×
Ad

ಕಂಬಳ ಕೂಡ ನಮ್ಮ ಸಂಸ್ಕೃತಿಯ ಭಾಗ, ದಸರಾದಲ್ಲಿ ಕಂಬಳ ಮಾಡಿದರೆ ತಪ್ಪೇನು : ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ

Update: 2026-07-15 14:20 IST

ಯತೀಂದ್ರ ಸಿದ್ದರಾಮಯ್ಯ

ಮೈಸೂರು : ಕಂಬಳ ಕೂಡ ನಮ್ಮ ಸಂಸ್ಕೃತಿಯ ಭಾಗ ಅದನ್ನು ಮೈಸೂರು ಭಾಗಕ್ಕೂ ಪ್ರಚಾರ ಮಾಡುವ ದೃಷ್ಟಿಯಿಂದ ಮೈಸೂರು ದಸರಾದಲ್ಲಿ ಕಂಬಳ ನಡೆಸಲು ಚಿಂತನೆ ನಡೆಸಿದ್ದು, ಈ ಬಗ್ಗೆ ಅಂತಿಮ ನಿರ್ಧಾರವನ್ನು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಕೈಗೊಳ್ಳಲಿದ್ದಾರೆ ಎಂದು ನಗರಾಭಿವೃದ್ಧಿ ಹಾಗೂ ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ಧರಾಮಯ್ಯ ತಿಳಿಸಿದ್ದಾರೆ.

ಚಾಮುಂಡಿ ಬೆಟ್ಟದಲ್ಲಿ ಆಷಾಢ ಶುಕ್ರವಾರದ ಸಿದ್ಧತೆಗಳನ್ನು ಪರಿಶೀಲಿಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಕಂಬಳವೂ ಕರಾವಳಿ ಭಾಗದಷ್ಟೇ ರಾಜ್ಯದ ಸಾಂಸ್ಕೃತಿಕ ಪರಂಪರೆಯ ಭಾಗವಾಗಿದ್ದು, ಅದನ್ನು ಮೈಸೂರು ಭಾಗದಲ್ಲಿಯೂ ಪರಿಚಯಿಸುವ ಉದ್ದೇಶದಿಂದ ದಸರಾ ವೇಳೆ ಆಯೋಜಿಸುವ ಕುರಿತು ಚರ್ಚೆ ನಡೆಯುತ್ತಿದೆ ಎಂದರು.

ಸರ್ಕಾರ ಇನ್ನೂ ಕಂಬಳ ಆಯೋಜನೆ ಕುರಿತು ಅಂತಿಮ ತೀರ್ಮಾನ ಕೈಗೊಂಡಿಲ್ಲ. ಪ್ರತಿ ವರ್ಷ ದಸರಾದಲ್ಲಿ ಹೊಸತನ ತರಲು ಪ್ರಯತ್ನಿಸಲಾಗುತ್ತದೆ. ಈ ಬಾರಿಯೂ ಕಂಬಳ ಆಯೋಜನೆಯ ಸಾಧಕ-ಬಾಧಕಗಳ ಕುರಿತು ಸಮಗ್ರವಾಗಿ ಪರಿಶೀಲನೆ ನಡೆಸಲಾಗುತ್ತಿದ್ದು, ಎಲ್ಲರ ಅಭಿಪ್ರಾಯಗಳನ್ನು ಗೌರವಿಸಿ ಸೂಕ್ತ ನಿರ್ಧಾರ ಕೈಗೊಳ್ಳಲಾಗುವುದು ಎಂದು ಹೇಳಿದರು.

ಪರಿಸರಕ್ಕೆ ಯಾವುದೇ ಹಾನಿಯಾಗದಂತೆ ಕಾರ್ಯಕ್ರಮ ಆಯೋಜಿಸುವ ಕುರಿತು ಗಮನ ಹರಿಸಲಾಗುವುದು. ಕಂಬಳಕ್ಕೆ ಪರ-ವಿರೋಧ ಅಭಿಪ್ರಾಯಗಳು ವ್ಯಕ್ತವಾಗಿದ್ದು, ಎಲ್ಲ ಅಂಶಗಳನ್ನು ಪರಿಗಣಿಸಿ ಸರ್ಕಾರ ಮುಂದಿನ ಕ್ರಮ ಕೈಗೊಳ್ಳಲಿದೆ ಎಂದರು.

ಸಂಪುಟ ವಿಸ್ತರಣೆ ಕುರಿತು ಪ್ರತಿಕ್ರಿಯಿಸಿದ ಅವರು, ವಿಧಾನಪರಿಷತ್ ಹಾಗೂ ರಾಜ್ಯಸಭೆ ಚುನಾವಣೆಗಳ ಹಿನ್ನೆಲೆಯಲ್ಲಿ ವಿಳಂಬವಾಗಿದ್ದು, ಮುಖ್ಯಮಂತ್ರಿ, ಮಾಜಿ ಮುಖ್ಯಮಂತ್ರಿ ಹಾಗೂ ಪಕ್ಷದ ಹೈಕಮಾಂಡ್ ಶೀಘ್ರದಲ್ಲೇ ಅಂತಿಮ ನಿರ್ಧಾರ ಕೈಗೊಳ್ಳಲಿದ್ದಾರೆ ಎಂದು ತಿಳಿಸಿದರು.

ಹೈಕಮಾಂಡ್ ಗೆ ಸೂಟ್ ಕೇಸ್ ಕೊಡುವ ಸಂಸ್ಕೃತಿ ಬಿಜೆಪಿಯವರಿಗೆ ಇದೆ ಹೊರತು ಅದು ಕಾಂಗ್ರೆಸ್ ಸಂಸ್ಕೃತಿ ಅಲ್ಲ. ಸಿಎಂ‌ ಮಾಡಲು ಎಷ್ಟು ಹಣ ಹೈಕಮಾಂಡ್ ಗೆ ನೀಡಲಾಗಿದೆ ಎಂಬುದನ್ನು ಅವರ ಬಿಜೆಪಿ ಪಕ್ಷದವರೆ ಹೇಳಿದ್ದಾರೆ. ವಿರೋಧ ಪಕ್ಷದವರ ಆರೋಪಕ್ಕೆಲ್ಲ ಉತ್ತರ ಕೊಡುವ ಅಗತ್ಯವಿಲ್ಲ ಎಂದರು.

ಸಚಿವ ಸಂಪುಟಕ್ಕೆ ಪಕ್ಷಕ್ಕೆ ನಿಷ್ಠೆ ಮತ್ತು ದಕ್ಷತೆ ಹೊಂದಿರುವವರನ್ನು ಸೇರಿಸಿಕೊಳ್ಳಲಾಗುತ್ತದೆ ಎಂದು ಈ ವೇಳೆ ಹೇಳಿದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News