ಮೈಸೂರು: ಆಶಾ ಕಾರ್ಯಕರ್ತೆಯರ ಬೇಡಿಕೆಗಳನ್ನು ಈಡೇರಿಸಲು ಕ್ರಮ ಕೈಗೊಳ್ಳುತ್ತೇವೆ. ಆದರೆ ಲಿಖಿತವಾಗಿ ಭರವಸೆ ನೀಡುವಂತೆ ಒತ್ತಾಯಿಸಿ ನಮ್ಮನ್ನು ಹೆದರಿಸಬಹುದು ಎಂದು ಭಾವಿಸಿದರೆ ಅದು ಸಾಧ್ಯವಿಲ್ಲ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ನಗರದ ಮಂಡಕಳ್ಳಿ ವಿಮಾನ ನಿಲ್ದಾಣದಲ್ಲಿ ಗುರುವಾರ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಆಶಾ ಕಾರ್ಯಕರ್ತೆಯರು ಲಿಖಿತವಾಗಿ ಬರೆದುಕೊಡುವಂತೆ ಒತ್ತಾಯಿಸಿ ನಮ್ಮನ್ನು ಹೆದರಿಸುತ್ತೇವೆ ಎಂದುಕೊಂಡರೆ ಅದು ಸಾಧ್ಯವಿಲ್ಲ. ಲಿಖಿತವಾಗಿ ನಾನು ಏನನ್ನು ಬರೆದುಕೊಡಬೇಕು? ಯಾರಿಗೆ ಬರೆದುಕೊಡಬೇಕು? ಒಬ್ಬ ಮುಖ್ಯಮಂತ್ರಿಯ ಮೇಲೆಯೇ ನಂಬಿಕೆ ಇಲ್ಲ ಎಂದರೆ ಹೇಗೆ ಎಂದು ಪ್ರಶ್ನಿಸಿದರು.

ಆಶಾ ಕಾರ್ಯಕರ್ತೆಯರ ನೇಮಕಾತಿ ಕೇಂದ್ರ ಸರ್ಕಾರದಿಂದ ಆಗಿದೆ. ಅವರು ಕೇಂದ್ರ ಸರ್ಕಾರದ ಬಳಿ ಲಿಖಿತವಾಗಿ ಭರವಸೆ ಕೇಳಿದ್ದಾರೆಯೇ ಎಂದು ಪ್ರಶ್ನಿಸಿದ ಅವರು, ಒಬ್ಬರಿಗೆ ಲಿಖಿತವಾಗಿ ಭರವಸೆ ನೀಡಿದರೆ ಉಳಿದವರೂ ಅದನ್ನೇ ಕೇಳಲು ಆರಂಭಿಸುತ್ತಾರೆ. ಇನ್ನೂ 17 ಇಲಾಖೆಗಳಲ್ಲಿಯೂ ಇದೇ ರೀತಿಯ ಪರಿಸ್ಥಿತಿ ಇದೆ. ಅವರೆಲ್ಲರೂ ಲಿಖಿತ ಭರವಸೆ ಕೇಳಿದರೆ ನಾವೇನು ಮಾಡಬೇಕು ಎಂದರು.

ಆಶಾ ಕಾರ್ಯಕರ್ತೆಯರ ಬೇಡಿಕೆಗಳು ನ್ಯಾಯಯುತವಾಗಿವೆ. ಅವುಗಳನ್ನು ತಪ್ಪು ಎಂದು ನಾನು ಹೇಳುವುದಿಲ್ಲ. ನಂಬಿಕೆಯ ಮೇಲೆ ಜಗತ್ತು ನಡೆಯುತ್ತಿದೆ. ಆಶಾ ಕಾರ್ಯಕರ್ತೆಯರು ನನ್ನ ಮೇಲೆ ನಂಬಿಕೆ ಇಡಬೇಕು. ಅವರ ಮನವೊಲಿಸಲು ನಾನೂ ಪ್ರಯತ್ನಿಸುತ್ತಿದ್ದೇನೆ. ಇನ್ನೇನು ಮಾಡಲು ಸಾಧ್ಯ ಎಂದು ಅವರು ಹೇಳಿದರು.

ಈ ವಿಚಾರವನ್ನು ಸಚಿವ ಸಂಪುಟ ಸಭೆಯಲ್ಲಿಯೂ ಚರ್ಚಿಸಲಾಗುವುದು. ವಿಧಾನಮಂಡಲ ಅಧಿವೇಶನದಲ್ಲೂ ಈ ಬಗ್ಗೆ ಚರ್ಚಿಸುತ್ತೇನೆ. ಪ್ರತಿಭಟನೆಯನ್ನು ಕೈಬಿಡುವಂತೆ ಕೈಮುಗಿದು ಮನವಿ ಮಾಡಿಕೊಳ್ಳುತ್ತೇನೆ ಎಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್/ವಾರ್ತಾಭಾರತಿ

contributor

ನೇರಳೆ ಸತೀಶ್ ಕುಮಾರ್ ಅವರು ಕಳೆದ 20 ವರ್ಷಗಳಿಂದ ಪತ್ರಿಕೋದ್ಯಮ‌ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದಾರೆ. ನಂಜನಗೂಡಿನಿಂದ ಪತ್ರಿಕೋದ್ಯಮ ಆರಂಭಿಸಿದ ಅವರು, ಮೈಸೂರು, ಬೆಂಗಳೂರು ನಗರಗಳಲ್ಲಿ ಹಲವಾರು ಜಿಲ್ಲಾ ಮತ್ತು ರಾಜ್ಯಮಟ್ಟದ ಪತ್ರಿಕೆಗಳಲ್ಲಿ ವರದಿಗಾರ ಮತ್ತು ಉಪ ಸಂಪಾದಕನಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಕಳೆದ 9 ವರ್ಷಗಳಿಂದ ವಾರ್ತಾಭಾರತಿ ಪತ್ರಿಕೆಯಲ್ಲಿ ಮೈಸೂರು ಜಿಲ್ಲಾ ವರದಿಗಾರರಾಗಿಕರ್ತವ್ಯ ನಿರ್ವಹಿಸುತ್ತಿದ್ದಾರೆ.