ಸರ್ಕಾರ ಬದ್ಧವಾಗಿದೆ ಎಂದು ಹೇಳಿದರು.
ಈ ವೇಳೆ, ಏಷ್ಯಾನ್ ಗೇಮ್ಸ್‌ನಲ್ಲಿ ಪದಕ ವಿಜೇತರಾದ ಗಾಲ್ಫ್ ಕ್ರೀಡಾಪಟು ಪ್ರಣವಿ ಅರಸ್, ಕಾಮನ್‌ವೆಲ್ತ್ ಗೇಮ್ಸ್ ಪದಕ ವಿಜೇತರಾದ ಶಿಲ್ಪಾ ಕೆ.ಎಸ್ ಅವರನ್ನು ಅಭಿನಂದಿಸಿ, ಗೌರವಿಸಲಾಯಿತು.
ಕಾರ್ಯಕ್ರಮದಲ್ಲಿ ಸಚಿವರಾದ ಸಿ. ಪುಟ್ಟರಂಗ ಶೆಟ್ಟಿ, ಅರಣ್ಯ ವಸತಿ ಮತ್ತು ವಿಹಾರ ಧಾಮಗಳ ಅಧ್ಯಕ್ಷರಾದ ಅನಿಲ್ ಕುಮಾರ್ ಸಿ, ಶಾಸಕರಾದ ತನ್ವೀರ್ ಸೇಠ್, ಡಿ.ರವಿಶಂಕರ್, ಕರ್ನಾಟಕ ಒಲಂಪಿಕ್ ಸಂಸ್ಥೆಯ ಅಧ್ಯಕ್ಷರು ಹಾಗೂ ವಿಧಾನ ಪರಿಷತ್ ಸದಸ್ಯರಾದ ಡಾ. ಕೆ.ಗೋವಿಂದರಾಜು, ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆಯ ಪ್ರಧಾನ ಕಾರ್ಯದರ್ಶಿ ನವೀನ್ ರಾಜ್ ಸಿಂಗ್, ಯುವ ಸಬಲೀಕರಣ ಮತ್ತು ಕ್ರೀಡಾ ಆಯುಕ್ತರಾದ ಎಂ.ಎನ್.ಅನುಚೇತ್ ಅವರು ಉಪಸ್ಥಿತರಿದ್ದರು.