ಮೈಸೂರು: ಟಿ.ನರಸೀಪುರದ ಶಾಂತಿ-ಸೌಹಾರ್ದತೆಗೆ ಧಕ್ಕೆ ತರುತ್ತಿರುವ ಆರೆಸ್ಸೆಸ್‌-ಬಿಜೆಪಿ ಕೋಮು ಶಕ್ತಿಗಳ ವಿರುದ್ಧ ಕಾನೂನು ಕ್ರಮ ಹಾಗೂ ಸಂವಿಧಾನ ಆಶಯಗಳ ಉಳಿವಿಗಾಗಿ ದಲಿತ, ರೈತ, ಕಾರ್ಮಿಕ, ಮಹಿಳಾ ಹಾಗೂ ಪ್ರಗತಿಪರ ಸಂಘಟನೆಗಳಿಂದ ಶುಕ್ರವಾರ ಬೃಹತ್ ಶಕ್ತಿ ಪ್ರದರ್ಶನ ನಡೆಸಲಾಯಿತು.

ಪಟ್ಟಣದ ಭಗವಾನ್ ಚಿತ್ರಮಂದಿರದಲ್ಲಿ ಜಮಾವಣೆಗೊಂಡ ಸಾವಿರಾರು ಪ್ರತಿಭಟನಾಕಾರರು, ಕಾಲ್ನಡಿಗೆ ಜಾಥಾ ನಡೆಸಿ ಮಾಜಿ ಸಂಸದ ಪ್ರತಾಪ್ ಸಿಂಹ, ಆರೆಸ್ಸೆಸ್‌, ಬಿಜೆಪಿ ಮತ್ತು ಕೋಮು ಶಕ್ತಿಗಳ ವಿರುದ್ಧ ಘೋಷಣೆ ಕೂಗಿ ಶಾಂತಿ-ಸೌಹಾರ್ದತೆ-ಸಹಬಾಳ್ವೆಗೆ ಕರೆ ನೀಡಿದರು.

ಮಸೀದಿ ರಸ್ತೆ, ಲಿಂಕ್ ರಸ್ತೆ, ಬಸ್ ನಿಲ್ದಾಣ ರಸ್ತೆ ಮೂಲಕ ಮೆರವಣಿಗೆಯಲ್ಲಿ ಸಾಗಿ ನಂಜನಗೂಡು ರಸ್ತೆಯಲ್ಲಿರುವ ಎಪಿಎಂಸಿ ಆವರಣದಲ್ಲಿ ಆಯೋಜಿಸಿದ್ದ ಸಮಾವೇಶದಲ್ಲಿ ಭಾಗವಹಿಸಿದರು.

ಸೆ.18 ರಂದು ಗಣಪತಿ ವಿಸರ್ಜನೆ ವೇಳೆ ನೀಲಿ ಶಾಲು ಮತ್ತು ದಸಂಸದ ಬಗ್ಗೆ ಮಾತನಾಡಿದ್ದ ಮಾಜಿ ಸಂಸದ ಪ್ರತಾಪ್ ಸಿಂಹ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರು, ಪ್ರತಾಪ್ ಸಿಂಹ ಅವರನ್ನು ಕೂಡಲೇ ಬಂಧಿಸುವಂತೆ ಒಕ್ಕೋರಲಿನಿಂದ ಆಗ್ರಹಿಸಿದರು.

ʼಸಮಾಜದಲ್ಲಿ ಯಾರೇ ಬೆಂಕಿ ಹಚ್ಚುವ ಕೆಲಸಕ್ಕೆ ಮುಂದಾದರೂ ಅಲ್ಲಿಗೆ ದಲಿತರು ಬರುತ್ತಾರೆ. ನೀಲಿ ಶಾಲುಗಳು ಬರುತ್ತವೆʼ ಎಂದು ಪ್ರಗತಿಪರ ಚಿಂತಕ ಇಂಧೂದರ ಹೊನ್ನಾಪುರ, ಮಾಜಿ ಸಂಸದ ಪ್ರತಾಪ್‌ ಸಿಂಹಗೆ ತಿರುಗೇಟು ನೀಡಿದರು.

ಪ್ರತಾಪ್ ಸಿಂಹ ಅವರು ದಸಂಸ ಮತ್ತು ನೀಲಿ ಶಾಲಿನ ಬಗ್ಗೆ ಮಾತನಾಡಿರುವುದು ನೋವುಂಟು ಮಾಡಿದೆ. ಒಬ್ಬ ಪತ್ರಕರ್ತ, ಸಂಸದರಾಗಿದ್ದವರಿಗೆ ಯಾಕೆ ಇಂತಹ ದುಸ್ಥಿತಿ, ದುರ್ಬುದ್ಧಿ ಬಂತು ಎಂದು ಅರ್ಥ ಆಗುತ್ತಿಲ್ಲ, ಇವರನ್ನು ಇನ್ನೂ ಬಂಧಿಸದಿರುವುದು ಖಂಡನೀಯ ಎಂದು ಹೇಳಿದರು.

ಸಮಾಜದಲ್ಲಿ ಬೆಂಕಿ ಹಚ್ಚಿ ಬದುಕು ಕಟ್ಟಿಕೊಳ್ಳುವ ಕೆಲಸವನ್ನು ವೈದಿಕರು ಮಾಡುತ್ತಿದ್ದಾರೆ. ಅಂತಹ ವೈದಿಕ ಶಾಹಿಗಳ ವಿರುದ್ಧ ನಿಂತಿರುವುದೇ ನೀಲಿ ಶಾಲುಗಳು, ಇದನ್ನು ಪ್ರತಾಪ್ ಸಿಂಹ ಅರ್ಥ ಮಾಡಿಕೊಳ್ಳಬೇಕು ಎಂದು ಹೇಳಿದರು.

ಸಮಾಜದಲ್ಲಿ ಬೆಂಕಿ ಹಚ್ಚಲು ಮುಂದಾಗಿರುವ ಪ್ರತಾಪ್ ಸಿಂಹ ರಂತಹ ಪುಂಡರನ್ನು ಮಟ್ಟಹಾಕಲು ಯಾಕೆ ಸರ್ಕಾರ ಮುಂದಾಗುತ್ತಿಲ್ಲ? ಸಂವಿಧಾನದತ್ತ ಕಾನೂನನ್ನು ಪಾಲನೆ ಮಾಡಿ ಪೊಲೀಸರಿಗೆ ಮುಕ್ತ ಅವಕಾಶ ನೀಡಿ ಇಂತಹ ಪುಂಡರನ್ನು ಮಟ್ಟಹಾಕಬೇಕು ಎಂದು ಒತ್ತಾಯಿಸಿದರು.

ಸಮಾರಂಭದ ಅಧ್ಯಕ್ಷತೆ ವಹಿಸಿ ದಸಂಸ ರಾಜ್ಯ ಸಂಚಾಲಕ ಗುರುಪ್ರಸಾದ್ ಕೆರಗೋಡು ಮಾತನಾಡಿ, ಪ್ರತಾಪ್ ಸಿಂಹ, ಅನಂತಕುಮಾರ್ ಹೆಗಡೆ ಬಿಜೆಪಿ ಪಕ್ಷಕ್ಕೆ ಮುಳುವಾದ ವ್ಯಕ್ತಿಗಳು, ಇವರ ಹೇಳಿಕೆಗಳು ಬಿಜೆಪಿ ಪಕ್ಷಕ್ಕೆ ಹಿನ್ನಡೆ. ಈಗಾಗಲೇ ಅನಂತ ಕುಮಾರ್ ಹೆಗಡೆ ಸಂವಿಧಾನದ ಬಗ್ಗೆ ಮಾತನಾಡಿ ಮನೆ ಸೇರಿದ್ದಾರೆ. ಪ್ರತಾಪ್ ಸಿಂಹ ಕೂಡ ಒಂದು ರೀತಿಯಲ್ಲಿ ಮನೆಗೆ ಸೇರಿದ ಹಾಗೆಯೇ ಆಗಿದೆ. ಸಮಾಜದಲ್ಲಿ ಬೆಂಕಿ ಹಚ್ಚಿಸುವ ರೀತಿ ಮಾತನಾಡಿದರೆ ಮುಂದೆ ಬಿಜೆಪಿ ಟಿಕೆಟ್ ಸಿಗಬಹುದೇನೊ ಎಂದು ಮಾತನಾಡುತ್ತಿದ್ದಾರೆ. ಟಿಕೆಟ್ ಕೊಟ್ಟು ನೋಡಲಿ ಆಗ ನಾವು ಏನು ಎಂದು ತೋರಿಸುತ್ತೇವೆ ಎಂದು ಹೇಳಿದರು.

ಕಾರ್ಯಕ್ರಮ ಸಂಪೂರ್ಣ ಜವಾಬ್ದಾರಿಯನ್ನು ದಸಂಸ ಜಿಲ್ಲಾ ಸಂಚಾಲಕ ಆಲಗೋಡು ಶಿವಕುಮಾರ್ ವಹಿಸಿದ್ದರು.

ಸಮಾವೇಶದಲ್ಲಿ ದಸಂಸ ರಾಜ್ಯ ಸಂಚಾಲಕರಾದ ಮಾವಳ್ಳಿ ಶಂಕರ್, ಡಿ.ಜಿ.ಸಾಗರ್, ಗುರುಪ್ರಸಾದ್ ಕೆರಗೋಡು, ಹರಿಹರ ಆನಂದಸ್ವಾಮಿ, ಇಂಧೂದರ ಹೊನ್ನಾಪುರ, ಜೀವನಹಳ್ಳಿ ವೆಂಕಟೇಶ್, ಎನ್.ಮುನಿಸ್ವಾಮಿ, ಮಾಜಿ ಮೇಯರ್ ಪುರುಷೋತ್ತಮ್, ಬೆಟ್ಟಯ್ಯ ಕೋಟೆ, ಚೋರನಹಳ್ಳಿ ಶಿವಣ್ಣ, ರೈತ ಸಂಘದ ಬಡಗಲಪುರ ನಾಗೇಂದ್ರ, ಸಂವಿಧಾನ ಸಂರಕ್ಷಣಾ ಹೋರಾಟ ಸಮಿತಿ ರಾಜ್ಯಾಧ್ಯಕ್ಷ ಎನ್.ಭಾಸ್ಕರ್, ಸಿಪಿಎಂ ಎಚ್.ಬಿ.ರಾಮಕೃಷ್ಣಪ್ಪ, ಹೊಸಕೋಟೆ ಬಸವರಾಜು, ಶಂಭುಲಿಂಗಸ್ವಾಮಿ, ಸಿಐಟಿಯು ಎನ್.ಕೆ.ದೇವದಾಸ್, ಲತಾ ಮೈಸೂರು, ಮಲ್ಲೇಶ್ ಚುಂಚನಹಳ್ಳಿ, ಮಲ್ಲಹಳ್ಳಿ ನಾರಾಯಣ, ಬನ್ನಹಳ್ಳಿ ಸೋಮಣ್ಣ, ಬುಗತಹಳ್ಳಿ ಮಣಿಯಯ್ಯ, ಉಮಾ ಮಹದೇವ್, ಪ್ರಗತಿಪರರಾದ  ನರಸಿಂಹೇಗೌಡ, ಕಾಳಚನ್ನೇಗೌಡ, ಸವಿತಾ ಮಲ್ಲೇಶ್.,ಅನೂಷ, ದಲಿತ ಸಂಘರ್ಷ ಸಮಿತಿ ಕಲ್ಲಹಳ್ಳಿ ಕುಮಾರ್ ಸೇರಿದಂತೆ ಹಲವರು ಭಾಗವಹಿಸಿದ್ದರು.



 


Tags:    

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Byline - ನೇರಳೆ ಸತೀಶ್ ಕುಮಾರ್

contributor