ವಾಲ್ಮೀಕಿ, ಅಂಬೇಡ್ಕರ್ ಮೌಲ್ಯಗಳು ಸಮಾಜಕ್ಕೆ ಮಾದರಿ : ಸಚಿವ ಡಾ.ಯತೀಂದ್ರ
ಮೈಸೂರು : ಜಗತ್ತಿನ ಶ್ರೇಷ್ಠ ಮಹಾಕಾವ್ಯಗಳಲ್ಲಿ ಒಂದಾದ ವಾಲ್ಮೀಕಿ ರಾಮಾಯಣದ ಉನ್ನತ ಮೌಲ್ಯಗಳು ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಪ್ರಗತಿಪರ ಚಿಂತನೆಗಳು ಸಮಾಜದ ಪ್ರತಿಯೊಬ್ಬರಿಗೂ ಮಾದರಿಯಾಗಿವೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ತಿಳಿಸಿದ್ದಾರೆ.
ಕರ್ನಾಟಕ ಕಲಾಮಂದಿರದಲ್ಲಿ ಜಿಲ್ಲಾ ಆಡಳಿತ ಮತ್ತು ಜಿಪಂ, ಮೈಸೂರು ಮೈಸೂರು ಮಹಾನಗರ ಪಾಲಿಕೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಇಲಾಖೆ ಹಾಗೂ ಮೈಸೂರು ನಗರ ಮತ್ತು ತಾಲೂಕು ನಾಯಕ ಜನಾಂಗದ ಸಂಘಗಳ ವತಿಯಿಂದ ಸೋಮವಾರ ಆಯೋಜಿಸಾಲಾಗಿದ್ದ ಶ್ರೀಮಹರ್ಷಿ ವಾಲ್ಮೀಕಿ ಜಯಂತಿ ಆಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಮಹನೀಯರ ಜಯಂತಿಗಳನ್ನು ಆಚರಿಸುವುದರಿಂದ ಅವರ ತತ್ವ, ಸಿದ್ಧಾಂತ ಹಾಗೂ ಆದರ್ಶಗಳನ್ನು ಮುಂದಿನ ಪೀಳಿಗೆಗೆ ತಲುಪಿಸಲು ಸಾಧ್ಯವಾಗುತ್ತದೆ. ಸಮಾಜದಲ್ಲಿ ಹಿಂದುಳಿದ, ಶೋಷಿತ ಮತ್ತು ಕೆಳಸಮುದಾಯಗಳು ಶೈಕ್ಷಣಿಕ ಹಾಗೂ ಸಾಮಾಜಿಕವಾಗಿ ಪ್ರಗತಿ ಸಾಧಿಸಲು ಆಯಾ ಸಮುದಾಯಗಳಲ್ಲಿ ಸಾಧನೆ ಮಾಡಿದ ಮಹಾನ್ ಚೇತನಗಳ ಜಯಂತಿ ಆಚರಣೆಗಳು ಪ್ರೇರಣೆಯಾಗುತ್ತವೆ ಎಂದರು.
ಸಂವಿಧಾನದ ಆಶಯದಂತೆ ನಡೆಯುತ್ತಿರುವ ನಮ್ಮ ಸರಕಾರವು ಎಂದಿಗೂ ಸಂವಿಧಾನದ ಆಶಯಗಳನ್ನು ಎತ್ತಿ ಹಿಡಿಯುವ ಸರಕಾರವಾಗಿದೆ. ಭಗವಾನ್ ಬುದ್ಧ, ಜಗಜ್ಜ್ಯೋತಿ ಬಸವಣ್ಣ ಹಾಗೂ ಡಾ. ಬಿ.ಆರ್. ಅಂಬೇಡ್ಕರ್ ಅವರ ಮಾನವೀಯ ತತ್ವಗಳು ಮತ್ತು ಆದರ್ಶಗಳ ಹಾದಿಯಲ್ಲೇ ನಮ್ಮ ಸರಕಾರ ಆಡಳಿತ ನಡೆಸುತ್ತಿದೆ ಎಂದು ಅವರು ತಿಳಿಸಿದರು.
ಇದಕ್ಕೂ ಮುನ್ನ ನಗರದ ಕೋಟೆ ಆಂಜನೇಯಸ್ವಾಮಿ ದೇವಸ್ಥಾನದ ಆವರಣದಲ್ಲಿ ಮಹರ್ಷಿ ವಾಲ್ಮೀಕಿ ಜಯಂತಿಯ ಅಂಗವಾಗಿ ಭವ್ಯ ಮೆರವಣಿಗೆಗೆ ನಗರಾಭಿವೃದ್ಧಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಅವರು ಚಾಲನೆ ನೀಡಿ, ಮಹರ್ಷಿ ವಾಲ್ಮೀಕಿ ಅವರ ಭಾವಚಿತ್ರಕ್ಕೆ ಪುಷ್ಪ ನಮನ ಸಲ್ಲಿಸಿದರು.
ಕಾರ್ಯಕ್ರಮದಲ್ಲಿ ವಿಧಾನ ಪರಿಷತ್ ಸದಸ್ಯರಾದ ಡಾ. ಡಿ ತಿಮ್ಮಯ್ಯ, ಸಿ.ಎನ್.ಮಂಜೇಗೌಡ, ಕೆ. ಶಿವಕುಮಾರ್, ರಘು ಕೌಟಿಲ್ಯ, ಡಾ. ಬಿ.ಆರ್ ಅಂಬೇಡ್ಕರ್ ಅಭಿವೃದ್ಧಿ ನಿಗಮ ನಿಯಮಿತದ ಅಧ್ಯಕ್ಷ ಆರ್.ನರೇಂದ್ರ ಹಾಗೂ ಜಿಲ್ಲಾಧಿಕಾರಿ ಜಿ. ಲಕ್ಷ್ಮೀಕಾಂತ ರೆಡ್ಡಿ ಉಪಸ್ಥಿತರಿದ್ದರು.