ಮೈಸೂರು : ಸಂವಿಧಾನದ ಅಡಿಯಲ್ಲಿ ಇಂದು ಶೋಷಿತ ವರ್ಗಗಳು ಒಗ್ಗಟ್ಟಾಗಬೇಕಾದ ಮತ್ತು ಸ್ವಾತಂತ್ರ್ಯದ ಆಶಯಗಳಾದ ಸಮಾನತೆ, ಸ್ವಾತಂತ್ರ್ಯ, ಐಕ್ಯತೆ, ಭ್ರಾತೃತ್ವದ ಅಂಶಗಳನ್ನು ನಾವೆಲ್ಲರೂ ಅಳವಡಿಸಿಕೊಂಡು ಅದನ್ನು ಹೆಚ್ಚು ಜನ ಜೀವನದ ಭಾಗವಾಗಿಸಬೇಕು ಎಂದು ಮಾಜಿ ಸಚಿವರಾದ ಡಾ.ಹೆಚ್ ಸಿ ಮಹದೇವಪ್ಪನವರು ಹೇಳಿದರು.

ಮೈಸೂರಿನ ಮಾನಸ ಗಂಗೋತ್ರಿಯ ಆವರಣದಲ್ಲಿ ಇರುವ ಮುಕ್ತ ವಿಶ್ವವಿದ್ಯಾಲಯದ ಘಟಿಕೋತ್ಸವ ಭವನದಲ್ಲಿ ದಲಿತ ಸಂಘರ್ಷ ಸಮಿತಿಗಳ ಐಕ್ಯ ಹೋರಾಟ ಚಾಲನಾ ಸಮಿತಿ ಹಾಗೂ ಸಂವಿಧಾನ ಜನಾಂದೋಲನ ಸಮಿತಿಯ ಸಂಯುಕ್ತ ಆಶ್ರಯದಲ್ಲಿ ಜರುಗಿದ ಸಂವಿಧಾನ ಧ್ವನಿ - ಜನರ ದನಿ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಶೋಷಿತ ವರ್ಗಗಳು ಸಮಾಜದಲ್ಲಿ ಒಂದಿಲ್ಲೊಂದು ಕಾರಣಗಳಿಗೆ ಕುಗ್ಗುವಂತಹ ಸಂದರ್ಭವನ್ನು ಸೃಷ್ಟಿ ಮಾಡಲಾಗುತ್ತಿದೆ. ಅದರಲ್ಲೂ ಅಧಿಕಾರ ರಾಜಕಾರಣದ ವಿಷಯದಲ್ಲಿ ಸಾಕಷ್ಟು ಅಡೆ ತಡೆ ಒಡ್ಡುವುದು ಮತ್ತು ಶೋಷಿತರ ಹಕ್ಕುಗಳ ಪಡೆವ ಸಂದರ್ಭದಲ್ಲಿ ಕುತಂತ್ರ ರೂಪಿಸುವ ಕೆಲಸಗಳನ್ನು ಇನ್ನಿಲ್ಲದೇ ಮಾಡಲಾಗುತ್ತಿದೆ ಎಂದರು.

ಇದು ಸಾಲದು ಎಂಬಂತೆ ಸಂವಿಧಾನಾತ್ಮಕ ಹುದ್ದೆಯಲ್ಲಿರುವ ನಮ್ಮ ಪ್ರಧಾನಿಗಳೇ ಕಾಂಗ್ರೆಸ್ ನವರು ಹಿಂದುಳಿದವರ ಮೀಸಲಾತಿಯನ್ನು ಮುಸಲ್ಮಾನರಿಗೆ ನೀಡುತ್ತಿದ್ದಾರೆ ಎಂದು ತಪ್ಪಾಗಿ ಹೇಳುತ್ತಿದ್ದಾರೆ. ಇದರ ಜೊತೆಗೆ SIR ನೆಪದಲ್ಲಿ ಚುನಾವಣಾ ಆಯೋಗವು ಪ್ರಜಾಪ್ರಭುತ್ವವನ್ನು ಧ್ವಂಸ ಮಾಡುವ ಕೆಲಸ ಮಾಡುತ್ತಿದೆ ಎಂದು ಅವರು ಅಭಿಪ್ರಾಯ ಪಟ್ಟರು.

ಇನ್ನು ಈ ಹಿಂದೆ ಬಾಬಾ ಸಾಹೇಬರು "ಇನ್ನು ಮುಂದೆ ರಾಜ ಅರಮನೆಯಲ್ಲಿ ಅಲ್ಲ ಮತದಾನದ ಬೂತ್ ನಲ್ಲಿ ಹುಟ್ಟುತ್ತಾನೆ ಎಂದು ಹೇಳುತ್ತಿದ್ದರು, ಆದರೆ ಈಗ ಚುನಾವಣಾ ಆಯೋಗ ಮಾಡುತ್ತಿರುವುದನ್ನು ನೋಡಿದರೆ, " ರಾಜ ಚುನಾವಣಾ ಬೂತ್ ನಲ್ಲಿ ಅಲ್ಲ, ಚುನಾವಣಾ ಆಯೋಗದಲ್ಲೇ ಹುಟ್ಟುವಂತ ಪರಿಸ್ಥಿತಿ ನಿರ್ಮಾಣ ಆಗಿದೆ" ಎಂದು ಅವರು ಹೇಳಿದರು

ಕಾರ್ಯಕ್ರಮದಲ್ಲಿ ಮಾಜಿ ಮುಖ್ಯಮಂತ್ರಿಗಳಾದ ಸಿದ್ಧರಾಮಯ್ಯ, ಮಾಜಿ ಚುನಾವಣಾ ಆಯುಕ್ತರಾದ ಎಸ್ ವೈ ಖುರೇಶಿ, ಸಾಹಿತಿ ಬರಗೂರು ರಾಮಚಂದ್ರಪ್ಪನವರು ಸೇರಿದಂತೆ ದಲಿತ ಸಂಘರ್ಷ ಸಮಿತಿ ಮುಖಂಡರು ಈ ವೇಳೆ ಉಪಸ್ಥಿತರಿದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor