×
Ad

2028ರಲ್ಲಿ ಜೆಡಿಎಸ್-ಬಿಜೆಪಿ ಮೈತ್ರಿ ಸರ್ಕಾರ ಅಧಿಕಾರಕ್ಕೆ ಬರಲಿದೆ: ನಿಖಿಲ್ ಕುಮಾರಸ್ವಾಮಿ

Update: 2026-05-13 23:20 IST

ಮೈಸೂರು: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ವಿಧಾನಸೌಧದಲ್ಲಿ ಮುಂದಿನ ದಿನಗಳಲ್ಲಿ ಜೆಡಿಎಸ್‌ ಸಿಂಗಲ್‌ ಡಿಜಿಟ್‌ಗೆ ಇಳಿಯಲಿದೆ ಎಂದು ವ್ಯಂಗ್ಯವಾಡಿದ್ದಾರೆ. ಇದನ್ನು ಅವರ ಕ್ಷೇತ್ರ ವರುಣದಲ್ಲೇ ಸವಾಲಾಗಿ ಸ್ವೀಕರಿಸಲಾಗಿದ್ದು ಮುಂಬರುವ ಚುನಾವಣೆಯಲ್ಲಿ 58 ಕ್ಕೂ ಹೆಚ್ಚು ಕ್ಷೇತ್ರದಲ್ಲಿ ಜಯಿಸಿಯೇ ತೀರುತ್ತೇವೆ ಎಂದು ಜೆಡಿಎಸ್‌ ಯುವ ಘಟಕ ರಾಜ್ಯಾಧ್ಯಕ್ಷ ನಿಖಿಲ್‌ ಕುಮಾರಸ್ವಾಮಿ ಅವರು ಹೇಳಿದರು.

ಜೆಡಿಎಸ್‌ ವತಿಯಿಂದ ಬುಧವಾರ ವರುಣ ಕ್ಷೇತ್ರದ ಮೆಲ್ಲಹಳ್ಳಿ ಬಳಿ ಆಯೋಜಿಸಿದ್ದ ಜನರೊಂದಿಗೆ ಜನತಾ ದಳ ಸಮಾವೇಶವನ್ನು ಉದ್ಘಾಟಿಸಿ ಮಾತನಾಡಿದರು.

ನಾನಾ ರೀತಿಯ ರಾಜಕೀಯ ಅವಕಾಶಗಳನ್ನು ಮಾಡಿಕೊಟ್ಟ ಜೆಡಿಎಸ್‌ನ ಪರಿಸ್ಥಿತಿಯ ಬಗ್ಗೆ ಸಿದ್ದರಾಮಯ್ಯ ಹೀಯಾಳಿಸಿದ್ದಾರೆ. ಜೆಡಿಎಸ್‌ ಗೆ ದ್ರೋಹ ಮಾಡಿ ಹೋದ ನಾಯಕರು ವಿಧಾನಸೌಧದಲ್ಲಿ ಜೆಡಿಎಸ್‌ನ ಒಟ್ಟು ಸಂಖ್ಯಾ ಬಲದ ಬಗ್ಗೆ ಲಘುವಾಗಿ ಮಾತನಾಡಿದ್ದಾರೆ. ಈಗ 19 ಕ್ಷೇತ್ರದಲ್ಲಿ ಗೆದ್ದಿದೆ. ಮುಂದಿನ ದಿನಗಳಲ್ಲಿ ಸಿಂಗಲ್‌ ಡಿಜಿಟ್‌ಗೆ ಇಳಿಯಳಿದೆ ಎಂದು ಟೀಕಿಸಿದ್ದಾರೆ. ಹಾಗಾಗಿ ಮುಂದಿನ ಚುನಾವಣೆಯಲ್ಲಿ 58 ಕ್ಕೂ ಮೀರಿದ ಸಾಧನೆಯನ್ನು ಜೆಡಿಎಸ್‌ ಮಾಡಿ ತೋರಿಸಲಿದೆ ಎಂದು ಹೇಳಿದರು.

ದಲಿತರ ಹಣ ಗ್ಯಾರಂಟಿಗೆ :

ಕಾಂಗ್ರೆಸ್‌ ಸರ್ಕಾರದ ಭ್ರಷ್ಟಾಚಾರ, ಕುರ್ಚಿ ಕದನ ಮತ್ತು ಸುಳ್ಳು ಪ್ರಚಾರದಿಂದ ರಾಜ್ಯದ ವ್ಯವಸ್ಥೆ ಮೂರಾಬಟ್ಟೆಯಾಗಿದೆ. ಕಳೆದ 3 ವರ್ಷಗಳಲ್ಲಿ ಎಸ್‌ಸಿಪಿ, ಟಿಎಸ್‌ಪಿ ಅಡಿ ದಲಿತ ಅಭಿವೃದ್ಧಿಗೆ ನಿಗದಿಯಾಗಿದ್ದ 29,764 ಕೋಟಿ ರೂ. ಹಣವನ್ನು ಗ್ಯಾರಂಟಿ ಯೋಜನೆಗಳಿಗೆ ವರ್ಗಾಯಿಸಲಾಗಿದೆ. ಅಲ್ಲದೇ ಈ ಅನುದಾನವನ್ನು 190 ಕೋಟಿಯಿಂದ 50 ಕೋಟಿ ರೂ.ಗೆ ಇಳಿಸಿ, 140 ಕೋಟಿ ರೂ.  ಕಡಿತ ಮಾಡಿರುವುದು ದಲಿತರಿಗೆ ಮಾಡಿದ ದ್ರೋಹ ಎಂದು ನಿಖಿಲ್‌ ಟೀಕಿಸಿದರು.

ರೈತರ ಆತ್ಮಹತ್ಯೆಯೇ ಸರಕಾರದ ಕೊಡುಗೆ :

ಕಳೆದ 3 ವರ್ಷಗಳಲ್ಲಿ ರಾಜ್ಯದಲ್ಲಿ 2,416 ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಮೈಸೂರು ಜಿಲ್ಲೆಯಲ್ಲಿಯೇ ಕಳೆದ 2 ವರ್ಷಗಳಲ್ಲಿ 138 ರೈತರು ಬಲಿಯಾಗಿದ್ದಾರೆ. 2026ರ ಅಂತ್ಯಕ್ಕೆ ರಾಜ್ಯದ ಒಟ್ಟು ಸಾಲ 7.64 ಲಕ್ಷ ಕೋಟಿ ಮೀರಲಿದೆ. ಅಲ್ಲದೇ ರೈತವಿರೋಧಿ ಧೋರಣೆಯ ಕಾಂಗ್ರೆಸ್‌ ಸರಕಾರ ಬೇಕೆ ? ರೈತರ 25 ಸಾವಿರ ಕೋಟಿ ರೂ. ಸಾಲ ಮನ್ನ ಮಾಡಿ 25 ಲಕ್ಷ ರೈತ ಕುಟುಂಬಗಳಿಗೆ ನೆರವಾದ ರೈತರ ಕಣ್ಮಣಿ ಕುಮಾರಸ್ವಾಮಿ ಅವರ ಸರಕಾರ ಬೇಕೆ ಎಂಬುದನ್ನು ಜನರು ನಿರ್ಧರಿಸಬೇಕು ಎಂದರು.

ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್‌ ಸದಸ್ಯ ಸಿ.ಎನ್‌. ಮಂಜೇಗೌಡ, ವರುಣ ಕ್ಷೇತ್ರ ಮುಖಂಡ ಅಭಿಷೇಕ್‌ , ಮಾಜಿ ಶಾಸಕರಾದ ಅಶ್ವಿನ್‌ ಕುಮಾರ್‌, ಕೆ.ಮಹದೇವ್‌, ಜೆಡಿಎಸ್‌ ನಗರಾಧ್ಯಕ್ಷ ಎಸ್‌.ಬಿ.ಎಂ. ಮಂಜು, ಮಾಜಿ ಮೇಯರ್‌ ಎಂ.ಜೆ. ರವಿಕುಮಾರ್‌, ಮೈಮುಲ್‌ ಮಾಜಿ ಅಧ್ಯಕ್ಷ ಪ್ರಸನ್ನ ಕುಮಾರ್‌, ಮುಖಂಡರಾದ ಬೆಳಚಾಡಿ ಶಿವಮೂರ್ತಿ, ಕೃಷ್ಣನಾಯಕ್‌ ಹಾಗೂ ಇತರರು ಇದ್ದರು.



Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News