Mysuru | ಗುತ್ತಿಗೆದಾರನ ಅಪಹರಿಸಿ 16 ಲಕ್ಷ ದೋಚಿದ ದುಷ್ಕರ್ಮಿಗಳು: ಆರೋಪಿಗಳ ಪತ್ತೆಗೆ ಮೂರು ತಂಡ ರಚನೆ
ಸಾಂದರ್ಭಿಕ ಚಿತ್ರ
ಮೈಸೂರು: ತಾಲೂಕಿನ ಮುದ್ದೇಗೌಡನಹುಂಡಿ ಗ್ರಾಮದಲ್ಲಿ ತೋಟದಿಂದ ಮನೆಗೆ ತೆರಳುತ್ತಿದ್ದ ಗುತ್ತಿಗೆದಾರರೊಬ್ಬರನ್ನು ಅಪಹರಿಸಿದ ತಂಡ 60 ಲಕ್ಷಕ್ಲೆ ಬೇಡಿಕೆ ಇಟ್ಟು 16 ಲಕ್ಷ ಹಣ ಪಡೆದ ಬಳಿಕ ಅವರನ್ನು ಬಿಡುಗಡೆಗೊಳಿಸಿರುವ ಘಟನೆ ನಡೆದಿದೆ.
ಮುದ್ದೇಗೌಡನಹುಂಡಿ ಗ್ರಾಮದ ರಾಮು ಅವರು ಬುಧವಾರ ರಾತ್ರಿ 8.45ರ ಸುಮಾರಿಗೆ ತಮ್ಮ ತೋಟದ ಮನೆಯಿಂದ ಸ್ಕೂಟಿಯಲ್ಲಿ ಮನೆಗೆ ತೆರಳುತ್ತಿದ್ದರು. ಈ ವೇಳೆ ಕಾರಿನಲ್ಲಿ ಬಂದ ಐವರ ತಂಡ ಅವರನ್ನು ಅಡ್ಡಗಟ್ಟಿ, ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿ ಅಪಹರಿಸಿತು. ಬಳಿಕ ಆರೋಪಿಗಳು ರಾಮು ಅವರ ಕುಟುಂಬದವರಿಗೆ ಕರೆ ಮಾಡಿ 60 ಲಕ್ಷಕ್ಕೆ ಬೇಡಿಕೆ ಇಟ್ಟಿದ್ದಾರೆ. ಅವರನ್ನು ರಾತ್ರಿಯಿಡೀ ಗೌಪ್ಯ ಸ್ಥಳದಲ್ಲಿ ಇರಿಸಿಕೊಂಡಿದ್ದು, ಹಣ ಪಡೆದ ಬಳಿಕ ಗುರುವಾರ ಬೆಳಿಗ್ಗೆ 9.45 ಗಂಟಗೆ ವೇಳೆಗೆ ಮುದ್ದೇಗೌಡನಹುಂಡಿ ಸಮೀಪ ಕರೆತಂದು ಬಿಟ್ಟು ಹೋಗಿದ್ದಾರೆ. ನಂತರ ರಾಮು ಅವರು ಗುರುವಾರ ಸಂಜೆ ವರುಣಾ ಪೊಲೀಸ್ ಠಾಣೆಗೆ ಬಂದು ದೂರು ನೀಡಿದ್ದಾರೆ.
ಈ ಸಂಬಂಧ ಮಾತನಾಡಿರುವ ಮೈಸೂರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಮಲ್ಲಿಕಾರ್ಜುನ ಬಾಲದಂಡಿ, ಮುದ್ದೇಗೌಡನಹುಂಡಿ ಗ್ರಾಮದ ರಾಮು ಅವರನ್ನು ಹಣಕ್ಕಾಗಿ ಕಿಡ್ನಾಪ್ ಮಾಡಿ 16 ಲಕ್ಷ ಹಣ ವಸೂಲಿ ಮಾಡಿದ್ದಾರೆ. ರಾಮು ಮೈಮೇಲೆ 30ಗ್ರಾಂ ಚಿನ್ನಾಭರಣ ಹಾಕಿದ್ದರು, ಅದೆಲ್ಲವನ್ನು ಕಿತ್ತುಕೊಂಡು ಹೋಗಿದ್ದಾರೆ. ರಾಮು ಅಪಹರಣ ಮಾಡಿದ ಸಂಧರ್ಭದಲ್ಲಿ ಕಣ್ಣಿಗೆ ಕಪ್ಪು ಬಟ್ಟೆ ಕಟ್ಟಿದ್ದಾರೆ. ಹಾಗಾಗಿ ಅಪಹರಣಕಾರರು ಯಾರು ಎಂಬುದು ಗೊತ್ತಾಗಿಲ್ಲ. ಹಣ ಪಡೆದ ಬಳಿಕ ದುಷ್ಕರ್ಮಿಗಳು ನಿನ್ನ ಮೊಬೈಲ್ ತೋಟದಲ್ಲೇ ತೆಂಗಿನ ಮರದ ಬಳಿಯಿದೆ. ಈ ವಿಷಯ ಯಾರಿಗೂ ಗೊತ್ತಾಗಬಾರದು. ನಿನ್ನನ್ನು ಕೊಲ್ಲಲು ನಮಗೆ ಸುಫಾರಿ ಕೊಟ್ಟಿದ್ದಾರೆ. ನಿನ್ನ ಸಾಯಿಸದೇ ನಾವು ನಿನ್ನ ಹಣ ತೆಗೆದುಕೊಂಡು ಹೋಗುತ್ತಿದ್ದೇವೆ ಎಂದು ಹೆದರಿಸಿ ಹೋಗಿದ್ದಾರೆ. ಮೇಲ್ನೋಟಕ್ಕೆ ಇವರ ಬಳಿ ಹಣವಿದೆ ಎಂದು ಗೊತ್ತಿದ್ದವರೆ ಈ ಕೃತ್ಯ ಮಾಡಿರುವ ಶಂಕೆಯಿದೆ ಎಂದು ಅವರು ಹೇಳಿದ್ದಾರೆ.
5 ರಿಂದ 6 ಜನರ ತಂಡ ಈ ಕೆಲಸ ಮಾಡಿರುವ ಶಂಕೆಯಿದೆ. ಆರೋಪಿಗಳ ಪತ್ತೆಗಾಗಿ 3 ತಂಡಗಳನ್ನು ರಚನೆ ಮಾಡಿದ್ದೇವೆ. ಅದಷ್ಟು ಬೇಗ ಪ್ರಕರಣದ ಆರೋಪಿಗಳನ್ನು ಬಂಧಿಸುತ್ತೇವೆ ಎಂದು ಎಸ್ಪಿ ಮಾಹಿತಿ ನೀಡಿದ್ದಾರೆ.