ಕಾಮನ್‌ವೆಲ್ತ್ ಗೇಮ್ಸ್: ಶಾಟ್‌ಪುಟ್ ವಿಭಾಗದಲ್ಲಿ ಮೈಸೂರಿನ ಕೆ.ಎಸ್.ಶಿಲ್ಪಾಗೆ ಕಂಚು

Update: 2026-07-28 19:13 IST

ಮೈಸೂರು : ಕಾಮನ್‌ವೆಲ್ತ್ ಗೇಮ್ಸ್ ನ ಮಹಿಳೆಯರ ಶಾಟ್‌ಪುಟ್ ವಿಭಾಗದಲ್ಲಿ ಕೆ.ಆರ್.ನಗರದ ಕೆ.ಎಸ್. ಶಿಲ್ಪಾ ಅವರು ಕಂಚು ಗೆಲ್ಲುವ ಮೂಲಕ ಐತಿಹಾಸಿಕ ಸಾಧನೆ ಮಾಡಿದ್ದಾರೆ.

ಕಾಮನ್‌ವೆಲ್ತ್ ಗೇಮ್ಸ್ ಗೆ ಕರ್ನಾಟಕದಿಂದ ಆಯ್ಕೆಯಾಗಿದ್ದ ಏಕೈಕ ಪ್ಯಾರಾ ಅಥ್ಲೀಟ್ ಎಂಬ ಹೆಗ್ಗಳಿಕೆಗೆ ಪಾತ್ರರಾಗಿದ್ದ ಅವರು ಪದಕ ಜಯಿಸುವ ಮೂಲಕ ದಾಖಲೆ ನಿರ್ಮಿಸಿ ಜಿಲ್ಲೆಗೆ ಕೀರ್ತಿ ತಂದಿದ್ದಾರೆ.

ಕೆ.ಎಸ್. ಶಿಲ್ಪಾ ಅವರು ಕೆ.ಆರ್.ನಗರ ತಾಲೂಕಿನ ಕಂಚುಗಾರಕೊಪ್ಪಲು ಗ್ರಾಮದವರು. ರೈತ ಕುಟುಂಬವಾದ ಶೈಲ ಹಾಗೂ ಗೃಹಿಣಿ ಶಾಂತಾ ದಂಪತಿ ಪುತ್ರಿಯಾಗಿರುವ ಇವರು, ಗ್ರಾಮೀಣ ವಾತಾವರಣದಲ್ಲೇ ಬೆಳೆದವರು.

ನಾಲ್ಕು ವರ್ಷದ ಬಾಲಕಿಯಾಗಿದ್ದಾಗ ಮನೆಯ ಬಳಿ ಐಸ್‌ಕ್ರೀಮ್ ಖರೀದಿಸಿ ಹಿಂದಿರುಗುವಾಗ ಲಾರಿ ಢಿಕ್ಕಿ ಹೊಡೆದ ಪರಿಣಾಮ ಎಡಗಾಲನ್ನೇ ಕಳೆದುಕೊಂಡರು. ಅಂಗವೈಕಲ್ಯತೆಯಿಂದಲೇ ಸ್ಫೂರ್ತಿ ಪಡೆದುಕೊಂಡ ಇವರು, ಅಂಗವಿಕಲರ ಕ್ರೀಡೆಯಲ್ಲಿ ಸಕ್ರಿಯರಾಗಿ ಇದೀಗ ಪದಕವನ್ನು ಮುಡಿಗೇರಿಸಿಕೊಂಡಿದ್ದು, ಇದು ನಿಜಕ್ಕೂ ಜಿಲ್ಲೆಯ ಪಾಲಿಗೆ ಅದ್ಭುತ ಸಾಧನೆ.

2024ರಲ್ಲಿ ಗೋವಾದಲ್ಲಿ ನಡೆದ ರಾಷ್ಟ್ರೀಯ ಚಾಂಪಿಯನ್‌ಷಿಪ್‌ನ ಶಾಟ್‌ಪುಟ್‌ನಲ್ಲಿ ಮೊದಲ ಪದಕ ಗೆದ್ದರು. 2025ರಲ್ಲಿ ಹೊಸದಿಲ್ಲಿಯಲ್ಲಿ ನಡೆದ ವಿಶ್ವ ಪ್ಯಾರಾ ಅಥ್ಲೆಟಿಕ್ಸ್ ಗ್ರ‍್ಯಾಂಡ್ ಪ್ರಿಕ್ಸ್ ನಲ್ಲಿ ಶಾಟ್‌ಪುಟ್‌ನಲ್ಲಿ ಚಿನ್ನದ ಪದಕ ಗೆದ್ದು ದೇಶದ ಗಮನ ಸೆಳೆದರು. ಈ ಸಾಧನೆಯ ಬಳಿಕ ಶಿಕ್ಷಕಿಯ ಉದ್ಯೋಗಕ್ಕೆ ರಾಜೀನಾಮೆ ನೀಡಿ, ಪೂರ್ಣ ಪ್ರಮಾಣದಲ್ಲಿ ಕ್ರೀಡೆಯಲ್ಲೇ ತೊಡಗಿಕೊಂಡರು. ಇದರ ಫಲವಾಗಿ ಈ ಸಾಧನೆ ಮೂಡಿ ಬಂದಿದೆ.

ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಅಭಿನಂದನೆ

ʼಸ್ಕಾಟ್ಲೆಂಡ್‍ನ ಗ್ಲಾಸ್ಕೊದಲ್ಲಿ ನಡೆಯುತ್ತಿರುವ ಕಾಮನ್‍ವೆಲ್ತ್ ಕ್ರೀಡಾಕೂಟದಲ್ಲಿ ಕರ್ನಾಟಕದ ಹೆಮ್ಮೆಯ ಪ್ಯಾರಾ ಅಥ್ಲೀಟ್ ಕೆ.ಎಸ್.ಶಿಲ್ಪಾ ಅವರು ಕಂಚಿನ ಪದಕ ಗೆದ್ದು ಬೀಗಿದ್ದಾರೆ. ಮಹಿಳೆಯರ ಎಫ್-57 ವಿಭಾಗದಲ್ಲಿ 7.26 ಮೀ.ದೂರಕ್ಕೆ ಶಾಟ್‍ಪುಟ್ ಎಸೆಯುವುದರ ಮೂಲಕ ನಾಡಿನ ಕೀರ್ತಿಯನ್ನು ಮುಗಿಲೆತ್ತರಕ್ಕೆ ಒಯ್ದಿದ್ದಾರೆ’ ಎಂದು ಉಪಮುಖ್ಯಮಂತ್ರಿ ಡಾ.ಜಿ.ಪರಮೇಶ್ವರ್ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

‘ಕಳೆದ ವಾರವಷ್ಟೇ ಶಿಲ್ಪಾರಿಗೆ ಕರೆ ಮಾಡಿ, ಕಾಮನ್‍ವೆಲ್ತ್ ಪಂದ್ಯಾಕೂಟದಲ್ಲಿ ಆತ್ಮವಿಶ್ವಾಸದಿಂದ ಪಾಲ್ಗೊಂಡು, ಪದಕ ಗೆದ್ದು ಬರುವಂತೆ ಶುಭ ಹಾರೈಸಿದ್ದೆ. ಶಿಲ್ಪಾರ ಸಾಮಥ್ರ್ಯ ಮತ್ತು ಕ್ರೀಡಾ ಸಾಧನೆಯ ಬಗ್ಗೆ ಅರಿವಿದ್ದ ನನಗೆ, ಅವರು ಖಂಡಿತ ಪದಕ ಗೆಲ್ಲುತ್ತಾರೆಂಬ ವಿಶ್ವಾಸವಿತ್ತು. ಇಂದು ಅವರು ಕಂಚಿನ ಪದಕ ಗೆದ್ದ ವಿಚಾರ ತಿಳಿದು ಮತ್ತಷ್ಟು ಖುಷಿಯಾಯಿತು’ ಎಂದು ಸಂತಸವನ್ನು ಹಂಚಿಕೊಂಡಿದ್ದಾರೆ.


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News