Mysuru | ರೈಲ್ವೆ ನೇಮಕಾತಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಅಂಗವಿಕಲನಂತೆ ಬಿಂಬಿಸಿ ಪರೀಕ್ಷೆ ಬರೆಯಲು ಯತ್ನಿಸಿದ ಮೂವರ ಬಂಧನ

Update: 2026-08-10 17:58 IST

ಸಾಂದರ್ಭಿಕ ಚಿತ್ರ

ಮೈಸೂರು : ರೈಲ್ವೆ ನೇಮಕಾತಿ ಮಂಡಳಿ ನಡೆಸಿದ ಪರೀಕ್ಷೆಯಲ್ಲಿ ಅಂಗವಿಕಲ ಅಭ್ಯರ್ಥಿಯಂತೆ ಬಿಂಬಿಸಿಕೊಂಡು ಪರೀಕ್ಷೆ ಬರೆಯಲು ಯತ್ನಿಸಿದ ಆರೋಪದ ಮೇಲೆ ಮೂವರನ್ನು ಬಂಧಿಸಿರುವುದಾಗಿ ಹೆಬ್ಬಾಳ ಪೊಲೀಸರು ತಿಳಿಸಿದ್ದಾರೆ.

ಸುಳ್ಳು ವೈದ್ಯಕೀಯ ಪ್ರಮಾಣಪತ್ರ ಸಲ್ಲಿಸಿ ಬರಹ ಸಹಾಯಕರ ಪರೀಕ್ಷೆ ಬರೆಯಲು ಬಂದಿದ್ದ ರಾಜಸ್ಥಾನದ ದೌಸಾ ನಿವಾಸಿ ವಿಕಾಸ್ ಮೀನ, ಜೈಪುರ ನಿವಾಸಿ ವಿಜಯ್ ಮೀನ ಹಾಗೂ ಬಿಹಾರದ ಸಾರಣ್ ಜಿಲ್ಲೆಯ ಪಿಪ್ರಾ ನಿವಾಸಿ ಸುಮಿತ್ ಕುಮಾರ್ ಸಿಂಗ್ ಬಂಧಿತರು. ಹೆಬ್ಬಾಳ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆ.6ರಂದು ಹೆಬ್ಬಾಳದ ಐಯಾನ್ ಡಿಜಿಟಲ್ ನ (ಐಡಿಝಡ್) ಪರೀಕ್ಷಾ ಕೇಂದ್ರದಲ್ಲಿ ಪರೀಕ್ಷೆ ನಡೆದಿತ್ತು. ವಿಕಾಸ್ ಗಾಯದ ಕಾರಣ ನೀಡಿ, ತಮ್ಮ ಪರವಾಗಿ ಪರೀಕ್ಷೆ ಬರೆಯಲು ಸುಮಿತ್ ಕುಮಾ‌ರ್ ಸಿಂಗ್‌ ನನ್ನು ಕರೆತಂದಿದ್ದನು. ಆದರೆ ಅವರು ನೀಡಿದ ವೈದ್ಯಕೀಯ ಪ್ರಮಾಣಪತ್ರದ ಬಗ್ಗೆ ಅನುಮಾನಗೊಂಡು ಅಧಿಕಾರಿಗಳು ವಿಚಾರಣೆ ನಡೆಸಿದಾಗ, ಸತ್ಯ ಹೊರಬಿದ್ದಿದೆ.

ಬರಹ ಸಹಾಯಕನಾಗಿ ಪರೀಕ್ಷೆ ಬರೆಯಲು ನನಗೆ ರೂ.6 ಸಾವಿರ ನೀಡಲಾಗಿತ್ತು ಎಂದು ಸುಮಿತ್ ವಿಚಾರಣೆ ವೇಳೆ ಹೇಳಿಕೆ ನೀಡಿದ್ದಾನೆ. ನನ್ನ ಪರವಾಗಿ ಪರೀಕ್ಷೆ ಬರೆಯಲು ವ್ಯವಸ್ಥೆ ಮಾಡಿಕೊಡಲು ಜೈಪುರದ ವಿಜಯ್ ಮೀನ ನನ್ನಿಂದ ರೂ. 50 ಸಾವಿರ ಪಡೆದಿದ್ದರು ಎಂದು ವಿಕಾಸ್ ತಿಳಿಸಿದ್ದಾನೆ ಎಂಬುದಾಗಿ ಪೊಲೀಸ್ ಮೂಲಗಳು ಹೇಳಿವೆ.

Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ವಾರ್ತಾಭಾರತಿ

contributor

Similar News