×
Ad

ಬಿಎಲ್ಒಗಳ ಒತ್ತಡ ಕಡಿಮೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ : ಸಚಿವ ಯತೀಂದ್ರ ಸಿದ್ದರಾಮಯ್ಯ

Update: 2026-07-07 19:55 IST

ಮೈಸೂರು : ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿ ಬಿಎಲ್‌ಒಗಳಿಗೆ ಹೇರಿರುವ ಒತ್ತಡವನ್ನು ಕಡಿಮೆ ಮಾಡಲು ಚುನಾವಣಾ ಆಯೋಗಕ್ಕೆ ಮನವಿ ಸಲ್ಲಿಸಲಾಗುವುದು ಎಂದು ನಗರಾಭಿವೃದ್ದಿ ಹಾಗು ಮೈಸೂರು ಜಿಲ್ಲಾ ಉಸ್ತುವಾರಿ ಸಚಿವ ಡಾ.ಯತೀಂದ್ರ ಸಿದ್ದರಾಮಯ್ಯ ಹೇಳಿದರು.

ನಗರದ ಕಾಂಗ್ರೆಸ್‌ ಭವನದಲ್ಲಿ ಮಂಗಳವಾರ ಮತದಾರರ ಪಟ್ಟಿ ವಿಶೇಷ ಪರಿಷ್ಕರಣೆ(ಎಸ್‌ಐಆರ್‌) ಸಂಬಂಧ ನಡೆದ ತುರ್ತು ಸಭೆಯಲ್ಲಿ ಭಾಗವಹಿಸಿ ಮಾತನಾಡಿದರು.

ಬಿಎಲ್‌ಒಗಳು ಒಂದು ತಿಂಗಳಿಗೆ 1500 ಮಂದಿಯ ಪರಿಷ್ಕರಣೆ ಮಾಡಬೇಕಿದ್ದು, ದಿನಕ್ಕೆ 50 ಮಂದಿಯ ಪರಿಷ್ಕರಣೆ ಮಾಡಬೇಕೆಂದು ಟಾರ್ಗೆಟ್‌ ನೀಡಲಾಗಿದೆ. ದಿನವಿಡೀ ಕೆಲಸ ಮಾಡಿದರೂ ಇಷ್ಟು ಮಂದಿಯ ಮತದಾನ ಪಟ್ಟಿ ಪರಿಷ್ಕರಣೆಯನ್ನು ಕೇವಲ ಒಂದು ತಿಂಗಳಲ್ಲಿ ಮಾಡಲು ಸಾಧ್ಯವಿಲ್ಲ. ಈ ಹಿನ್ನಲೆಯಲ್ಲಿ 1500 ಮಂದಿಯ ಬದಲಿಗೆ 1000 ಮಂದಿಯ ಮತದಾರರ ಪಟ್ಟಿಯನ್ನು ಪರಿಷ್ಕರಣೆಗೊಳಿಸಲು ಸಿಮೀತಗೊಳಿಸಲು ಮನವಿ ಸಲ್ಲಿಸಲಾಗುವುದು ಎಂದರು.

ಮತದಾರರ ಪಟ್ಟಿ ಪರಿಷ್ಕರಣೆ ಮಾಡುವ ಬಿಎಲ್‌ಒಗಳಿಗೆ ಕನಿಷ್ಠ ಐದು ಮಂದಿ ಸಹಾಯಕರು ಇದ್ದರೆ ಅನುಕೂಲವಾಗಲಿದೆ. ಈ ಹಿನ್ನಲೆಯಲ್ಲಿ ಬಿಎಲ್‌ಒಗಳಿಂದ ಮತದಾರರಿಗೆ ನೀಡಲಾಗುವುದು ಅರ್ಜಿಯನ್ನು ಯಾವುದೇ ಲೋಪವಿಲ್ಲದಂತೆ ಭರ್ತಿ ಮಾಡಿ ಮತ್ತೇ ಸಲ್ಲಿಸಲು ಮತದಾರರಿಗೆ ಪಕ್ಷದ ಕಾರ್ಯಕರ್ತರು ನೆರವಾಗಬೇಕು ಎಂದರು.

ಕೇಂದ್ರ ಸರಕಾರವು ಚುನಾವಣಾ ಆಯೋಗದ ಮೂಲಕ ಮತದಾರರ ಪಟ್ಟಿಯಲ್ಲಿರುವ ಮತದಾರರ ಹೆಸರನ್ನು ಕೈ ಬಿಡಲು 11 ಕ್ಯಾತೆಗಳನ್ನು ಗುರುತು ಮಾಡಿಕೊಂಡಿದೆ. ಹೆಸರು ವ್ಯತ್ಯಾಸವಾದರೂ ಸಹ ಪಟ್ಟಿಯಿಂದ ಹೆಸರು ಕೈ ಬಿಟ್ಟು ಹೋಗಲಿದೆ,ಆದ್ದರಿಂದ ಈ ಬಗ್ಗೆ ಎಚ್ಚರಿಕೆ ವಹಿಸಬೇಕು ಎಂದರು.

ಸಭೆಯಲ್ಲಿ ಶಾಸಕ ಕೆ.ಹರೀಶ್‌ ಗೌಡ, ಜಿಲ್ಲಾಧ್ಯಕ್ಷ ಡಾ.ಬಿ.ಜೆ.ವಿಜಯ್‌ ಕುಮಾರ್‌, ನಗರಾಧ್ಯಕ್ಷ ಆರ್‌.ಮೂರ್ತಿ, ಕೆಪಿಸಿಸಿ ವಕ್ತಾರ ಎಂ.ಲಕ್ಷ್ಮಣ್‌, ಮಾಜಿ ಶಾಸಕ ಎಂ.ಕೆ.ಸೋಮಶೇಖರ್‌, ಮಾಜಿ ಮೇಯರ್‌ ಪುಷ್ಪಲತಾ ಚಿಕ್ಕಣ್ಣ, ಆನಂದ್‌, ಈಶ್ವರ್‌ ಚಕ್ಕಡಿ, ಕೂರ್ಗಳ್ಳಿ ಮಹದೇವು ಇದ್ದರು.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News