Mysuru | ಸಿಜೆಪಿ ಹೋರಾಟ ಹತ್ತಿಕ್ಕಲು ಯತ್ನಿಸಿದ ಕೇಂದ್ರ ಸರಕಾರ ವಿರುದ್ಧ ಧರಣಿ
ಮೈಸೂರು : ಕೇಂದ್ರ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ರಾಜೀನಾಮೆಗೆ ಒತ್ತಾಯಿಸಿ ಹಾಗೂ ಎಸ್‌ಐಆರ್ ರದ್ದುಪಡಿಸುವಂತೆ ಒತ್ತಾಯಿಸಿ ದಿಲ್ಲಿಯ ಜಂತರ್ ಮಂತರ್ ನಲ್ಲಿ ಧರಣಿ ಮುಂದಾಗಿದ್ದ ಸಿಜೆಪಿ ಸೇರಿದಂತೆ ವಿದ್ಯಾರ್ಥಿ ಸಂಘಟನೆಗಳ ಹೋರಾಟವನ್ನು ಹತ್ತಿಕ್ಕಲು ಯತ್ನಿಸಿದ ಕೇಂದ್ರ ಸರಕಾರದ ದುಷ್ಕೃತ್ಯ ಖಂಡಿಸಿ ಎಡ ಪಕ್ಷಗಳು ಹಾಗೂ ಪ್ರಗತಿಪರ ಸಂಘಟನೆಗಳ ವತಿಯಿಂದ ಧರಣಿ ನಡೆಸಲಾಯಿತು.
ನಗರದ ಗಾಂಧಿ ವೃತ್ತದಲ್ಲಿ ಶನಿವಾರ ಜಮಾಯಿಸಿದ ಧರಣಿ ನಿರತರು, ನರೇಂದ್ರ ಮೋದಿ, ಅಮಿತ್ ಶಾ ವಿರುದ್ಧ ಆಕ್ರೋಶ ವ್ಯಕ್ತಪಡಿಸಿ ಘೋಷಣೆಗಳನ್ನು ಕೂಗಿದರು.
ಇದೇ ವೇಳೆ ಮಾತನಾಡಿದ ಧರಣಿನಿರತರು, ಇದೊಂದು ಪ್ರಜಾಪ್ರಭುತ್ವ ವಿರೋಧಿ ಹಾಗು ಕ್ರೂರ ಸರ್ವಾಧಿಕಾರಿ ನಡೆಯಾಗಿದೆ. ಪ್ರತಿಭಟನಾಕಾರರನ್ನು ರಸ್ತೆಯ ಮೇಲೆ ಬೀಳಿಸಿ, ಎಳೆದಾಡುವ ವೀಡಿಯೊಗಳು ಕೇಂದ್ರದ ಮೋದಿ ಅಮಿತ್ ಶಾ ರವರ ದುರಾಡಳಿತಕ್ಕೆ ಹಿಡಿದ ಕನ್ನಡಿಯಾಗಿದೆ ಎಂದು ಕಿಡಿಕಾರಿದರು.
ಧರಣಿಯಲ್ಲಿ ರಂಗಕರ್ಮಿ ಜನಾರ್ದನ್ (ಜನ್ನಿ) ಹಾಡಿನ ಮೂಲಕ ಪ್ರತಿರೋಧ ಒಡ್ಡಿದರು. ಧರಣಿಯಲ್ಲಿ ಸಿಪಿಐ ಎಂ ಜಿಲ್ಲಾ ಕಾರ್ಯದರ್ಶಿ ಜಗದೀಶ್ ಸೂರ್ಯ, ಎಸ್‌ಯುಸಿಐ ಜಿಲ್ಲಾ ಕಾರ್ಯದರ್ಶಿ ರವಿ, ಸಿಪಿಐಎಂಎಲ್ ಜಿಲ್ಲಾ ಕಾರ್ಯದರ್ಶಿ ಚೌಡಳ್ಳಿ ಜವರಯ್ಯ, ಸಿಪಿಐನ ಡಿ.ಜಗನ್ನಾಥ್, ರತಿರಾವ್, ಭೂಮಿ ಗೌಡ, ಉಗ್ರ ನರಸೀಂಹೇಗೌಡ, ಕೆ.ಬಸವರಾಜ್, ಬಂಗವಾದಿ ನಾರಣಪ್ಪ, ಲ.ಜಗನ್ನಾಥ್, ಜಿ.ಜಯರಾಂ, ಎನ್.ಸುಬ್ರಹ್ಮಣ್ಯ, ಉಮಾ ದೇವಿ, ಸೀಮಾ, ಮೆಹಬೂಬ್, ಶ್ರೀಧರ್, ಶಿವಕುಮಾರ್, ಬಸವರಾಜ್, ಬಾಲಾಜಿ ರಾವ್, ಚಂದ್ರಶೇಖರ್ ಮೇಟಿ, ಸೋಮಶೇಖರ್, ಕೃಷ್ಣ ಮೂರ್ತಿ, ಅಭಿ, ಚಂದ್ರಕಲಾ, ಬಸವಯ್ಯ, ಕೆಂಪೇಗೌಡ ಮುಂತಾದವರು ಇದ್ದರು.